ಹಾಸನ: ಕರಾವಳಿ ಭಾಗದ ಕಥಾ ಹಂದರದಲ್ಲಿ ತಯಾರಾಗಿರುವ ಭಕ್ತಿ ಪ್ರಧಾನ ಸಂದೇಶವಿರುವಂತಹ ಕಲ್ಜಿಗ ಚಿತ್ರ ಇದೆ ತಿಂಗಳು 12ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಶುಕ್ರವಾರ ಹಾಸನದಲ್ಲಿ ಅದ್ದೂರಿಯಾಗಿ ತೆರೆಕಂಡಿದೆ ಎಂದು ಚಿತ್ರದ ನಿರ್ಮಾಪಕ ಶರತ್ ಕುಮಾರ್ ತಿಳಿಸಿದರು.
ಮಂಗಳೂರಿನ ಕಲೆ, ಸಂಸ್ಕೃತಿ, ದೈವ ಮತ್ತು ದೇವರ ಕಥೆಯ ಸುತ್ತ ಚಿತ್ರ ಮಾಡಿದ್ದು ಈಗಾಗಲೇ ಮಂಗಳೂರಿನಲ್ಲಿ 15 ದಿನಗಳ ಭರ್ಜರಿ ಪ್ರದರ್ಶನ ಕಂಡಿದ್ದು, ಶುಕ್ರವಾರ ಹಾಸನದ ಪಿಚ್ಚರ್ ಪ್ಯಾಲೆಸ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ. ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರವನ್ನು ನೋಡಿ ನಮಗೆ ಪ್ರೋತ್ಸಾಹ ನೀಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಈಗಾಗಲೇ ರಾಜ್ಯಾದ್ಯಂತ 50ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದ್ದು, ಕುಟುಂಬ ಸಮೇತರಾಗಿ ಬಂದು ಸಿನಿಮಾ ನೋಡುವಂತಹ ಸಿನಿಮಾ ಇದಾಗಿದೆ. ಕೇವಲ 25 ದಿನಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಮಂಗಳೂರು ಭಾಗದಲ್ಲಿ ಚಿತ್ರೀಕರಣ ಮಾಡಿದ್ದು ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದು ಚಿತ್ರದಲ್ಲಿ ಹಲವು ದೊಡ್ಡ ದೊಡ್ಡ ಕಲಾವಿದರು ನಟಿಸಿದ್ದಾರೆ ಎಂದು ಹೇಳಿದರು.
ಚಿತ್ರದಲ್ಲಿ ನಾಯಕ ನಟನಾಗಿ ಅರ್ಜುನ್ ಕಾಫಿ ಕಾಡು ಅವರು ನಟನೆ ಮಾಡಿದ್ದು ಇವರು ತುಳು ಭಾಷೆಯ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕಲ್ಜಿಗ ಎಂದರೆ ಕಲಿಯುಗ. ಈ ಕಲಿಯುಗದಲ್ಲಿ ಏನೆಲ್ಲ ಸನ್ನಿವೇಶಗಳು ನಡೆಯುತ್ತಿವೆ ಮತ್ತು ಮಂಗಳೂರಿನ ಆರಾಧ್ಯ ದೈವ ಆಗಿರುವಂತಹ ದೇವರನ್ನು ಇಟ್ಟುಕೊಂಡು ಈ ಕಥೆಯನ್ನು ಎಣೆಯಲಾಗಿದ್ದು ಸುಂದರವಾಗಿ ಮೂಡಿಬಂದಿದೆ. ಚಿತ್ರವನ್ನು ಸುಮನ್ ಸುವರ್ಣ ಅವರು ಕಥೆ ಮತ್ತು ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕನಾಗಿರುವ ನಾನು ಮೂಲತಃ ಹಾಸನದವನಾಗಿದ್ದು ನನ್ನ ಚಿತ್ರವನ್ನು ನೋಡಿ ನೀವೆಲ್ಲರೂ ಅರಸಬೇಕು ಎಂದು ಹೇಳಿದರು.
ನಾಯಕ ನಟ ಅರ್ಜುನ್ ಕಾಪಿ ಕಾಡು ಮಾತನಾಡಿ, ಕಾಂತಾರ ಸಿನಿಮಾ ಬಂದ ಮೇಲೆ ಕರಾವಳಿ ಭಾಗದ ದೈವದ ವಿಚಾರವಾಗಿ ನಮ್ಮ ಚಿತ್ರದಲ್ಲಿ ಸಾಕಷ್ಟು ವಿಭಿನ್ನವಾಗಿ ಮತ್ತು ಪ್ರತಿಯೊಬ್ಬರಿಗೂ ಕೂಡ ಇಷ್ಟವಾಗುವಂತಹ ಚಿತ್ರವಾಗಿದೆ. ಈ ಸಿನಿಮಾಗೆ ಹಾಸನದ ಜನರ ಪ್ರೀತಿ ಮತ್ತು ಪ್ರೋತ್ಸಾಹ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಸುಮನ್ ಸುವರ್ಣ, ಲಿಖಿತ್ ಹಾಜರಿದ್ದರು.