ಜಿಲ್ಲೆ

ಇಂದಿನಿನಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಗೋಣಿಕೊಪ್ಪ: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಾ.4ರಂದು ಚಾಲನೆ ಸಿಗಲಿದೆ. ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ 2 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಶನಿವಾರ ಬೆಳಗ್ಗೆ 8 ಗಂಟೆಗೆ ಡಾ.ಪಿ.ಎಂ. ನಾಣಮಯ್ಯ ಸಭಾ ಮಂಟಪದ ಎದುರು ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರಧ್ವಜಾರೋಹಣವನ್ನು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕಮನೆ ಸೌಮ್ಯ ಬಾಲು, ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಕನ್ನಡ ಧ್ವಜಾರೋಹಣವನ್ನು ಪೊನ್ನಂಪೇಟೆ ತಾಲೂಕು ಕಸಾಪ ಅಧ್ಯಕ್ಷ ಕೋಳೇರ ದಯಾ ಚೆಂಗಪ್ಪ ನೆರವೇರಿಸಲಿದ್ದಾರೆ. ಈ ಸಂದರ್ಭ ರಾಷ್ಟ್ರಗೀತೆ, ನಾಡಗೀತೆ ಗಾಯನ ನಡೆಯಲಿದೆ.

ದ್ವಾರಗಳ ಉದ್ಘಾಟನೆ : ಬೆಳಗ್ಗೆ 8.30 ಗಂಟೆಗೆ ಏಕಕಾಲಕ್ಕೆ ಪಟ್ಟಣದ ಒಂಬತ್ತು ಕಡೆಗಳಲ್ಲಿ ನಿರ್ಮಿಸಿರುವ ದ್ವಾರಗಳ ಉದ್ಘಾಟನೆ ನೆರವೇರಲಿದೆ. ಈ ಒಂಬತ್ತು ದ್ವಾರಗಳಿಗೆ ಜಮ್ಮಡ ಕರುಂಬಯ್ಯ, ಕೊಳ್ಳಿಮಾಡ ಸಿ. ಮಂದಣ್ಣ, ಮಲ್ಲಂಡ ಕೆ. ನಂಜಪ್ಪ, ವಾಟೇರೀರ ಪಿ. ಅಯ್ಯಪ್ಪ, ಅಜ್ಜಿಕುಟ್ಟೀರ ಶಾಂತು ಅಪ್ಪಯ್ಯ, ಡಬ್ಲ್ಯೂ. ಅಯ್ಯಪ್ಪ, ಜಿ.ಟಿ. ಪುಟ್ಟತಾಯಮ್ಮ, ಎಂ.ಜಿ. ಪದ್ಮನಾಭ ಕಾಮತ್ ಹಾಗೂ ಸಿ.ಟಿ. ದೇವಯ್ಯ ಅವರ ಹೆಸರು ಇಡಲಾಗಿದೆ.

