ಹುಬ್ಬಳ್ಳಿ: ಭಾನುವಾರದ (ಮಾ. 22) ಜನತಾ ಕರ್ಫ್ಯೂ ಸೇರಿ ಮುಂದಿನ ಕೆಲ ದಿನಗಳ ಕಾಲ ಧಾರವಾಡ ಜಿಲ್ಲೆ ಸ್ತಬ್ಧವಾಗಲಿದೆ. ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಪೂರೈಕೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಲಿದೆ.
ಕಳೆದ 1 ವಾರದಿಂದ ಮಾಲ್, ಜಾತ್ರೆ, ಚಿತ್ರಮಂದಿರ ಬಂದ್ ಇಡಲಾಗಿತ್ತು. ಶನಿವಾರದಿಂದ ರೆಸ್ಟೋರೆಂಟ್, ಬಾರ್, ವೈನ್ಶಾಪ್ ಬಂದ್ ಆಗಿವೆ. ಭಾನುವಾರದಿಂದ ಮಾ. 31ರವರೆಗೆ ಹೊಟೇಲ್, ರೆಸ್ಟೋರೆಂಟ್, ಡಬ್ಬಾ ಅಂಗಡಿ, ಬೀದಿ ಬದಿ ವ್ಯಾಪಾರ ಬಂದ್ ಇಡಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಡುಗೆ ಅನಿಲ ಪೂರೈಕೆ, ಹಾಲು, ದಿನಸಿ ಅಂಗಡಿ, ಔಷಧ ಅಂಗಡಿ ಮಾತ್ರ ತೆರದಿರಲಿವೆ. ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಕೋರಿದ್ದಾರೆ.
ರಾಜ್ಯದ ನಂ. 1 ದಿನ ಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ ನ್ಯೂಸ್’ ಸುದ್ದಿವಾಹಿನಿ ಶನಿವಾರ ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಈ ಘೊಷಣೆ ಮಾಡಿದರು.
ಫೋನ್ ಇನ್ ಕಾರ್ಯಕ್ರಮದಲ್ಲಿ ಜನತೆಯ ಅನೇಕ ಸಂದೇಹ, ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು, ಜಿಲ್ಲೆಯಲ್ಲಿ ಜನತಾ ಕರ್ಫ್ಯೂ ಭಾನುವಾರಕ್ಕೆ ಮಾತ್ರ ಸೀಮಿತವಾಗಬಾರದು. ಆದಷ್ಟು ದಿನ ಜನತೆ ಮನೆಯಲ್ಲೇ ಇದ್ದು ಬಿಡುವುದು ಒಳ್ಳೆಯದು. ಕರೊನಾ ಸೋಂಕು ನಿಯಂತ್ರಣಕ್ಕೆ ಜಿಲ್ಲೆಯ ಜನತೆ ಈ ರೀತಿಯಲ್ಲಿ ಸಹಕಾರ ನೀಡಬೇಕು ಎಂದರು.
ಕರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಯಾರೂ ಮನೆಯಿಂದ ಹೊರಗೆ ಬರಬೇಡಿ. ಮನೆಯಲ್ಲಿ ಇದ್ದರೆ ನಿಮಗೂ ಬರುವುದಿಲ್ಲ. ನಿಮ್ಮ ಮೂಲಕ ಮನೆಯ ಸದಸ್ಯರಿಗೂ ಬರುವುದಿಲ್ಲ. 60 ವರ್ಷ ಮೇಲ್ಪಟ್ಟವರು, ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಿದೆ. ಸಾರ್ವಜನಿಕ ಸ್ಥಳದಲ್ಲಿ ಅಂತರ ಕಾಯ್ದುಕೊಳ್ಳಬೇಕು. ಇವನ್ನೆಲ್ಲ ಪಾಲಿಸುವ ಮೂಲಕ ಧಾರವಾಡ ಜಿಲ್ಲೆಯನ್ನು ನಾವು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಿದೆ ಎಂದು ಹೇಳಿದರು.
