ಚಿದಾನಂದ ಮಾಣೆ ರಟ್ಟಿಹಳ್ಳಿ
ಪಟ್ಟಣದಲ್ಲಿರುವ ಏಕೈಕ ಇಂದಿರಾ ಗಾಂಧಿ ವಸತಿ ಶಾಲೆಯನ್ನು ಮೂಲಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ಹಿರೇಕೆರೂರ ತಾಲೂಕಿನ ದೂದಿಹಳ್ಳಿ ಮುರಾರ್ಜಿ ಹಾಗೂ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಕಟ್ಟಡಕ್ಕೆ ಸ್ಥಳಾಂತರಿಸಲು ಆದೇಶಿಸಲಾಗಿದೆ. ಇದು ಪಾಲಕರು, ಮಕ್ಕಳಿಗೆ ಬೇಸರ ಮೂಡಿಸಿದೆ.
ಸರ್ಕಾರ 2017ರ ಜೂನ್ನಲ್ಲಿ ರಟ್ಟಿಹಳ್ಳಿಯಲ್ಲಿ ಇಂದಿರಾ ಗಾಂಧಿ ವಸತಿ ಶಾಲೆ ಮಂಜೂರು ಮಾಡಿತು. 2 ವರ್ಷ ಪಟ್ಟಣದ ಭಗತ್ಸಿಂಗ್ ವೃತ್ತದ ಖಾಸಗಿ ಕಟ್ಟಡದಲ್ಲಿ ಹಾಗೂ 2019ರ ಆಗಸ್ಟ್ನಿಂದ ಮಾಸೂರು ರಸ್ತೆ ಕಬ್ಬಿಣಕಂತಿ ಮಠದ ಶ್ರೀ ಸಿದ್ಧಲಿಂಗ ವಿದ್ಯಾಪೀಠದ ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ. ಆರಂಭದಲ್ಲಿ 6ನೇ ತರಗತಿಗೆ 50 ಮಕ್ಕಳು ಪ್ರವೇಶ ಪಡೆದರು. ಈಗ ರಟ್ಟಿಹಳ್ಳಿ, ಹಿರೇಕೆರೂರು, ಹಾನಗಲ್, ರಾಣೆಬೆನ್ನೂರ, ಶಿಗಾಂವಿ ತಾಲೂಕಿನ 200 ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯ ನೂತನ ಕಟ್ಟಡ ಕುಡುಪಲಿ ಗ್ರಾಮದ ತಿಮ್ಮಪ್ಪನ ಮಲ್ಡಿಯಲ್ಲಿ ಸರ್ಕಾರದಿಂದ 23 ಕೋಟಿ ರೂ. ವೆಚ್ಚದಲ್ಲಿ ನಿರ್ವಣವಾಗುತ್ತಿದೆ. ಕಾಮಗಾರಿ 2022ರ ಜನವರಿಯಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಮೂಲಸೌಕರ್ಯಗಳ ಕೊರತೆ: ರಟ್ಟಿಹಳ್ಳಿಯ ಸಿದ್ಧಲಿಂಗ ವಿದ್ಯಾಪೀಠದ ಕಟ್ಟಡದಲ್ಲಿರುವ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಭದ್ರತೆ, ಕೊಠಡಿಗಳ ಕೊರತೆ, ನೀರು ಹಾಗೂ ಶೌಚಗೃಹ ಸಮಸ್ಯೆಗಳಿವೆ. ಈ ಬಗ್ಗೆ ಪ್ರಾಂಶುಪಾಲರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇಲಾಖೆ ಅಧಿಕಾರಿಗಳು ಶಾಲೆ ಪರಿಸ್ಥಿತಿ ಪರಿಶೀಲಿಸಿ ಕೃಷಿ ಸಚಿವ ಬಿ.ಸಿ. ಪಾಟೀಲ ಅವರೊಂದಿಗೆ ರ್ಚಚಿಸಿದ್ದಾರೆ. ನೂತನ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವವರೆಗೆ ವಸತಿ ಶಾಲೆಯನ್ನು ಹಿರೇಕೆರೂರು ತಾಲೂಕಿನ ದೂದಿಹಳ್ಳಿ ಗ್ರಾಮದಲ್ಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಜ. 12ರಂದು ಆದೇಶ ಹೊರಡಿಸಲಾಗಿದೆ.
