ಜಿಲ್ಲೆ

ಇಂದಿರಾ ಕ್ಯಾಂಟಿನ್‌ಗಳಿಗೆ ಸಿಗುವುದೇ ಮತ್ತೆ ಮರುಜೀವ

ಹಾಸನ: ಸಿದ್ದರಾಮಯ್ಯ ಅವರ ಮಹತ್ವಕಾಂಕ್ಷಿಯ ಇಂದಿರಾ ಕ್ಯಾಂಟೀನ್ ಯೋಜನೆ ಕಳೆದ ಬಿಜೆಪಿ ಸರ್ಕಾರದಲ್ಲಿ ನಿರ್ಲಕ್ಷೃಕ್ಕೆ ಸಿಲುಕಿ ಯೋಜನೆ ಹಳ್ಳ ಹಿಡಿದಿತ್ತು. ಇದೀಗ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ತಕ್ಷಣವೇ ಅವರು ತಮ್ಮ ಕನಸಿನ ಯೋಜನೆಗೆ ಮರುಜೀವ ನೀಡಲು ಮುಂದಾಗಿದ್ದಾರೆ.

ಬಡವರ ಹಸಿವು ನೀಗಿಸಲೆಂದು ಕಾಂಗ್ರೆಸ್ ಸರ್ಕಾರವೇ ಪ್ರಾರಂಭಿಸಿ ಉತ್ತಮವಾಗಿ ನಡೆಯುತ್ತಿತ್ತು. ಬಳಿಕ ಕಾಂಗ್ರೆಸ್ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಂದಿರಾ ಕ್ಯಾಂಟೀನ್‌ಗಳನ್ನು ಮೂಲೆಗುಂಪು ಮಾಡಲಾಯಿತು. ಅಲ್ಲಿ ಇಲ್ಲಿ ಬೆರಳೆಣಿಕೆಯಷ್ಟು ನಡೆಯುತ್ತಿರುವ ಕ್ಯಾಂಟೀನ್‌ಗಳಲ್ಲೂ ಊಟ-ತಿಂಡಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುತ್ತಿಲ್ಲ ಎಂಬ ಆಪಾದನೆಗಳು ಕೇಳಿ ಬರುತ್ತಿದ್ದವು. ಕೆಲವು ಗುತ್ತಿಗೆದಾರರ ಕಳ್ಳಾಟ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ಬಡವರ ಅಕ್ಷಯಪಾತ್ರೆ ಆಗಬೇಕಿದ್ದ ಈ ಮಹತ್ವಕಾಂಕ್ಷಿ ಯೋಜನೆ ಸಂಪೂರ್ಣವಾಗಿ ಹಾದಿ ತಪ್ಪಿತ್ತು.

ಆಲೂರು ಹೊರತುಪಡಿಸಿ ಜಿಲ್ಲೆಯಲ್ಲಿ ಎಂಟು ಇಂದಿರಾ ಕ್ಯಾಂಟಿನ್‌ಗಳು ಇವೆಯಾದರೂ ಬಡವರ ಹಸಿವು ನೀಗಿಸುವ ಮಟ್ಟದಲ್ಲಿ ಕ್ರಿಯಾಶೀಲವಾಗಿಲ್ಲ. ಹೀಗಾಗಿ ಗ್ರಾಹಕರು ಖಾಸಗಿ ಹೋಟೆಲ್, ಬೀದಿಬದಿಯ ಮೊಬೈಲ್ ಕ್ಯಾಂಟೀನ್‌ಗಳಿಗೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆ ಮುಂಭಾಗ ಹಾಗೂ ಸಂತೆಪೇಟೆಯ ನಗರಸಭೆ ವಸ್ತು ಪ್ರದರ್ಶನ ಮೈದಾನ, ಸಕಲೇಶಪುರದ ಎಸ್‌ಬಿಎಂ ಪಕ್ಕ, ಬೇಲೂರಿನ ಹರ್ಡೀಕಲ್ ವೃತ್ತ, ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗ, ಅರಸೀಕೆರೆಯ ತಾಲೂಕು ಕಚೇರಿ ಸಮೀಪ, ಅರಕಲಗೂಡು ಬಸ್ ನಿಲ್ದಾಣ ಪಕ್ಕ, ಹೊಳೆನರಸೀಪುರದ ಮೈಸೂರು ರಸ್ತೆ ಸೇರಿ ಜಿಲ್ಲೆಯಲ್ಲಿ ಒಟ್ಟು 8 ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಸರಾಸರಿ ಗರಿಷ್ಠ 3 ಸಾವಿರ ಮಂದಿ ಪ್ರತಿದಿನ ಇವುಗಳನ್ನು ಆಶ್ರಯಿಸಿದ್ದಾರೆ.