ಅಧ್ಯಕ್ಷರ ಮೆರವಣಿಗೆ: ಬೆಳಗ್ಗೆ 8.45 ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಪಾಲಿಬೆಟ್ಟ ರಸ್ತೆ ಜಂಕ್ಷನ್‌ನಿಂದ ಆರಂಭಗೊಳ್ಳಲಿದ್ದು, ಅಧ್ಯಕ್ಷೆ ಡಾ. ತೀತೀರ ರೇಖಾ ವಸಂತ್ ಅವರನ್ನು ವಿಶೇಷ ವಾಹನದಲ್ಲಿ ಮುಖ್ಯರಸ್ತೆ ಮೂಲಕ ಡಾ.ಪಿ.ಎಂ. ನಾಣಮಯ್ಯ ಸಭಾ ಮಂಟಪದವರೆಗೆ ಮೆರವಣಿಗೆಯಲ್ಲಿ ಕರೆದುಕೊಂಡು ಬರಲಾಗುತ್ತದೆ. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳಾದ ಮಂಗಳವಾದ್ಯ, ಚಂಡೆವಾದ್ಯ, ಕಳಸ ಮೆರವಣಿಗೆ, ಸ್ತಬ್ಧಚಿತ್ರ, ಗೊಂಬೆಯಾಟ, ಪೂಜಾಕುಣಿತ, ಡೊಳ್ಳು ಕುಣಿತ, ವೀರಗಾಸೆ, ಕೊಡವ ವಾಲಗ, ಬ್ಯಾಂಡ್‌ಸೆಟ್‌ನೊಂದಿಗೆ ವಿದ್ಯಾರ್ಥಿಗಳು, ಸ್ತ್ರೀಶಕ್ತಿ, ಸಂಜೀವಿನಿ ಒಕ್ಕೂಟ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘಟನೆ, ಅಂಗನವಾಡಿ, ಆಶಾ ಕಾರ್ಯಕರ್ತೆ, ಶಿಕ್ಷಕರು, ವಿವಿಧ ಸಂಘ-ಸಂಸ್ಥೆ, ಆಟೋ, ವಾಹನ ಚಾಲಕರು, ಎನ್‌ಸಿಸಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭ ವೇದಿಕೆಯ ಅಜ್ಜಿಕುಟ್ಟೀರ ಎ.ಅಪ್ಪಣ್ಣ ಮುಖ್ಯದ್ವಾರ ಉದ್ಘಾಟನೆ, ಮುಲ್ಲೇಂಗಡ ಬೇಬಿ ಚೋಂದಮ್ಮ ಪುಸ್ತಕ ಮಳಿಗೆ, ಕೇಚಮಾಡ ಸುಬ್ಬಯ್ಯ ಸ್ತ್ರೀಶಕ್ತಿ ಸಂಘಟನೆಗಳ ಮಳಿಗೆ, ಆಲೀರ ಆಲಿ ಚಿತ್ರಕಲಾ ಪ್ರದರ್ಶನ ಮಳಿಗೆ, ಡಾ.ಪಿ.ಎಂ. ನಾಣಮಯ್ಯ ಸಭಾಂಗಣ ಮತ್ತು ಡಾ. ಐ.ಮಾ. ಮುತ್ತಣ್ಣ ವೇದಿಕೆ ಉದ್ಘಾಟನೆ ನಡೆಯಲಿದೆ.

ವೇದಿಕೆ ಉದ್ಘಾಟನೆ: ಬೆಳಗ್ಗೆ 10.15 ಕ್ಕೆ ಶಾಸಕ ಕೆ.ಜಿ. ಬೋಪಯ್ಯ ವೇದಿಕೆ ಉದ್ಘಾಟಿಸಲಿದ್ದಾರೆ. ನಾಡಗೀತೆ, ರೈತಗೀತೆ ಮೊಳಗಲಿದೆ. ಅರಮೇರಿ ಕಳಂಚೇರಿ ಮಠದ ಅಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕಸಾಪ ನಿಕಟಪೂರ್ವ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ಅಶಯ ನುಡಿಯಾಡಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಮಂಡೇಪಂಡ ಗೀತಾ ಮಂದಣ್ಣ ಅವರ ಮಾತು, ವಿಧಾನಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಕೃತಿ ಬಿಡುಗಡೆಗೊಳಿಸಲಿದ್ದಾರೆ. ಚಂದ್ರಕಲಾ ವಿ. ಮೂರ್ತಿ ತಂಡದ ಹಚ್ಚೇವು ಕನ್ನಡದ ದೀಪ ಹಾಡು, ಕಲಾವಿದ ಬಿ.ಆರ್. ಸತೀಶ್-ಗಾಯಕ ಟಿ. ಡಿ. ಮೋಹನ್ ತಂಡದ ಕುಂಚಗಾಯನ ಕಾರ್ಯಕ್ರಮ ನಡೆಯಲಿದೆ.

