ಯಳಂದೂರು: ಬಡಜನರ ಅನುಕೂಲಕ್ಕಾಗಿ ಪಟ್ಟಣದಲ್ಲಿ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ಕಳೆದ ಒಂದು ವಾರದಿಂದ ತನ್ನ ಸಂಪೂರ್ಣ ಸೇವೆಯನ್ನು ಸ್ಥಗಿತ ಮಾಡಿದೆ. ವರ್ಷದಲ್ಲಿ ಮೂರ‌್ನಾಲ್ಕು ಬಾರಿ ಈ ರೀತಿಯಾಗಿ ಸೇವೆ ಸ್ಥಗಿತ ಮಾಡುತ್ತಿರುವುದರಿಂದ ಬಡಜನರಿಗೆ ತೊಂದರೆಯಾಗಿದೆ. ದುಬಾರಿ ಬೆಲೆ ನೀಡಿ ಹೋಟೆಲ್‌ನಲ್ಲಿ ಊಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳಲು ಪರದಾಟ ನಡೆಸಬೇಕಾಗಿದೆ.
ಪಟ್ಟಣದ ಆಶ್ರಯ ಬಡಾವಣೆಯ ಸಮೀಪ 1ನೇ ವಾರ್ಡ್ ವ್ಯಾಪ್ತಿಯ ಆವರಣದಲ್ಲಿ 2019ರ ಮಾರ್ಚ್‌ನಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ಆರಂಭಿಸಲಾಗಿತ್ತು. ಪೊಲೀಸ್ ಠಾಣೆ, ಕಾಲೇಜು, ಸರ್ಕಾರಿ ಆಸ್ಪತ್ರೆ, ತಾಲೂಕು ಕಚೇರಿ, ಪಟ್ಟಣ ಪಂಚಾಯಿತಿ ಕಚೇರಿಗಳು ಇದರ ಅಕ್ಕಪಕ್ಕದಲ್ಲೇ ಇದೆ. ಇಲ್ಲಿಗೆ ನಾನಾ ಕೆಲಸ ನಿಮಿತ್ತ ಬರುತ್ತಿದ್ದ ಜನರಿಗೆ ಇಂದಿರಾ ಕ್ಯಾಂಟೀನ್ ವರದಾನವಾಗಿತ್ತು. ನಿತ್ಯ ನೂರಾರು ಜನರು ಕ್ಯಾಂಟೀನ್ ಸೇವೆ ಪಡೆಯುತ್ತಿದ್ದರು.
ಹೆಚ್ಚಾಗಿ ಸಮೀಪವೇ ಇರುವ ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಇದರಿಂದ ಅನುಕೂಲವಾಗುತ್ತಿತ್ತು. ಜತೆಗೆ ಕಾಲೇಜಿನ ವಿದ್ಯಾರ್ಥಿಗಳು, ಆಟೋ ಚಾಲಕರು, ವ್ಯಾಪಾರಿಗಳು, ಕೂಲಿ ಕಾರ್ಮಿಕರು ಇಂದಿರಾ ಕ್ಯಾಂಟೀನ್‌ನಲ್ಲಿ ಅತಿ ಕಡಿಮೆ ಬೆಲೆಗೆ ಊಟ, ತಿಂಡಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.
ಗುತ್ತಿಗೆದಾರ ನಿರ್ಲಕ್ಷ್ಯವೇ ಪ್ರಮುಖ ಕಾರಣ:
ದಿನದಿಂದ ದಿನಕ್ಕೆ ಇಂದಿರಾ ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಊಟ, ತಿಂಡಿಯನ್ನು ನೀಡುತ್ತಿಲ್ಲ. ಇದ್ದರಿಂದ ಕ್ಯಾಂಟೀನ್ ಗೆ ಬರುವ ಜನರ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗುತ್ತಿದೆ. ಕೋವಿಡ್ ಸಮಯದಲ್ಲಿ ಕ್ಯಾಂಟೀನ್ ನಲ್ಲಿ ಸಮರ್ಪಕವಾಗಿ ಊಟ ನೀಡಲಾಗುತ್ತಿತ್ತು. ಬಡ ಜನರು ಕೈ ಮುಗಿದು ಊಟ ಮಾಡಿ ಹೋಗುತ್ತಿದ್ದರು. ಆದರೆ ಗುತ್ತಿಗೆದಾರರು ಬರುಬರುತ್ತಾ ಕ್ಯಾಂಟೀನ್ ನಡೆಸಲು ನಿರ್ಲಕ್ಷ್ಯ ವಹಿಸಿದರು. ಕ್ಯಾಂಟೀನ್ ಸಿಬ್ಬಂದಿಗೆ ವೇತನವನ್ನು ಕಾಲ ಕಾಲಕ್ಕೆ ನೀಡದ ಪರಿಣಾಮ ಅವರು ಸೇವೆ ಸ್ಥಗಿತ ಮಾಡಿದ್ದಾರೆ. ಪರಿಣಾಮ ಊಟ ನೀಡುವುದು ಕೂಡ ಸ್ಥಗಿತಗೊಂಡಿದೆ. ಆದರೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ನೀರಿನ ಸೌಲಭ್ಯವೂ ಇಲ್ಲ :
ಕ್ಯಾಂಟೀನ್ ನಲ್ಲಿ ನೀರಿನ ಸೌಲಭ್ಯವೂ ಇಲ್ಲ. ಸಾರ್ವಜನಿಕರು ಊಟ, ತಿಂಡಿ ಮಾಡಿ ನೀರು ಕುಡಿಯಲು ಯಾತನೆ ಅನುಭವಿಸುವ ಸ್ಥಿತಿ ಇದೆ. ಇದರೊಂದಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ರಾತ್ರಿ ಕಗ್ಗತ್ತಲಿನಲ್ಲೇ ಕಾಲ ಕಳೆಯುವ ಸ್ಥಿತಿ ಇಲ್ಲಿನ ಸಿಬ್ಬಂದಿಯ ಪಾಡಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ಗುತ್ತಿಗೆದಾರನಿಗೆ ಹಲವಾರು ಬಾರಿ ಸೂಚನೆ ನೀಡಿದ್ದರೂ ಪದೇ ಪದೆ ಈ ಸಮಸ್ಯೆ ಮರುಕಳಿಸುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂಬುದು ಆಗ್ರಹವಾಗಿದೆ.