ಕೈ ತೊಳೆದುಕೊಳ್ಳುತ್ತಿರಿ: ಸೋಂಕಿತ ವ್ಯಕ್ತಿಯಿಂದ ಸಾಮಾನ್ಯ ವ್ಯಕ್ತಿಗೆ ರೋಗ ಹರಡುವ ಅಪಾಯವಿರುತ್ತದೆ. ಇದನ್ನು ತಪ್ಪಿಸಲು ನಿಯಮಿತವಾಗಿ ಕೈ ತೊಳೆದುಕೊಳ್ಳುತ್ತ ಇರಬೇಕು. ಹ್ಯಾಂಡ್ವಾಷ್ ಹಾಗೂ ಸ್ಯಾನಿಟೈಜರ್ ಬಳಸಿ ಕೈ ನೈರ್ಮಲ್ಯ ಕಾಪಾಡಿಕೊಳ್ಳಿ. ಕರೊನಾ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಹಾಗಂತ ಲಘುವಾಗಿಯೂ ತೆಗೆದುಕೊಳ್ಳಬಾರದು. ಕಟ್ಟೆಚ್ಚರ ವಹಿಸಿದರೆ ನಿಮ್ಮ ಕುಟುಂಬ ಹಾಗೂ ಸಮಾಜ ಸುರಕ್ಷಿತವಾಗಿರಲಿದೆ ಎಂದರು.
ಎಲ್ಲ ಸ್ತರದಲ್ಲಿ ಜನಜಾಗೃತಿ: 15 ದಿನದಿಂದ ಜಿಲ್ಲೆಯಲ್ಲಿ ಗ್ರಾ.ಪಂ. ಮಟ್ಟದವರೆಗೂ ಜಾಗೃತಿ ಮೂಡಿಸಲಾಗುತ್ತಿದೆ. ಆರೋಗ್ಯ ಇಲಾಖೆಯ ಬೇರೆ ಬೇರೆ ಸ್ತರದ ಉದ್ಯೋಗಿಗಳು ಜನರಿಗೆ ತಿಳಿವಳಿಕೆ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಕರೊನಾ ಪ್ರಕರಣ ಪತ್ತೆಯಾಗಿಲ್ಲ. ಒಂದು ವೇಳೆ ಪತ್ತೆಯಾದರೂ ಕೂಡಲೇ ಚಿಕಿತ್ಸೆ ನೀಡಲು ಹುಬ್ಬಳ್ಳಿ ಕಿಮ್್ಸ, ಧಾರವಾಡ ಜಿಲ್ಲಾ ಆಸ್ಪತ್ರೆ, ರೈಲ್ವೆ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆ ಇದೆ. ಜನರು ಆತಂಕ ಪಡಬೇಕಿಲ್ಲ. ಆದರೆ, ಅಗತ್ಯವಾಗಿ ಮುನ್ನೆಚ್ಚರಿಕೆ ವಹಿಸಿ, ಎಲ್ಲ ರೀತಿಯಲ್ಲಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಯವರು ಹೇಳಿದರು.
ಸಹಕಾರ ನೀಡದಿದ್ದರೆ ಕ್ರಿಮಿನಲ್ ಕೇಸ್: ವಿದೇಶದಿಂದ ಬರುವವರು ಕಡ್ಡಾಯವಾಗಿ ಪರೀಕ್ಷೆಗೆ ಒಳಗಾಗಬೇಕು. ವರದಿ ನೆಗೆಟಿವ್ ಇದ್ದರೂ ಕೆಲವು ದಿನಗಳ ಕಾಲ ಕ್ವಾರಂಟೈನ್ಗೆ (ಮನೆಯವರಿಂದ ದೂರ ಉಳಿಯುವುದು) ಒಳಪಡಬೇಕಾಗುತ್ತದೆ. ಯಾರಾದರೂ ಕ್ವಾರಂಟೈನ್ನಿಂದ ತಿಳಿಸದೇ ಹೊರ ಹೋದರೆ ಕ್ರಿಮಿನಲ್ ಪ್ರಕರಣ ದಾಖಸಲಿಸುತ್ತೇವೆ ಎಂದು ಹೇಳಿದರು. ‘ಹುಬ್ಬಳ್ಳಿ ಗಣೇಶಪೇಟ ಮೀನು ಮಾರುಕಟ್ಟೆ ಬಂದ್ ಇಡುವಂತೆ ಪಾಲಿಕೆಯವರು ನೋಟಿಸ್ ಕೊಟ್ಟಿಲ್ಲ. ಇಲ್ಲಿಯೂ ಸಹ ಜನಜಂಗುಳಿ ಇರುತ್ತದೆ. ಮೀನು ಮಾರುಕಟ್ಟೆ ಪ್ರದೇಶದಲ್ಲಿ ಸ್ವಚ್ಛತೆಯೂ ಇಲ್ಲ’ ಎಂದು ರಮೇಶ ಎಂಬುವವರು ಜಿಲ್ಲಾಧಿಕಾರಿಗೆ ಕರೆ ಮಾಡಿ ದೂರಿದರು. ಮೀನು ಮಾರುಕಟ್ಟೆಯಲ್ಲಿ ಹೆಚ್ಚಿನ ಜನ ಸೇರದ ಹಾಗೇ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಉತ್ತರಿಸಿದರು. ಧಾರವಾಡದ ರವಿವಾರಪೇಟ ಮಾರುಕಟ್ಟೆಯಲ್ಲೂ ಸ್ವಚ್ಛತೆ ಕಾಪಾಡಿಕೊಂಡಿಲ್ಲ ಎಂದು ಸಾರ್ವಜನಿಕರೊಬ್ಬರು ದೂರಿಕೊಂಡರು. ತಕ್ಷಣ ಪಾಲಿಕೆ ಅಧಿಕಾರಿಗಳನ್ನು ಕಳುಹಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಗಾಳಿಯಲ್ಲಿ ಸೋಂಕು ಹರಡಲ್ಲ: ಧಾರವಾಡದ ಕಿರಣ್ ಎನ್ನುವವರು ‘ಗಾಳಿಯಲ್ಲಿ ಕರೊನಾ ಸೋಂಕು ಹರಡುತ್ತದೆಯೆ’ ಎಂದು ಕೇಳಿದರು. ಗಾಳಿಯಿಂದ ಈ ಸೋಂಕು ಹರಡುವುದಿಲ್ಲ. ಡ್ರಾಪ್ಲೆಟ್ಸ್ ಮೂಲಕ ಹರಡುವ ಸಾಧ್ಯತೆ ಇದೆ. ಸೋಂಕು ಇರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಹರಡುತ್ತದೆ. ಹೀಗಾಗಿ ಇನ್ನೊಬ್ಬರಿಂದ 1 ಮೀಟರ್ ಅಂತರ ಇಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.
ನವನಗರದಲ್ಲಿ ಕರೊನಾ ನಿಜಾನಾ?: ನವನಗರದ ಜಯಶ್ರೀ ಪಾಟೀಲ, ಸುಳ್ಳದ ವಿದ್ಯಾ ಹಿರೇಮಠ ಎನ್ನುವವರು ನವನಗರದಲ್ಲಿ ಕರೊನಾ ಸೋಂಕು ಉಳ್ಳವರು ಪತ್ತೆಯಾಗಿದ್ದಾರೆ ಎಂದು ಕೇಳಿಬರುತ್ತಿದೆ, ನಿಜವೆ? ಎಂದು ಪ್ರಶ್ನಿಸಿದರು. ಇಲ್ಲ, ಇದು ಸುಳ್ಳು ಸುದ್ದಿ. ಇದನ್ನು ಹರಡಿದವರ ವಿರುದ್ಧ ಕ್ರಮಕ್ಕೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಭಯ ಪಡಬೇಡಿ ಎಂದು ಡಿ.ಸಿ. ವಿವರಿಸಿದರು. ನವನಗರದ ಬಗ್ಗೆ ಏಕೆ ಕೇಳುತ್ತಿದ್ದೀರಾ ಎಂದಾಗ ವಿದ್ಯಾ ಹಿರೇಮಠ, ‘ಅಲ್ಲಿ ನನ್ನ ಹಬಿ(ಪತಿ) ಕೆಲಸ ಮಾಡುತ್ತಿದ್ದಾರೆ’ ಎಂದರು.