ಪುಸ್ತಕ ಬಿಡುಗಡೆ: ಸಮ್ಮೇಳನದಲ್ಲಿ 5 ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದು, ಜಯಪ್ರಕಾಶ್ ಪುತ್ತೂರು ಬರೆದ ಬದುಕಲು ಬಿಡಿ ಪ್ಲೀಸ್, ಶರ್ಮಿಳಾ ರಮೇಶ್ ಅವರ ಲಹರಿ, ಲಲಿತಾ ಪ್ರಬಂಧ, ಕಿಗ್ಗಾಲು ಗಿರೀಶ್ ಅವರ ಅನಿರೀಕ್ಷಿತ ತಿರುವುಗಳು ಕಾದಂಬರಿ, ಕೃಪಾ ದೇವರಾಜ್ ಅವರ ಚೌ ಚೌ ಬಾತ್, ಫ್ರಾನ್ಸಿಸ್ ಚಿರಯ್ಕಲ್ ಅವರ ಗ್ರಾಮಾಭಿವೃದ್ದಿಯಲ್ಲಿ ಗ್ರಾಮ ಪಂಚಾಯಿತಿ ಮತ್ತು ಮಹಿಳಾ ಸ್ವ ಸಹಾಯ ಸಂಘಗಳ ಪಾತ್ರ ಪುಸ್ತಕಗಳು ಬಿಡುಗಡೆಯಾಗಲಿವೆ.

ಗೀತ ಗಾಯನ: ಮಧ್ಯಾಹ್ನ 1ರಿಂದ 2 ಗಂಟೆವರೆಗೆ ಕನ್ನಡ ಗೀತಗಾಯನ ನಡೆಯಲಿದೆ. 2ರಿಂದ 3.15 ಗಂಟೆವರೆಗೆ ಭಾಷಾ ವೈವಿಧ್ಯತೆ ವಿಚಾರ ಗೋಷ್ಠಿ ನಡೆಯಲಿದೆ. ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಕೊಡಗು ಮತ್ತು ಕನ್ನಡ ಸಾಹಿತ್ಯದ ಉಪನ್ಯಾಸ, ಚಮ್ಮಟ್ಟೀರ ಪ್ರವೀಣ್ ಕೊಡವ ಭಾಷಾ ಸಾಹಿತ್ಯ, ಸುಬ್ರಾಯ ಸಂಪಾಜೆ ಅವರ ಅರೆಭಾಷೆ ಸಾಹಿತ್ಯ, ಪ್ರತಿಮಾ ರೈ ತುಳುಭಾಷೆ ಸಾಹಿತ್ಯ, ಎಸ್.ಐ. ಮುನೀರ್ ಅಹಮ್ಮದ್ ಬ್ಯಾರಿ ಭಾಷೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

ಗೋಷ್ಠಿ: ಮ. 3.15 ರಿಂದ ಕಾನೂನಿನಲ್ಲಿ ಕನ್ನಡದ ಬಳಕೆ, ಮಹಿಳಾ ಸಬಲೀಕರಣ, ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರು, ಕನ್ನಡ ಸಾಹಿತ್ಯದಲ್ಲಿ ವಿಜ್ಞಾನ ಕುರಿತಾದ ವಿಚಾರ ಗೋಷ್ಠಿಗಳು ನಡೆಯಲಿವೆ. 5 ಗಂಟೆಗೆ ಕವಿಗೋಷ್ಠಿ, ಸಾಯಂಕಾಲ 6 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ಸನ್ಮಾನ: ದತ್ತಿ ದಾನಿಗಳಾದ ಮುಲ್ಲೇಂಗಡ ಮಧೋಷ್ ಪೂವಯ್ಯ, ಎಸ್.ಆರ್. ಉಷಾಲತಾ, ಶಶಿಕಾಂತಿ ರಘುನಾಥ್, ಎಚ್. ಬಿ. ಜಯಮ್ಮ, ವಿಜಯ ವಿಷ್ಣುಭಟ್, ಎಂ.ಜಿ. ನಾಗರಾಜ್, ಆರ್. ನಾಗೇಂದ್ರ ಕಾಮತ್, ವಾಣಿಶ್ರೀ ಹಾಗೂ ತಾಲೂಕು, ಹೋಬಳಿ ಕಸಾಪ ಅಧ್ಯಕ್ಷರು, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಸಾಯಂಕಾಲ 5 ಗಂಟೆಗೆ ಕವಿಗೋಷ್ಠಿ, 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.