ಬದಲಾವಣೆಯಾದರೆ ಅನುಕೂಲ: 

ಕೂಲಿ ಕಾರ್ಮಿಕರು ಮತ್ತು ಬಡ ಜನರ ಹಸಿವು ನೀಗಿಸಬೇಕಿರುವ ಇಂದಿರಾ ಕ್ಯಾಂಟಿನ್‌ಗಳಲ್ಲಿ ಕೆಲವು ಬದಲಾವಣೆಗಳಾದರೆ ಅನುಕೂಲ ಎಂಬ ಅಭಿಪ್ರಾಯಗಳು ಜಿಲ್ಲೆಯ ಎಲ್ಲ ಭಾಗಗಳಿಂದ ಕೇಳಿ ಬಂದಿದೆ. ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗ ಹಾಗೂ ಅರಕಲಗೂಡು ಬಸ್ ನಿಲ್ದಾಣ ಸಮೀಪವೇ ಇಂದಿರಾ ಕ್ಯಾಂಟಿನ್ ಇದ್ದು ರೋಗಿಗಳ ಸಂಬಂಧಿಕರು, ಕೂಲಿ ಕಾರ್ಮಿಕರು ಒಳಗೊಂಡು ಪ್ರತಿದಿನ 100 ತಿಂಡಿ ಹಾಗೂ 200 ಊಟ ಮಾರಾಟವಾಗುತ್ತಿದೆ. ಇಲ್ಲಿ ರುಚಿಯ ಕೊರತೆ ಇರುವುದರಿಂದ ಹೆಚ್ಚಿನವರು ಬರಲು ಹಿಂಜರಿಯುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿದ್ದು ಅಧಿಕಾರಿಗಳು ನಿಗಾ ವಹಿಸಬೇಕಿದೆ.

ಅರಸೀಕೆರೆ ನಗರ ಹೊರ ವಲಯದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಿರುವುದರಿಂದ ಹೆಚ್ಚಿನವರು ಅದರ ಉಪಯೋಗ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಮುಖ ಜಂಕ್ಷನ್ ಆಗಿರುವ ಕಾರಣ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ನಡುವೆ ಸೂಕ್ತ ಸ್ಥಳ ಹುಡುಕಿ ಸ್ಥಳಾಂತರಿಸಿದರೆ ಹೆಚ್ಚಿನವರಿಗೆ ಅನುಕೂಲವಾಗಲಿದೆ. ಆಲೂರು ಪಟ್ಟಣದಲ್ಲಿ ಸ್ಥಳದ ಕೊರತೆ ಕಾರಣ ನೀಡಿ ಈವರೆಗೆ ಇಂದಿರಾ ಕ್ಯಾಂಟಿನ್ ಸ್ಥಾಪಿಸಿಲ್ಲ. ಇಚ್ಛಾಶಕ್ತಿ ಕೊರತೆಯೇ ಇದಕ್ಕೆ ಕಾರಣ ಎಂಬ ಮಾತುಗಳು ಆ ಭಾಗದ ಸಾರ್ವಜನಿಕರಿಂದ ಕೇಳಿ ಬಂದಿದ್ದು ಜನಪ್ರತಿನಿಧಿಗಳಿಗೆ ಸೂಕ್ತ ಜಾಗ ಹುಡುಕುವುದು ಕಷ್ಟವೇನಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಹೊಳೆನರಸೀಪುರದ ಮೈಸೂರು ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಬಹುಪಾಲು ಸಮಯ ಮುಚ್ಚಿರುವುದರಿಂದ ಬಾಗಿಲು ಮುಚ್ಚಿ ಎಷ್ಟೋ ದಿನ ಕಳೆದಿವೆ ಎಂದೆನಿಸಿ ಹಲವರು ಅತ್ತ ತಲೆ ಹಾಕುತ್ತಿಲ್ಲ. ಬೇಲೂರಿನ ಚನ್ನಕೇಶವ ಸ್ವಾಮಿ ದೇವಸ್ಥಾನದ ದಾಸೋಹ ಕೇಂದ್ರ ಇರುವುದರಿಂದ ಇಂದಿರಾ ಕ್ಯಾಂಟೀನ್‌ಗೆ ಅಷ್ಟಾಗಿ ಜನರು ಹೋಗುತ್ತಿಲ್ಲ.