ಮದುವೆ ದಿನಾಂಕ ಮುಂದೂಡಿ: ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಮದುವೆ ಸಮಾರಂಭಗಳಿಗೂ ಬ್ರೇಕ್ ಹಾಕಿದೆ. ಈಗಾಗಲೇ ಯಾರಾದ್ದಾದರೂ ಮದುವೆ ನಿಶ್ಚಯವಾಗಿದ್ದರೆ ಅಂಥವರು ದಿನಾಂಕ ಮುಂದೂಡಬೇಕು, ಮದುವೆ ದಿನಾಂಕ ಇನ್ನಷ್ಟೇ ನಿಗದಿ ಮಾಡುವುದಿದ್ದರೆ ಕನಿಷ್ಠ ಇನ್ನೂ ಒಂದು ತಿಂಗಳು ಕಾದು ನೋಡಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.
ಕರೊನಾ ಸೋಂಕಿತ ವ್ಯಕ್ತಿಗಳಿಂದ ದೂರವಿರುವ ಮೂಲಕವೇ ವೈರಸ್ ತಡೆಗಟ್ಟಬಹುದು. ಹಾಗಾಗಿ ಮದುವೆ ಹೆಸರಲ್ಲಿ ಜನ ಒಂದೆಡೆ ಸೇರಿ ಅನಗತ್ಯವಾಗಿ ಸೋಂಕು ಹರಡುವುದನ್ನು ತಡೆಯಬೇಕಾಗಿದೆ. ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಮುಂದಿನ ಆದೇಶದವರೆಗೆ ಯಾವುದೇ ಮದುವೆ ಸಮಾರಂಭಗಳಿಗೆ ಅನುಮತಿ ಇರುವುದಿಲ್ಲ.
ಜಾತ್ರೆಗಳೂ ಬಂದ್: ಧಾರವಾಡ ಜಿಲ್ಲೆಯಾದ್ಯಂತ ಎಲ್ಲ ಜಾತ್ರೆ ಸಂತೆಗಳನ್ನು ಬಂದ್ ಮಾಡಲಾಗಿದೆ. ಕಲಘಟಗಿ, ಯಮನೂರ ಜಾತ್ರೆಗೆ ಹೆಚ್ಚು ಜನ ಸೇರುತ್ತಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಸ್ಥಗಿತಗೊಳಿಸಲಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಗೆ ಅಕ್ಕಪಕ್ಕದ ಜಿಲ್ಲೆಯಿಂದಲೂ ಜನರು ಶಾಪಿಂಗ್ಗೆ ಬರುತ್ತಾರೆ. ಭಾನುವಾರದಿಂದ ಎಲ್ಲ ಶಾಪಿಂಗ್ ಮಳಿಗೆ, ಬಟ್ಟೆ ಅಂಗಡಿಗಳೂ ಬಂದ್ ಆಗಲಿವೆ. ಬೇರೆ ಜಿಲ್ಲೆಯವರೂ ಹುಬ್ಬಳ್ಳಿ-ಧಾಋವಾಡಕ್ಕೆ ಬರಬಾರದು. ಇಲ್ಲಿಂದ ಬೇರೆ ಕಡೆ ಹೋಗಬಾರದು. ಒಂದು ವೇಳೆ ಆದೇಶ ಮೀರಿ ಯಾರಾದರೂ ಮದುವೆ, ಸಭೆ, ಸಮಾರಂಭ ನಡೆಸಿದ್ದಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅವಧಿಗಿಂತ ಮೊದಲೇ: ಬೆಳಗ್ಗೆ 11.30ಕ್ಕೆ ನಿಗದಿಯಾಗಿದ್ದ ಫೋನ್ ಇನ್ ಕಾರ್ಯಕ್ರಮಕ್ಕೆ ಬೆಳಗ್ಗೆಯಿಂದಲೇ ಕರೆಗಳು ಬರಲು ಆರಂಭಿಸಿದ್ದವು. 10.45ಕ್ಕೆ ಕಚೇರಿಗೆ ಆಗಮಿಸಿದ ಜಿಲ್ಲಾಧಿಕಾರಿಯವರು ತಡ ಮಾಡದೇ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲು ಮುಂದಾದರು. ಮಧ್ಯಾಹ್ನ 1 ಗಂಟೆ ನಂತರವೂ ಕರೆಗಳು ಬರುತ್ತಲೇ ಇದ್ದವು. ಕರೊನಾ ಬಗ್ಗೆ ಜನರು ಕೇಳಿದ ಪ್ರತಿ ಪ್ರಶ್ನೆಗೆ ಬೇಸರಿಸಿಕೊಳ್ಳದೇ ಸೂಕ್ತ ಉತ್ತರಗಳನ್ನು ಜಿಲ್ಲಾಧಿಕಾರಿ ಹಾಗೂ ಅವರ ತಂಡದವರು ನೀಡಿದರು.
