ಬಾಗಲಕೋಟೆ: ಸರಕಾರದ ಮಹತ್ವದ ಯೋಜನೆಯಾದ ಇಂದಿರಾ ಕ್ಯಾಂಟಿನ್‍ನಲ್ಲಿ ಜೂನ್ 19 ರಿಂದ ಹೊಸ ಮೆನು ಜಾರಿಗೆ ತಂದಿದ್ದು, ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟದಲ್ಲಿ ಸಾಕಷ್ಟು ಬಗೆ ಬಗೆಯ ಆಹಾರ ಪದಾರ್ಥಗಳ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.
ಸರಕಾರದಿಂದ ನಿಗದಿಪಡಿಸಿದ ಮೊದಲಿನ ದರದಂತೆ ಸಾರ್ವಜನಿಕರಿಂದ ಬೆಳಗಿನ ಉಪಹಾರಕ್ಕೆ 5 ರೂ. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 10 ರೂ.ಗಳನ್ನು ಮಾತ್ರ ಪಡೆಯಲಾಗುತ್ತಿದ್ದು, ದರದಲ್ಲಿ ಯಾವುದೇ ವ್ಯತ್ಯಾಸವಿರುವದಿಲ್ಲ. ವಾರದಲ್ಲಿ ಪೂರೈಸಬೇಕಾದ ಆಹಾರದ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ಮೆನುವನ್ನು ಸರಕಾರದಿಂದ ನಿಗಧಿಪಡಿಸಿದೆ. ಯಾವುದೇ ಹೆಚ್ಚುವರಿ ದರ ನಿಗಧಿಪಡಿಸಿರುವದಿಲ್ಲ. ಪ್ರತಿಯೊಬ್ಬ ಫಲಾನುಭವಿಗೆ ಪ್ರತಿ ದಿನಕ್ಕೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ಹೆಚ್ಚುವರಿ ಪಾವತಿಸಬೇಕಾದ ಮೊತ್ತ 36.45 ರೂ.ಗಳನ್ನು ಸರಕಾರಿಂದ ಭರಿಸಲಾಗುತ್ತಿದೆ. ಸಾರ್ವಜನಿಕರು ಕ್ಯಾಂಟಿನದಲ್ಲಿ ಸಿಗುವ ಉಪಹಾರ ಮತ್ತು ಊಟದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.