ಜಿಲ್ಲೆ

ಇಂದು ಆನೇಕಲ್ ಕರಗ, ಹಲವಾರು ವೈಶಿಷ್ಟ್ಯಗಳಿಗೆ ಸಾಕ್ಷಿ 18 ದಿನ ಉತ್ಸವ

ಆನೇಕಲ್: ಪುರಾಣ ಪ್ರಸಿದ್ಧ ದ್ರೌಪದಮ್ಮ ದೇವಿಯ ಕರಗ ಉತ್ಸವ ಏ.16ರಂದು ರಾತ್ರಿ ಆರಂಭಗೊಳ್ಳಿಲಿದ್ದು, 18 ದಿನ ನಡೆಯಲಿದೆ.

ಎಲ್ಲೆಡೆ ಹಸಿಕರಗ (ಹೂವಿನ ಕರಗ) ನಡೆದರೆ, ಆನೇಕಲ್‌ನಲ್ಲಿ ಹಸಿಕರಗದ ಜತೆ ಒಣಕರಗ ಆಯೋಜಿಸುವುದು ವಿಶೇಷ.

ಪಟ್ಟಣದ ಧರ್ಮರಾಯಸ್ವಾಮಿ ದೇವಾಲಯದಲ್ಲಿನ ದ್ರೌಪದಿ ದೇವಿ ಕರಗ ಮಹೋತ್ಸವ 400 ವರ್ಷ ಇತಿಹಾಸವುಳ್ಳದ್ದು. ಅಲ್ಲದೇ ಧಾರ್ಮಿಕ ವಿಧಿ ವಿಧಾನಗಳಿಗೆ ನಾಡಿನಲ್ಲೇ ಹೆಸರುವಾಸಿಯಾಗಿ, ಹಲವಾರು ವೈಶಿಷ್ಟ್ಯಗಳಿಂದ ಕೂಡಿದೆ. ಬೇರೆಲ್ಲೂ ಕಾಣಸಿಗದ ಅಪರೂಪದ ಆಚರಣೆ ಇಲ್ಲಿ ನೋಡಬಹುದು.

ಹಸಿಕರಗ ಹಾಗೂ ಒಣಕರಗದ ಜತೆ ಅಭಿಮನ್ಯು ಪದ್ಮವ್ಯೆಹ ಭೇದಿಸುವ ಕೋಟೆ ಜಗಳ ಹೆಸರುವಾಸಿಯಾಗಿದೆ. ಆವೇಶ ಬಂದ ವ್ಯಕ್ತಿ ಬಲಿ ಕೊಟ್ಟ ಮೇಕೆಯ ಶ್ವಾಸಕೋಶವನ್ನು ಬಾಯಲ್ಲಿ ಕಚ್ಚಿ ನೆರದ ಭಕ್ತರ ತಲೆಯ ಮೇಲೆ ಪೊರಕೆ ಹಾಗೂ ಮೊರ(ಗೆರಸಿ)ದಿಂದ ಹೊಡೆಯುವುದು ವಿಶೇಷ. 18 ದಿನ ಶಾಸ್ತೋಕ್ತವಾಗಿ ಈ ಉತ್ಸವ ನಡೆಯಲಿದೆ.

ಹಸಿಕರಗ: ಹಸಿ ಕರಗದಂದು ಕುಂಬಾರರ ಮನೆಯಿಂದ ತರುವ ಕಳಸವನ್ನು ಚಿಕ್ಕಕೆರೆ ಕಲ್ಯಾಣಿಗೆ ತೆಗೆದುಕೊಂಡು ಹೋಗಿ ಗಂಗಾಪೂಜೆ ನಡೆಸಿ ಪವಿತ್ರ ಜಲ ತುಂಬಿ ತರುವ ‘ಜಲ್ದಿ ಕರಗ’ಕ್ಕೆ ಗರ್ಭಗುಡಿಯಲ್ಲಿ ಗುಪ್ತವಾಗಿ ಪೂಜೆ ಮಾಡಲಾಗುತ್ತದೆ. ನಂತರ ಅಲಂಕೃತಗೊಂಡ ಕಳಸದಲ್ಲಿ ದೇವಿಯನ್ನು ಪ್ರಾರ್ಥಿಸಿ ಹಲವಾರು ತಮಿಳು ಮಿಶ್ರಿತ ಮಂತ್ರಗಳಿಂದ ಸ್ತುತಿಸಿ ಅರ್ಚಿಸಲಾಗುತ್ತದೆ.

