ಮೈಸೂರು: ಇಡೀ ದೇಶದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದ್ದು, ಇಂದಿರಾಗಾಂಧಿ ಅವರ ಕಾಲದ ಗತವೈಭವ ಮರುಕಳಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಗೃಹಲಕ್ಷ್ಮಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಬುಧವಾರ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕರ್ನಾಟಕದ ಚುನಾವಣೆ ಬಳಿಕ ದೇಶದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ನಾವು ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ಬಡ, ದೀನದಲಿತರು, ಅಲ್ಪಸಂಖ್ಯಾತರು, ಶ್ರಮಿಕರು, ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ಅಲ್ಲದೇ ಎಲ್ಲ ಮಹಿಳೆಯರಿಗೂ ಅನುಕೂಲವಾಗಲಿದೆ ಎಂದರು.
ಇಂದಿರಾಗಾಂಧಿ ಅವರು ಜಾರಿಗೆ ತಂದ 18 ಅಂಶಗಳ ಕಾರ್ಯಕ್ರಮಗಳಲ್ಲದೇ ಅನೇಕ ಯೋಜನೆಗಳನ್ನು ಜನರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಆದರೆ ಈಗ ಕೇಂದ್ರದಲ್ಲಿರುವ ಮೋದಿ ನೇತೃತ್ವದ ಸರ್ಕಾರ, ಕೇವಲ ಮೂವರ ಹಿತರಕ್ಷಣೆ ಮಾಡುತ್ತಾ ಬಂಡವಾಳಶಾಹಿ ಪರವಾಗಿದೆ ಎಂದು ಟೀಕಿಸಿದರು.
ಸಿಎಸ್‌ಗೆ ಪ್ರೀತಿಯಿಂದ ಬಲವಂತದ ಸನ್ಮಾನ
ಗೃಹಲಕ್ಷ್ಮಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಾಜರಿದ್ದ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒತ್ತಾಯದಿಂದ ಪ್ರೀತಿಪೂರ್ವಕವಾಗಿ ಸನ್ಮಾನಿಸಿದರು.
ವೇದಿಕೆಯಲ್ಲಿದ್ದ ಗಣ್ಯರನ್ನು ಸ್ವಾಗತಿಸುವಾಗ ಹಾರ, ಶಾಲು, ನೆನಪಿನ ಕಾಣಿಕೆಯನ್ನು ನೀಡಲಾಗುತ್ತಿತ್ತು. ಮುಖ್ಯಕಾರ್ಯದರ್ಶಿ ವಂದಿತಾ ಶರ್ಮ ಅವರಿಗೂ ಸ್ವಾಗತ ಕೋರುವಾಗ ಹಾರ, ಶಾಲು ಬೇಡ ಎಂದು ಕುರ್ಚಿಯಲ್ಲಿಯೇ ಕುಳಿತಿದ್ದರು. ಇದನ್ನು ಗಮನಿಸಿದ ಡಿ.ಕೆ.ಶಿವಕುಮಾರ್, ರಾಹುಲ್‌ಗಾಂಧಿ ಬಳಿಯಿಂದ ಎದ್ದು ವೇದಿಕೆ ಕೊನೆಯಲ್ಲಿ ಕುಳಿತಿದ್ದ ವಂದಿತಾ ಶರ್ಮ ಅವರತ್ತ ಆಗಮಿಸಿ ಅವರನ್ನು ಕೈ ಹಿಡಿದು ಮುಂದೆ ಕರೆತಂದರು.
ಆಗಲೂ ಸಂಕೋಚದಿಂದಲೇ ವಂದಿತಾ ಶರ್ಮ ಅವರು ಹಾರ ಬೇಡ ಎಂದಾಗ ಮಹಿಳಾ ಅಧಿಕಾರಿಯಿಂದ ಹಾರ ಹಾಕಿಸಿದರು. ಶಾಲು ಬೇಡ ಎಂದಾಗ ತಾವೇ ತೆಗೆದುಕೊಂಡು ಮುಖ್ಯಕಾರ್ಯದರ್ಶಿಯನ್ನು ಗೌರವಿಸಿದ್ದಲ್ಲದೇ ದೀಪ ಹಿಡಿದು ಮಹಿಳೆ ಚಿತ್ರ ಇರುವ ಮರದ ನೆನಪಿನ ಕಾಣಿಕೆ ನೀಡಿದರು.
