ಜಿಲ್ಲೆ

ಇಂದಿರಾ, ಅರಸು ಕೊಡುಗೆ ಸ್ಮರಣೀಯ

ಚಿತ್ರದುರ್ಗ: ಸ್ವಾತಂತ್ರೃ ನಂತರ ದೇಶ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಉತ್ತಮ, ಜನಪರ ಯೋಜನೆ ರೂಪಿಸಿದೆ ಎಂದು ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಹೇಳಿದರು.
ಪಕ್ಷದ ಕಚೇರಿಯಲ್ಲಿ ಗುರುವಾರ ಒಬಿಸಿ ವಿಭಾಗದಿಂದ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 42 ನೇ ಪುಣ್ಯಸ್ಮರಣೆ ಕಾರ‌್ಯಕ್ರಮದಲ್ಲಿ ಮಾತನಾಡಿ, ಕೇಂದ್ರದಲ್ಲಿ ಗಾಂಧಿ ಕುಟುಂಬದವರು, ರಾಜ್ಯದಲ್ಲಿ ಅರಸು ಅವರು ದೇಶ, ರಾಜ್ಯಕ್ಕೆ ಉತ್ತಮ ಆಡಳಿತವನ್ನು ಕೊಟ್ಟಿದ್ದಾರೆ ಎಂದು ಸ್ಮರಿಸಿದರು.
ಇಂದಿರಾಗಾಂಧಿ ಜಾರಿಗೆ ತಂದ ಉಳುವವನೇ ಭೂಒಡೆಯ ಕಾಯ್ದೆಯನ್ನು ರಾಜ್ಯದಲ್ಲಿ ಪರಿಣಾಮಕಾರಿ ಅನುಷ್ಠಾನದಿಂದಾಗಿ ಕೂಲಿಕಾರರು ಭೂಮಿಯ ಮಾಲೀಕತ್ವ ಪಡೆದರು ಎಂದರು.
ಕರ್ನಾಟಕ ಏಕೀಕರಣದಲ್ಲಿ ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಹಾಗೂ ಅರಸು ಅವರ ಕೊಡುಗೆ ಇದೆ. ಸಾಮಾಜಿಕ ನ್ಯಾಯದಡಿ ಅರಸು ಆಡಳಿತ ನಡೆಸಿದರು ಎಂದು ಹೇಳಿದರು.
ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡಿ, ಸಣ್ಣ, ಸಣ್ಣ ಸಮುದಾಯಗಳನ್ನು ಗುರುತಿಸಿ ಅವರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದರು.
ಸಮ ಸಮಾಜದ ನಿರ್ಮಾಣದಲ್ಲಿ ಅರಸು ಅವರ ಪಾತ್ರ ಹಿರಿದಾಗಿದೆ. ಅವರ ದೂರದೃಷ್ಟಿಯಿಂದ ಯೋಜನೆಗಳು ರಾಜ್ಯದ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದರು.
ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಡಿ.ಎನ್.ಮೈಲಾರಪ್ಪ ಮಾತನಾಡಿ, ಅರಸು ಅವರು ಹಿಂದುಳಿದ ವರ್ಗಗಳ ಧ್ವನಿಯಾಗಿದ್ದರು, ಎಲ್ಲ ಜಾತಿ, ಧರ್ಮದ ಬಡವರಿಗೂ ನೆರವಾಗಿದ್ದರು. ಮೀಸಲಾತಿಗೆ ಅರಸು ಕಾರಣರಾಗಿದ್ದಾರೆ. ತಮ್ಮ ಅಧಿಕಾರ ಅವಧಿ ಶ್ರೀಮಂತರನ್ನು ಓಲೈಸಲಿಲ್ಲ. ಬಂಡವಾಳಶಾಹಿ, ಜಾತಿವಾದಿಗಳನ್ನು ದೂರವಿಟ್ಟಿದ್ದರು ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಶಿವಣ್ಣ ಮಾತನಾಡಿದರು. ಚಾಂದ್‌ಪೀರ್, ಪಿ.ಕೆ.ಮೀನಾಕ್ಷಿ, ಸೈಯದ್ ಮೋಹಿದ್ದೀನ್, ಸುಧಾ, ಶಬ್ಬೀರ್ ಬಾಷಾ, ನಂದೀಶ್, ಬಶೀರ್, ಪರ್ವಿನ್, ಮುದಾಸಿರ್ ನವಾಜ್, ಬೊಮ್ಮಣ್ಣ ಇದ್ದರು.