ಸಿಬ್ಬಂದಿಗೂ ಸಮಸ್ಯೆ: ವಸತಿ ಶಾಲೆಯಲ್ಲಿ 7 ಬೋಧಕ, 5 ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಬಹುತೇಕರು ರಟ್ಟಿಹಳ್ಳಿ, ರಾಣೆಬೆನ್ನೂರ ತಾಲೂಕಿನವರು. ವಸತಿ ಶಾಲೆಯನ್ನು ಹಿರೇಕೆರೂರ ತಾಲೂಕಿಗೆ ಸ್ಥಳಾಂತರಿಸಿದರೆ ಸಿಬ್ಬಂದಿಗೆ ಹೋಗಿ-ಬರಲು ತೊಂದರೆಯಾಗಲಿದೆ. ಇನ್ನು ಏಳೆಂಟು ತಿಂಗಳಲ್ಲಿ ನೂತನ ಕಟ್ಟಡ ಸಿದ್ಧವಾಗಲಿದ್ದು, ಈ ಸಂದರ್ಭದಲ್ಲಿ ವಸತಿ ಶಾಲೆಯನ್ನು ಹಿರೇಕೆರೂರಿಗೆ ಸ್ಥಳಾಂತರಿಸುವುದು ಬೇಕಿರಲಿಲ್ಲ ಎಂಬುದು ಸ್ಥಳೀಯರು ಅಭಿಪ್ರಾಯ.
ಮಕ್ಕಳಿಗೆ ರಟ್ಟಿಹಳ್ಳಿಯ ಶಾಲೆಗೆ ಹೋಗಿ ಬರಲು ಅನುಕೂಲವಾಗುತ್ತದೆ. ಹಿರೇಕೆರೂರಿಗೆ ಹೋಗಲು ದೂರವಾಗುತ್ತದೆ. ರಟ್ಟಿಹಳ್ಳಿಯಲ್ಲಿ ಬೇರೆ ಎಲ್ಲಿಯಾದರೂ ವಸತಿ ಶಾಲೆಯನ್ನು ಮುನ್ನಡೆಸಿದರೆ ಅನುಕೂಲವಾಗುತ್ತದೆ.| ಮಂಜಪ್ಪ ದೊಡ್ಡಕಾಳೇರ, ಪಾಲಕರು, ಹಿರೇಕಬ್ಬಾರರಟ್ಟಿಹಳ್ಳಿಯ ಇಂದಿರಾ ಗಾಂಧಿ ವಸತಿ ಶಾಲೆ ಬಾಡಿಗೆ ಕಟ್ಟಡದಲ್ಲಿದೆ. ಅಲ್ಲಿ ಮೂಲಸೌಕರ್ಯಗಳ ಕೊರತೆ ಇರುವುದನ್ನು ಶಾಲೆ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಶಾಲೆಯನ್ನು ತಾತ್ಕಾಲಿಕವಾಗಿ ದೂದಿಹಳ್ಳಿ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಆದೇಶಿಸಲಾಗಿದೆ. ಕುಡುಪಲಿಯಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಮುಕ್ತಾಯವಾದ ಬಳಿಕ ಅಲ್ಲಿಗೆ ಸ್ಥಳಾಂತರಿಸಲಾಗುವುದು. ರಟ್ಟಿಹಳ್ಳಿಗೆ ಭೇಟಿ ನೀಡಿ ಎಲ್ಲರೊಂದಿಗೆ ರ್ಚಚಿಸಿ, ಶಾಲೆ ಸ್ಥಳಾಂತರಿಸುವ ಕುರಿತು ಮಾಹಿತಿ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.| ಜಗದೀಶ ಹೆಬ್ಬಳ್ಳಿ, ಸಮಾಜ ಕಲ್ಯಾಣ ಇಲಾಖೆ ಹಾವೇರಿ ಉಪನಿರ್ದೇಶಕರು