ಜಿಲ್ಲೆ

ಇಂದು, ನಾಳೆ ಮನೆಯಿಂದ ಹೊರಬರಬೇಡಿ

ಧಾರವಾಡ: ಕರೊನಾ ವೈರಸ್ ಹರಡುವಿಕೆ ನಿಯಂತ್ರಣದ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 6 ಗಂಟೆಯಿಂದ ಸೋಮವಾರ ಬೆಳಗ್ಗೆ 6ರವರೆಗೆ ಸಂಪೂರ್ಣ ಲಾಕ್​ಡೌನ್ ಘೊಷಿಸಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಮನವಿ ಮಾಡಿದ್ದಾರೆ.

ಶುಕ್ರವಾರ ಸಂಜೆ ಆನ್​ಲೈನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ದಿನಗಳಲ್ಲಿ ಬೆಳಗ್ಗೆ 6ರಿಂದ 8ರವರೆಗೆ ಮಾತ್ರ ಜನರು ತಮ್ಮ ಮನೆಗಳ ಬಳಿ ಹಾಲು, ಹಣ್ಣು ಮತ್ತು ತರಕಾರಿ ಖರೀದಿಸಲು ಅವಕಾಶವಿದೆ. ಆಸ್ಪತ್ರೆ, ಔಷಧ ಅಂಗಡಿಗಳು ಎಂದಿನಂತೆ ತೆರೆದಿರುತ್ತವೆ. ಸರಕು ವಾಹನ, ಸರ್ಕಾರಿ ವಾಹನ ಹಾಗೂ ಕೋವಿಡ್ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ, ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದರು.

ಆಹಾರ ಸಂಸ್ಕರಣಾ ಘಟಕಗಳು, ದಾಸ್ತಾನು ಇಟ್ಟರೆ ಕೊಳೆತುಹೋಗುವಂಥ ಸರಕಿಗೆ ಸಂಬಂಧಿಸಿದ ಘಟಕಗಳು ಮತ್ತು ಕೆಲವು ಕೈಗಾರಿಕೆಗಳು ಅಂದರೆ, ಕೋವಿಡ್ ನಿಯಂತ್ರಣ/ಆರೋಗ್ಯ ರಕ್ಷಣೆಗೆ ಸಂಬಂಧಪಟ್ಟ ವಸ್ತುಗಳ ಉತ್ಪಾದನಾ ಘಟಕಗಳು ಮಾತ್ರ ಕಾರ್ಯ ನಿರ್ವಹಿಸಲು ಅನುಮತಿ ಇದೆ. ಕಟ್ಟಡ ನಿರ್ವಣ, ಕಿರಾಣಿ ಅಂಗಡಿ, ಹೋಟೆಲ್ ಸೇರಿ ಉಳಿದ ಎಲ್ಲ ಚಟುವಟಿಕೆಗಳನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ ಎಂದರು.

ಕೃಷಿ ಚಟುವಟಿಕೆಗೆ ಪೂರಕ ವಾದ

ಬಿತ್ತನೆ ಬೀಜ, ರಸಗೊಬ್ಬರಗಳನ್ನು ರೈತರು ಬೆಳಗ್ಗೆ ಅನುಮತಿಸಿರುವ ಅವಧಿಯಲ್ಲಿ ತಮ್ಮ ಗ್ರಾಮ ಅಥವಾ ಸಮೀಪದ ಹೋಬಳಿ, ತಾಲೂಕು ಕೇಂದ್ರಗಳಲ್ಲಿ ಖರೀದಿಸಬೇಕು. ಸಮಯ ಮೀರಿ ಅನಗತ್ಯವಾಗಿ