ಸುಳ್ಳು ಲೆಕ್ಕ ನೀಡಿ ವಂಚನೆ, ಆರೋಪ: 

ಜನಸಂಖ್ಯೆ ಆಧರಿಸಿ ಇಂದಿರಾ ಕ್ಯಾಂಟೀನ್‌ನಲ್ಲಿ ಉಪಾಹಾರ ಮತ್ತು ಊಟ ಮಿತಿಗೊಳಿಸಲಾಗಿದೆ. ಆರಂಭದಲ್ಲಿ ಜನ ಕ್ಯಾಂಟೀನ್‌ಗೆ ಜನ ಹೆಚ್ಚು ಹೋಗುತ್ತಿದ್ದರಿಂದ ಕೆಲವು ಕಡೆಗಳಲ್ಲಿ ತಮಗೆ ನಿಗದಿಪಡಿಸಿರುವಷ್ಟು ಮಂದಿ ಕ್ಯಾಂಟೀನ್‌ಗೆ ಬರುವ ಮುನ್ನವೇ ಕ್ಯಾಂಟೀನ್ ಮುಚ್ಚಿ ಸರ್ಕಾರಕ್ಕೆ ಸುಳ್ಳು ಲೆಕ್ಕ ನೀಡಿ ವಂಚಿಸುತ್ತಿದ್ದರು. ಇದೀಗ ಕ್ಯಾಂಟೀನ್‌ಗೆ ಜನ ಬಾರದಿದ್ದರೂ ಕೂಡ ಸುಳ್ಳು ಲೆಕ್ಕ ನೀಡಿ ವಂಚಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಅಧಿಕಾರಿಗಳ ನಿರ್ಲಕ್ಷ್ಯ:

ಇಂದಿರಾ ಕ್ಯಾಂಟೀನ್ ತಿಂಡಿ- ಊಟ ರುಚಿಯಾಗಿದೆಯೇ , ಮೂಲಸೌಕರ್ಯ ಸಮರ್ಪಕವಾಗಿದೆಯೇ ಎಂಬುದನ್ನು ಸ್ಥಳೀಯ ಸಂಸ್ಥೆ ಅಧಿಕಾರಿಗಳು ಪ್ರತಿನಿತ್ಯ ಪರಿಶೀಲಿಸಬೇಕು. ಆದರೆ ಇಲ್ಲಿನ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಯಾರೊಬ್ಬರು ಪರಿಶೀಲಿಸುವ ಗೋಜಿಗೆ ಹೋಗದ ಕಾರಣ ಗುತ್ತಿಗೆದಾರರ ದರ್ಬಾರು ಜೋರಾಗಿದೆ. ಇದೀಗ ತಾವೇ ಆರಂಭಿಸಿದ ಇಂದಿರಾ ಕ್ಯಾಂಟಿನ್‌ಗಳಿಗೆ ಮರುಜೀವ ನೀಡಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಂಡು ವ್ಯವಸ್ಥಿತ ರೀತಿಯಲ್ಲಿ ಸೌಲಭ್ಯ ಕಲ್ಪಿಸಿದರೆ ಇಂದಿರಾ ಕ್ಯಾಂಟೀನ್ ಆರಂಭಿಕ ದಿನಗಳನ್ನು ಮತ್ತೆ ಕಾಣಲಿವೆ.