ಈ ವೇಳೆ ವಂದಿತಾ ಶರ್ಮ ಅವರು ಇದೆಲ್ಲ ಯಾಕೆ ಎಂದು ಹುಸಿಕೋಪ ತೋರಿದರೆ, ಡಿ.ಕೆ.ಶಿವಕುಮಾರ್ ನಗುತ್ತಲೇ ಅವರಿಗೆ ಕೈ ಮುಗಿದು ವಾಪಸ್ ರಾಹುಲ್ ಗಾಂಧಿ ಬಳಿ ತೆರಳಿ ಕುಳಿತುಕೊಂಡರು.
ವಾಕ್ ಸ್ವಾತಂತ್ರೃವೂ ಇಲ್ಲ
ಮೋದಿ ಸರ್‌ನೇಮ್ ಇರುವವರು ಮಾಡಿರುವ ಭ್ರಷ್ಟಾಚಾರ ಪ್ರಸ್ತಾಪಿಸಿದ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಲಾಯಿತು. ಸಂಸತ್ ಸದಸ್ಯತ್ವದಿಂದ ಅವರನ್ನು ಅನರ್ಹಗೊಳಿಸಲಾಯಿತು. ಆದರೆ ನ್ಯಾಯಾಲಯ ತಡೆಯಾಜ್ಞೆ ನೀಡಲಾಗಿದೆ. ನಮ್ಮ ರಾಜ್ಯದ ಲಿಂಗಾಯತರಲ್ಲೂ ಮೋದಿ ಸರ್‌ನೇಮ್ ಹೊಂದಿದವರಿದ್ದಾರೆ. ಮೋದಿ ಉಪನಾಮ ಹೊಂದಿದ ಬಹಳಷ್ಟು ಮಂದಿ ಕರ್ನಾಟಕದಲ್ಲೂ ಇದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಪ್ರಜಾಪ್ರಭುತ್ವ, ಸಂವಿಧಾನದ ಆಶೋತ್ತರಗಳನ್ನು ಉಳಿಸದಿದ್ದರೆ ಮುಂದಿನ ದಿನಗಳಲ್ಲಿ ಗುಲಾಮಗಿರಿಯಲ್ಲಿ ಬದುಕಬೇಕಾಗುತ್ತದೆ. ದೇಶವನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಆದರೆ ಕಾಂಗ್ರೆಸ್ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಎರಡು ಸಾವಿರ ಬಸ್ ವ್ಯವಸ್ಥೆ
ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಗಳಿಂದ ಫಲಾನುಭವಿಗಳನ್ನು ಕರೆತರಲು ಎರಡು ಸಾವಿರ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಐದು ಜಿಲ್ಲೆಗಳ ಗ್ರಾ.ಪಂ. ಪಿಡಿಒಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿ ಇತರರಿಗೆ ಜವಾಬ್ದಾರಿ ನೀಡಲಾಗಿತ್ತು. ಅಲ್ಲದೆ, ರಕ್ಷಣೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.
ಗಣ್ಯರಿಗೆ ವಿಶೇಷ ಉಡುಗೊರೆ
ಗ್ಯಾರಂಟಿ ಯೋಜನೆ ‘ಗೃಹಲಕ್ಷ್ಮೀ’ಗೆ ಚಾಲನೆ ನೀಡಲು ಬಂದಿದ್ದ ಗಣ್ಯರಿಗೆ ವಿಶೇಷ ಉಡುಗೊರೆಗಳನ್ನು ನೀಡಲಾಯಿತು. ಕಾವೇರಿ ಎಂಪೋರಿಯಂನಲ್ಲಿ ಇನ್‌ಲೇ ಆರ್ಟ್ ಮೂಲಕ ರಚಿಸಲಾದ ದೊಡ್ಡ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಲಾಯಿತು. ಪ್ರಕೃತಿ ಸೊಬಗಿನ ಹಿನ್ನೆಲೆಯ ಕಲಾಕೃತಿಗಳ ಜತೆಗೆ ದೀಪ ಹಿಡಿದ ಮಹಿಳೆ, ಆನೆ, ನವಿಲು, ಕೊಕ್ಕರೆ, ಜೋಡೆತ್ತು ಸೇರಿ ಹಲವು ಕಲಾಕೃತಿಯ ಉಡುಗೊರೆಗಳನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ಗಾಂಧಿ, ಸುರ್ಜೇವಾಲ, ವೇಣುಗೋಪಾಲ್ ಸೇರಿ ಗಣ್ಯರಿಗೆ ನೀಡಲಾಯಿತು.