ಸಂಚಾರ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಗ್ರಾಮ ಮಟ್ಟದಲ್ಲಿ ಕಾಳಜಿ ಕೇಂದ್ರಕ್ಕೆ ಸೂಚನೆ: ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಮತ್ತು ಅಗತ್ಯವಿದ್ದರೆ ಪ್ರತಿ ಗ್ರಾಮ ಮಟ್ಟದಲ್ಲಿ ಕೋವಿಡ್ ಕಾಳಜಿ ಕೇಂದ್ರಗಳನ್ನು ಆರಂಭಿಸಲು ಗ್ರಾಮ ಮಟ್ಟದ ಕೋವಿಡ್ ಕಾರ್ಯಪಡೆಗಳಿಗೆ ಸೂಚಿಸಲಾಗಿದೆ. ಅಲ್ಲಿ ಅಗತ್ಯವಿರುವಔಷಧ, ಆಹಾರ ಮತ್ತು ಇತರೆ ಸೌಲಭ್ಯಗಳನ್ನು ಜಿಲ್ಲಾಡಳಿತದಿಂದ ಪೂರೈಸ ಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹು-ಧಾ ಪೊಲೀಸ್ ಆಯುಕ್ತ ಲಾಭೂರಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಯಾವ್ಯಾವುದಕ್ಕೆ ಅನುಮತಿ

ಬೆಳಗ್ಗೆ 6ರಿಂದ 8ರವರೆಗೆ ಮಾತ್ರ ಹಾಲು, ಹಣ್ಣು, ತರಕಾರಿ ಖರೀದಿ

ಆಸ್ಪತ್ರೆ, ಔಷಧ ಅಂಗಡಿ

ಸರಕು ವಾಹನ, ಸರ್ಕಾರಿ ವಾಹನ, ಕೋವಿಡ್ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ವಾಹನ

