ಜಿಲ್ಲೆ

ಇಂದಿನಿಂದ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ

Kodagu

ನಾಪೋಕ್ಲು: ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದ ಕುಂಬಳಚೇರಿಯ ಶ್ರೀ ವೈನಾಟ್ ಕುಲವನ್ ದೈವಸ್ಥಾನದ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ಮಾ. 3ರಿಂದ 5ರವರೆಗೆ ಶ್ರದ್ಧಾಭಕ್ತಿಯಿಂದ ನಡೆಯಲಿದೆ. ಸುಮಾರು 300 ವರ್ಷಗಳ ನಂತರ 50ಲಕ್ಷ ರೂ.ವೆಚ್ಚದಲ್ಲಿ ಅದ್ಧೂರಿ ಮಹೋತ್ಸವ ಜರುಗಲಿದ್ದು, ಈ ದೈವತಾ ಕಾರ್ಯದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಜೀರ್ಣೋದ್ಧಾರ ಹಾಗೂ ಆಡಳಿತ ಮಂಡಳಿ ಸಮಿತಿ ತಿಳಿಸಿದೆ.

ಜಾತ್ರಾ ಮಹೋತ್ಸವದ ಅಂಗವಾಗಿ ಪೆರಾಜೆಯ ಶ್ರೀಶಾಸ್ತಾವು ದೇವಸ್ಥಾನದಿಂದ ಮಾ. 3ರಂದು ಬೆಳಿಗ್ಗೆ 7.30 ಕ್ಕೆ ಹಸಿರು ವಾಣಿ ಮೆರವಣಿಗೆ ಹೊರಡಲಿದೆ. ಬಳಿಕ ಉಗ್ರಾಣ ತುಂಬುವ ಕಾರ್ಯಕ್ರಮ ನಡೆಯಲಿದೆ. 11 ಗಂಟೆಯಿಂದ ಧಾರ್ಮಿಕ ಸಭೆ ನಡೆಯಲಿದೆ. ಸಂಜೆ 5 ಗಂಟೆಕ್ಕೆ ದೈವಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ದೈವಗಳ ಕೂಡುವಿಕೆ, ಶ್ರೀಪೊಟ್ಟನ್ ದೈವ ಕಾರ್ಯಕ್ರಮ ನಡೆಯಲಿದೆ. 4ರಂದು ಬೆಳಿಗ್ಗೆ 7ಗಂಟೆಯಿಂದ ಶ್ರೀ ಕೊರತಿಯಮ್ಮ ದೈವ, 8.30 ರಿಂದ ಚಾಮುಂಡಿ ದೈವ, 9.30 ರಿಂದ ಶ್ರೀ ವಿಷ್ಣುಮೂರ್ತಿ ದೈವ, 12ರಿಂದ ಶ್ರೀ ಗುಳಿಗ ದೈವದ ಕೋಲ, ಮಧ್ಯಾಹ್ನ 3 ಗಂಟೆಯಿಂದ ಶ್ರೀ ಕಾರ್ನೋನ್ ದೈವದ ವೆಳ್ಳಾಟಂ, ಸಂಜೆ 5 ರಿಂದ ಶ್ರೀ ಕೊರಚನ್ ದೈವದ ವೆಳ್ಳಾಟಂ, 7 ರಿಂದ ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಳಾಟಂ, ಲಾಟ ವಿಷ್ಣುಮೂರ್ತಿ ದೈವಗದ ಆರಂಭ ವೈನಾಟ್ ಕುಲವನ್ ದೈವದ ವೆಳ್ಳಾಟಂ, ರಾತ್ರಿ 12.30 ರಿಂದ ಶ್ರೀ ವಿಷ್ಣುಮೂರ್ತಿದೈವದ ಆರಂಭ ಆಗಲಿದೆ. 1 ಗಂಟೆಯಿಂದ ಶ್ರೀ ವಯನಾಟ್ ಕುಲವನ್ ದೈವದ ವೆಳ್ಳಾಟಂ ನಡೆಯಲಿದೆ.

ಮಾ. 5ರಂದು ಬೆಳಿಗ್ಗೆ 7 ಗಂಟೆಯಿಂದ ಶ್ರೀ ಕಾರ್ನೋನ್ ದೈವ, 9ರಿಂದ ಶ್ರೀ ಕೋರಚ್ಚನ್ ದೈವ, 11ರಿಂದ ಶ್ರೀ ಕಂಡನಾರ್ ಕೇಳನ್ ದೈವ, ಮಧ್ಯಾಹ್ನ 2ರಿಂದ ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ಮತ್ತು ಸೂಟೆ ಸಮರ್ಪಣೆ ನಡೆಯಲಿದೆ. 3 ಗಂಟೆಯಿಂದ ಶ್ರೀ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ ನಡೆಯಲಿದೆ.

ಇತಿಹಾಸ :

ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ವೈಷ್ಣವಾಂಶ, ಶೈವಾಂಶ ಶಕ್ತಿಯ ವಿವಿಧ ಅವತಾರ ಶಕ್ತಿಯ ದೈವಗಳನ್ನು ಕೋಲ ರೂಪದಲ್ಲಿ ಆರಾಧಿಸಲಾಗುತ್ತಿದೆ. ಅವುಗಳಲ್ಲಿ ವಯನಾಟ್ ಕುಲವನ್ ಸಹ ಒಂದು. ಚೈತನ್ಯಮೂರ್ತಿ ಶ್ರೀ ಪರಮಶಿವನ ಅಂಶಾವತಾರದ ಆದಿ ದಿವ್ಯನಾಗಿ ಶ್ರೀ ವಯನಾಟ್ ಕುಲವನ್ ಭೂಮಿಯಲ್ಲಿ ಅವತರಿಸಿ, ವೈನಾಡಿನಲ್ಲಿ ನೆಲೆಸಿದರು. ವೈನಾಡಿನ ರಕ್ಷಕನಾಗಿ ಶೈವಾಂಶ ಸಂಭೂತನಾದ ಶ್ರೀ ವಯನಾಟ್ ಕುಲವನ್ ಬೇಟೆಗಾರ ದೈವವೆಂದು ಕರೆಯಲ್ಪಡುತ್ತಿದೆ. ಮಲೆನಾಡಿಗೆ ಪ್ರವೇಶಿಸಿ ಶ್ರೀ ತೊಂಡಚ್ಚನ್ ಎಂದು ಕರೆಯಲ್ಪಟ್ಟು ಅನೇಕ ಪ್ರದೇಶಗಳಲ್ಲಿ ಸಂಚರಿಸಿ ತುಳುನಾಡಿಗೆ ಆಗಮಿಸಿ ಅಲ್ಲಿ ನೆಲೆ ನಿಂತ ಐತಿಹ್ಯವಿದೆ. ಭಾಗಮಂಡಲ ಸೀಮೆಯ ಪೆರಾಜೆ ಶ್ರೀ ಶಾಸ್ತವು ಕ್ಷೇತ್ರ ಪರಿಧಿಯ ಕುಂಬಳಚೇರಿಯಲ್ಲಿ ನೆಲೆ ನಿಂತಿರುವುದಾಗಿ ಹೇಳಲಾಗಿದೆ.