ಬಾಗಲಕೋಟೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವ ಹಿನ್ನಲೆಯಲ್ಲಿ ಭಾನುವಾರ ಅದ್ದೂರಿಯಾಗಿ ಪಥ ಸಂಚಲನ ನಡೆಯಲಿದ್ದು, ಆರ್‌ಎಸ್‌ಎಸ್ ಕೇಂದ್ರ ಸ್ಥಳ ನಾಗಪೂರ ನಂತರದಲ್ಲಿ ಹೆಚ್ಚು ಗಮನ ಸೆಳೆದಿರುವ ಹಾಗೂ ಪ್ರಸಿದ್ಧಿ ಪಡೆದಿರುವ ಬಾಗಲಕೋಟೆ ನಗರದ ಪಥ ಸಂಚಲನಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪಥ ಸಂಚಲನ ಮಾರ್ಗದೂದ್ದಕ್ಕೂ ಶುಭ, ಸ್ವಾಗತ ಕೋರುವ ಕೌಟೌಟಿಗಳು ಅಳವಡಿಸಲಾಗಿದ್ದು ರಾರಾಜಿಸುತ್ತಿವೆ. ಕೋಟೆನಗರಿ ಸಂಪೂರ್ಣ ಮಧುವನಗಿತ್ತಿಯಂತೆ ಶೃಂಗಾರಗೊಂಡಿದೆ. ಗಣವೇಷಧಾರಿಗಳನ್ನು ಸ್ವಾಗತಿಸಲು ಮಾರ್ಗ ಮಧ್ಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಪಥ ಸಂಚಲನಕ್ಕೆ ನಗರದ ಸಂಪೂರ್ಣ ಸಜ್ಜಾಗಿದ್ದು, ಹಬ್ಬದ ವಾತಾವರಣ ಸೃಷ್ಠಿಯಾಗಿದೆ.
ಪಥ ಸಂಚಲನ ಸಾಗುವ ಮಾರ್ಗದಲ್ಲಿ ಭಗಸಿಂಗ್, ವನಕೆ ಓಬವ್ವಾ, ಕಿತ್ತೂರಿ ರಾಣಿ ಚನ್ನಮ್ಮ, ಸಂಗೂಳ್ಳಿ ರಾಯಣ್ಣ ಸೇರಿದಂತೆ ನಾಡಿನ ವಿವಿಧ ಮಹನೀಯರ ವೇಷಧರಿಸಿ ಮಕ್ಕಳು ಕಂಗೂಳಿಸಲಿದ್ದಾರೆ. ಪುಷ್ಪ ವೃಷ್ಠಿ, ಘೋಷಣೆಗಳು ಪಥ ಸಂಚಲನದ ಗಮನ ಸೆಳೆಯಲಿದ್ದು, ಆರ್‌ಎಸ್‌ಎಸ್ ಹೊಸ ಮಾದರಿಯ ವಸö ಸಂಹಿತೆ ಅನುಸಾರ ಪ್ಯಾಂಟ್‌ಧರಿಸಿ ಪಥ ಸಂಚಲನ ನಡೆಯಲಿದೆ. ೧೬ ವರ್ಷಕ್ಕಿಂತ ಮೇಲ್ಪಟ್ಟವರು ಈ ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ.
ಅಂದಾಜು ೨ ಸಾವಿರದಿಂದ ೩ ಸಾವಿರ ಜನ ಗಣವೇಷಧಾರಿಗಳು ಭಾಗವಹಿಸಲಿದ್ದಾರೆ. ಬಸವೇಶ್ವರ ಮೈದಾನದಿಂದ ಸರಿಯಾಗಿ ಸಂಜೆ ೪ ಗಂಟೆಗೆ ಎರಡು ಪಥಗಳಲ್ಲಿ ಆರಂಭಗೊಳ್ಳುವ ಪಥಸಂಚಲನ ನಗರದ ಪ್ರಮುಖ ರಸ್ತೆಗಳನ್ನು ಸಂಚರಿಸಿ ೪.೫೫ಕ್ಕೆ ಮರಳಿ ಮೈದಾನ ತಲುಪಲಿದೆ. ಈ ನಡುವೆ ೪.೪೬ಕ್ಕೆ ಬಸವೇಶ್ವರ ವೃತ್ತದಲ್ಲಿ ಎರಡು ಪಥಗಳು ಸಮಾಗಮವಾಗಲಿದ್ದು, ಜಯ ಘೋಷಗಳು ಮುಗಿಲು ಮುಟ್ಟಲಿವೆ.
ಪಥ ಸಂಚಲನ ಪೂರ್ಣಗೊಂಡ ನಂತರ ೫:೨೦ ಕ್ಕೆ ಬಸವೇಶ್ವರ ಕಾಲೇಜು ಮೈದಾನದಲ್ಲಿ ಆರ್‌ಎಸ್‌ಎಸ್‌ನ ನಗರ ವಾರ್ಷಿಕೋತ್ಸವದ ಬಹಿರಂಗ ಕಾರ್ಯಕ್ರಮ ಜರುಗಲಿದ್ದು. ಧಾರವಾಡ ಗುರುಕುಲ ಕಡಿಯರ್ ಅಕಾಡೆಮಿ ನಿರ್ದೇಶಕ ನಾಗನಗೌಡ ಮೇಲಗಿರಿಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಕಾರ್ಯವಾಹ ನಾ.ತಿಪ್ಪೆಸ್ವಾಮಿ ಮುಖ್ಯ ಭಾಷಣ ಮಾಡಲಿದ್ದಾರೆ.
ಪಥ ಸಂಚಲನ ಸಾಗುವ ಮಾರ್ಗದಲ್ಲಿ ಪುಠಾಣಿ ಮಕ್ಕಳು ದೇಶಭಕ್ತರು, ಧಾರ್ಮಿಕ ಮುಖಂಡರು, ಸ್ವಾತಂತ್ರ‍್ಯಯೋಧರು ಸೇರಿದಂತೆ ಮಹನೀಯರ ವೇಷಭೂಷಣ ಧರಿಸಿ ಗಣವೇಶಧಾರಿ ಸ್ವಯಂ ಸೇವಕರನ್ನು ಸ್ವಾಗತಿಸಿಕೊಳ್ಳುವುದು ಹಾಗೂ ಪುಷ್ಪ ವೃಷ್ಠಿ, ಘೋಷಣೆಗಳು ಪಥ ಸಂಚಲನದ ವೇಳೆ ಕಂಡು ಬರುವ ಪ್ರಮುಖ ಆಕರ್ಷಣೆಗಳು.
ಆರ್‌ಎಸ್‌ಎಸ್ ಪಥ ಸಂಚಲನ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಬಾಗಲಕೋಟೆ ನಗರದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಕೈಗೊಂಡಿದೆ. ಎಸ್ಪಿ , ಡಿವೈಎಸ್ಪಿ , ಸಿಪಿಐ , ಪಿಎಸ್‌ಐ , ಎಎಸ್‌ಐ, ಹೆಡ್‌ಕಾನ್ಸಟೆಬಲ್ ಮತ್ತು ಪೊಲೀಸರು ಸೇರಿ ೬೦೦, ಡಿಆರ್ ತುಕುಡಿ ೩, ಕೆಎಸ್‌ಆರ್‌ಪಿ ೩, ಹೋಮ್ ಗಾರ್ಡ್ಸ್ ೩೦೦ ಕ್ಕೂ ಜನರನ್ನು ನಿಯೋಜನೆ ಮಾಡಲಾಗಿದೆ.