ಒಣ ಕರಗ: ಕೋಟೆ ಜಗಳದ ಮರುದಿನ ನಡೆಯುವುದೇ ಒಣ ಕರಗ. ಈ ಉತ್ಸವದ ದಿನವೂ ಕರಗಕ್ಕೆ ಸುಗಂಧ ಬೀರುವ ಮಲ್ಲಿಗೆ ಹೂವನ್ನು ಜೋಡಿಸಲಾಗುತ್ತದೆ. ಆದರೂ ಈ ಉತ್ಸವವನ್ನು ಒಣಕರಣ ಎನ್ನಲಾಗುತ್ತದೆ. ಕಾರಣ ಜಲ್ದಿ ಕರಗದಂದು ಕುಡಿಕೆ(ಹಸಿಕರಗ)ಯಲ್ಲಿ ತಂದಿಟ್ಟ ನೀರಿನ ಪ್ರಮಾಣ ನಾಲ್ಕು ದಿನಗಳ ನಂತರ ಕಡಿಮೆಯಾಗುವುದರಿಂದ ಒಣಕರಗ ಎನ್ನಲಾಗುತ್ತದೆ. ಈ ಕರಗ ಏ.19ರಂದು ರಾತ್ರಿ ಆಯೋಜಿಸಲಾಗಿದೆ.

ಈ ಉತ್ಸವವೂ ಮಧ್ಯರಾತ್ರಿಯೇ ಹೊರಬರುವುದು. ಉತ್ಸವ ಹೊರಬರುವ ಮೊದಲು ಸಂತೆ ಮಾಳದಲ್ಲಿ ಅಗ್ನಿಕುಂಡ ಹಾಕಲಾಗುತ್ತದೆ. ಮಧ್ಯರಾತ್ರಿ ಕರಗ ಹೊತ್ತ ವ್ಯಕ್ತಿ ದೇವಾಲಯದಿಂದ ನೇರ ಸಂತೆಮಾಳದಲ್ಲಿ ಹರಡುವ ಬೆಂಕಿ ಕೆಂಡದ ಬಳಿ ಬರುತ್ತಾನೆ. ಇಲ್ಲಿ ಮತ್ತೊಂದು ವಿಶೇಷ ಆಚರಣೆ ನಡೆಯುತ್ತದೆ. ಸಾಮಾನ್ಯವಾಗಿ ಶಕ್ತಿದೇವತೆಗಳಿಗೆ ಅರಿಶಿಣ, ಕುಂಕುಮ, ಬಿಚ್ಚೋಲೆ, ಅಕ್ಕಿ, ವಸ್ತ್ರದಿಂದ ಮಡಿಲು ತುಂಬುತ್ತಾರೆ. ಆದರೆ ಇಲ್ಲಿಗೆ ಬರುವ ಕರಗಕ್ಕೆ ಬೆಂಕಿಯ ಕೆಂಡದಿಂದ ಮಡಿಲು ತುಂಬಲಾಗುತ್ತದೆ. ಕರಗ ಅಗ್ನಿಗೊಂಡದ ಬಳಿ ಬಂದು ಪ್ರದಕ್ಷಿಣೆ ಹಾಕುತ್ತಿದ್ದಂತೆ, ನಿರ್ದಿಷ್ಟ ವ್ಯಕ್ತಿ ಅರಿಶಿಣ ಸವರಿದ ಬಟ್ಟೆಯಲ್ಲಿ ಬೆಂಕಿ ಕೆಂಡಗಳನ್ನು ತೆಗೆದುಕೊಂಡು ದೇವಿಗೆ ಮಡಿಲು ತುಂಬುತ್ತಾನೆ.

ಈ ಹಿಂದೆ ಕರಗ ಹೊತ್ತ ವ್ಯಕ್ತಿ ಉಟ್ಟ ರೇಷ್ಮೆ ಸೀರೆಗೆ ನೇರ ಸಲಿಕೆಯಿಂದ ಬೆಂಕಿಯ ಕೆಂಡ ಹಾಕಲಾಗುತ್ತಿತ್ತು. ಪವಾಡವೆಂದರೆ ಸೀರೆ ಕಿಂಚಿತ್ತು ಸುಡುತ್ತಿರಲಿಲ್ಲ. ವಾಹಕ ಮೂರು ಬಾರಿ ಮಡಿಲಿಗೆ ಕೆಂಡ ಹಾಕಿಸಿಕೊಂಡು, ಕೆಳಗೆ ಚೆಲ್ಲುತ್ತಿದ್ದ. ದಶಕಗಳಿಂದೀಚೆಗೆ ಈ ಪದ್ಧತಿ ನಿಂತು ಹೋಗಿದೆ. ಬದಲಿಗೆ ಕೆಂಡ ತೋರಿಸಿ ಕೆಳಗೆ ಹಾಕಲಾಗುತ್ತಿದೆ ಎನ್ನುತ್ತಾರೆ ಊರಿನ ಹಿರಿಯರು.