ಗುಣಮಟ್ಟದ ಆಹಾರ ನೀಡುತ್ತಿಲ್ಲ : ಇಂದಿರಾ ಕ್ಯಾಂಟೀನ್ ಅನ್ನು ಗುತ್ತಿಗೆ ಆಧಾರದಲ್ಲಿ ನಡೆಸಲಾಗುತ್ತಿದೆ. ಸರ್ಕಾರ ಆದೇಶದಂತೆ ಉಪಾಹಾರಕ್ಕೆ 5 ರೂ. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 10 ರೂ. ದರ ನಿಗದಿಪಡಿಸಲಾಗಿದೆ. ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ತಿಂಡಿ, ಎರಡು ಬಾರಿ ಊಟ ಸೇರಿದಂತೆ 52.49 ರೂ. ಆಹಾರ ವಿತರಣೆ ಟೆಂಡರ್ ಮಂಜೂರು ಮಾಡಲಾಗಿದೆ. ಗ್ರಾಹಕರಿಂದ 25 ರೂ. ಮತ್ತು ಉಳಿದ 27.49 ರೂ. ಅನ್ನು ರಾಜ್ಯ ಸರ್ಕಾರ ಪಾವತಿಸುತ್ತಿದೆ. ಪ್ರತಿ ತಿಂಗಳು ಉಪಾಹಾರ ಮತ್ತು ಊಟ ಸೇವಿಸಿದ ಗ್ರಾಹಕರ ಸಂಖ್ಯೆಯ ಆಧಾರದ ಮೇಲೆ ಬಿಲ್ ಪಾವತಿಸಲಾಗುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಗುತ್ತಿಗೆದಾರರ ನಿರ್ಲಕ್ಷೃದಿಂದ ಇಂದಿರಾ ಕ್ಯಾಂಟೀನ್‌ನಲ್ಲಿ ನಿಗದಿತ ಗುಣಮಟ್ಟದ ಸಾಮಗ್ರಿ ಹಾಗೂ ತರಕಾರಿಗಳನ್ನು ಬಳಸುತ್ತಿಲ್ಲ. ಕಳಪೆ ಆಹಾರವನ್ನು ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಬಡಜನರ ಅನುಕೂಲಕ್ಕಾಗಿ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ಸೇವೆ ಸ್ಥಗಿತ ಮಾಡಿದ ಹಿನ್ನೆಲೆಯಲ್ಲಿ ಬಡವರಿಗೆ ತೊಂದರೆಯಾಗಿದೆ. ಈ ಕ್ಯಾಂಟೀನ್ ಯಾವಾಗ ಸೇವೆ ನೀಡುತ್ತದೆ, ಯಾವಾಗ ಮುಚ್ಚಿರುತ್ತದೆ ಎನ್ನುವುದೇ ತಿಳಿಯುತ್ತಿಲ್ಲ. ಇದಕ್ಕೆ ಒಂದು ಅಂತಿಮ ಪರಿಹಾರ ಕಂಡುಕೊಳ್ಳಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಇಲ್ಲಿರುವ ಸಮಸ್ಯೆಯನ್ನು ನಿವಾರಿಸಬೇಕು. ಮಲ್ಲು, ಯರಿಯೂರು ಗ್ರಾಮದ ವ್ಯಾಪಾರಿ. ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇದ್ದ ಕಾರಣ ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ತಕ್ಷಣ ಗಮನ ನೀಡಿ ಕ್ಯಾಂಟೀನ್ ಅನ್ನು ಪ್ರಾರಂಭ ಮಾಡುವ ನಿಟ್ಟಿನಲ್ಲಿ ಗಮನ ಹರಿಸಿ ಸೂಕ್ತ ಕ್ರಮ ವಹಿಸಲಾಗುವುದು. ಎಂ.ಪಿ. ಮಹೇಶ್ ಕುಮಾರ್ ಮುಖ್ಯಾಧಿಕಾರಿ ಪ.ಪಂ. ಯಳಂದೂರು