ಮಾಧ್ಯಮದವರ ಸಂಚಾರ

ರೈತರು ಬೀಜ, ಗೊಬ್ಬರ ಖರೀದಿಸಲು ಬೆಳಗ್ಗೆ 8ರವರೆಗೆ

ರೈತರು ಮನೆಗೆ ಮರಳುವಾಗ ಬೀಜ, ಗೊಬ್ಬರ ಒಯ್ಯುತ್ತಿದ್ದರೆ ಅದೇ ಅನುಮತಿ ಪತ್ರ ಇದ್ದಂತೆ

ಆಹಾರ ಸಂಸ್ಕರಣಾ ಘಟಕ,

ಏನೇನು ಇರುವುದಿಲ್ಲ

ಸಾರಿಗೆ ಬಸ್, ಆಟೋ ಸೇರಿ ಖಾಸಗಿ ವಾಹನಗಳು

ಕಿರಾಣಿ ಅಂಗಡಿ, ಇತರ ಅಂಗಡಿಗಳು

ಹೋಟೆಲ್, ಬಾರ್, ಮದ್ಯ ಮಳಿಗೆಗಳು

ಪಾರ್ಸಲ್​ಗೂ ಅವಕಾಶವಿಲ್ಲ

ದಾನಕ್ಕೆ ಷರತ್ತುಬದ್ಧ ಒಪ್ಪಿಗೆ

ಭಿಕ್ಷುಕರು, ಆಸರೆ ಇಲ್ಲದವರು, ಲಾಕ್​ಡೌನ್​ದಲ್ಲಿ ಸಿಲುಕಿರುವ ಪರಸ್ಥಳದವರು ಸೇರಿ ತುರ್ತು ಇರುವವರಿಗೆ ಉಚಿತ ಊಟೋಪಚಾರ ಒದಗಿಸುವವರು ಹಾಗೂ ಬೀದಿ ನಾಯಿಗಳು, ಇತರ ಪ್ರಾಣಿಗಳಿಗೆ ಆಹಾರ ನೀಡುವವರು ತಮ್ಮ ಬಳಿ ಇರುವ ಆಹಾರ ಪೊಟ್ಟಣಗಳನ್ನು ಆಯಾ ಸ್ಥಳದಲ್ಲಿರುವ ಪೊಲೀಸರಿಗೆ ತೋರಿಸಿ ಅಥವಾ ನಿತ್ಯವೂ ನೆರವು ನೀಡುತ್ತಿರುವುದನ್ನು ಖಾತ್ರಿಪಡಿಸುವ ಫೋಟೊಗಳು ಮೊಬೈಲ್ ಫೋನ್​ನಲ್ಲಿದ್ದರೆ ತೋರಿಸಿ ಮೌಖಿಕ ಒಪ್ಪಿಗೆ ಪಡೆದುಕೊಳ್ಳಬಹುದು. ಸಾಮಗ್ರಿ ಹಂಚಿದ ನಂತರ ನಂತರ ಅದೇ ಮಾರ್ಗವಾಗಿ ವಾಪಸ್ ಬರುವುದಾಗಿಯೂ ಪೊಲೀಸರಿಗೆ ತಿಳಿಸಿರಬೇಕು. ಜಿಲ್ಲೆಯಲ್ಲಿ ಜನತಾ ಕರ್ಫ್ಯೂ ವೇಳೆಯಲ್ಲಿ ಪರಸ್ಥಳದವರು ವಸತಿಗೃಹಗಳಲ್ಲಿ ಉಳಿದುಕೊಂಡಿರುವ ಸಂಖ್ಯೆ ಬಹಳ ಕಡಿಮೆ ಅಥವಾ ಇಲ್ಲ. ಒಂದುವೇಳೆ ಯಾರಾದರೂ ಉಳಿದುಕೊಂಡಿದ್ದರೆ, ಸಂಬಂಧಪಟ್ಟವರೇ ಆಹಾರದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಜಿಲ್ಲಾದ್ಯಂತ ಸೂಕ್ತ ಬಂದೋಬಸ್ತ್

ಜಿಲ್ಲಾದ್ಯಂತ ವಾರಾಂತ್ಯ ಸಂಪೂರ್ಣ ಲಾಕ್​ಡೌನ್ ಘೊಷಿಸಲಾಗಿದ್ದು, ಪೊಲೀಸ್ ಇಲಾಖೆಯಿಂದ ಅಗತ್ಯ ಸಿಬ್ಬಂದಿ ನೇಮಿಸಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾ ವ್ಯಾಪ್ತಿಯ ಹಳ್ಳಿಗಳಲ್ಲಿ ಬಂದೋಬಸ್ತ್​ಗೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನೇಮಿಸಲಾಗಿದೆ. ಅನವಶ್ಯಕವಾಗಿ ತಿರುಗಾಡದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿದೆ. ಬಂದೋಬಸ್ತ್​ಗೆ 3 ಜನ ಡಿಎಸ್​ಪಿ, 4 ಜನ ಪಿಐ, 3 ಜನ ಪಿಎಸ್​ಐ ಹಾಗೂ ಸಿಬ್ಬಂದಿ ನೇಮಿಸಲಾಗಿದೆ. ಪ್ರತಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸಿಬ್ಬಂದಿ ಸಹಿತ ಬ್ಯಾರಿಕೇಡ್​ಗಳನ್ನು ಸೂಕ್ಷ್ಮ ಸ್ಥಳಗಳಲ್ಲಿ ಅಳವಡಿಸಲಾಗಿದೆ. ಹೆಚ್ಚುವರಿಯಾಗಿ 4 ಹೈವೇ ಪೆಟ್ರೋಲಿಂಗ್ ವಾಹನ ಮತ್ತು 9 ಡಿಎಆರ್ ತುಕಡಿಗಳನ್ನು ನೇಮಿಸಲಾಗಿದೆ. ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಜತೆಗೆ ಕರೊನಾ ತಡೆಗೆ ಸಹಕರಿಸಬೇಕು. ಅನವಶ್ಯಕವಾಗಿ ಪೊಲೀಸರ ಜತೆ ವಾದ ಮಾಡಬೇಡಿ. ಆದೇಶ ಪಾಲಿಸದೇ ಇದ್ದಲ್ಲಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆ 1897 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗ ನಿಯಮಾವಳಿ ಪ್ರಕಾರ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.