ಜಿಲ್ಲಾಧಿಕಾರಿಯವರು ಹೇಳಿದ್ದು: ವಿದೇಶದಿಂದ ಬಂದವರಿಗೆ ಛಾಪಾ ಹಾಕ್ತೀವಿ. ಮನೆಯಲ್ಲೇ ಪ್ರತ್ಯೇಕವಾಗಿರಬೇಕಾದವರು ಹೊರಗಡೆ ಓಡಾಡಿದರೆ ಕ್ರಿಮಿನಲ್ ಕೇಸ್. ವಿದೇಶದಿಂದ ಮರಳಿದವರ ಮಾಹಿತಿ ಇದ್ದರೆ ಸಹಾಯವಾಣಿಗೆ ತಿಳಿಸಿ. ಪರಿಸ್ಥಿತಿಯನ್ನು ಯಾರು ಲಘುವಾಗಿ ಪರಿಗಣಿಸಬೇಡಿ. ಹಳ್ಳಿಯವರು ಹಳ್ಳಿಯಲ್ಲೇ ಇರಿ, ಪೇಟೆಗೆ ಬರದಿರಿ. ಜನತಾ ಕರ್ಫ್ಯೂ ಭಾನುವಾರಕ್ಕಷ್ಟೇ ಸೀಮಿತವಾಗದಿರಲಿ.
ಮೇಡಂ ಆರಾಮಿದ್ದೀರಾ?: ನವಲಗುಂದದಿಂದ ಕರೆ ಮಾಡಿದ್ದ ಕರೆಪ್ಪ ಅಡವಿ ಎಂಬುವವರು ಮೇಡಂ ಆರಾಮಿದ್ದೀರಾ? ಎಂದು ಆತ್ಮೀಯತೆಯಿಂದ ಮಾತು ಆರಂಭಿಸಿದರು. ಅದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್, ನಾನ್ ಆರಾಮಾಗಿದ್ದೇನೆ... ನೀವು... ಎಂದು ವಿಚಾರಿಸಿ ಧನ್ಯವಾದ ತಿಳಿಸಿದರು. ಕರೊನಾ ಭಯ ಎಲ್ಲೆಡೆ ಹರಡಿದೆ. ಎಲ್ಲರೂ ಮಾಸ್ಕ್ ಧರಿಸಬೇಕೆ? ಎಂದು ಕರೆಪ್ಪ ಕೇಳಿದರು. ಹಾಗೇನಿಲ್ಲ, ಆರೋಗ್ಯವಾಗಿರುವವರು ಮಾಸ್ಕ್ ಧರಿಸವುದು ಬೇಡ, ಮನೆಯಲ್ಲಿದ್ದರೆ ಸಾಕು, ವಯಸ್ಸಾದವರು ಹೊರಗೆ ಬರುವುದು ಬೇಡ ಎಂದು ಸಲಹೆ ನೀಡಿದರು.
ಎಸಿ ಬಸ್ ನಿಲ್ಲಿಸಿ: ಕರೆ ಮಾಡಿದವರೊಬ್ಬರು ಅವಳಿನಗರ ಮಧ್ಯದ ಎಸಿ ಬಸ್ ನಿಲ್ಲಿಸಿ ಎಂದು ಒತ್ತಾಯಿಸಿದರು. ಉತ್ತರಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್, ಏನ್ ಚಿಂತೆ ಮಾಡಬೇಡ್ರಿ... ಬಿಆರ್ಟಿಎಸ್ ಎಂಡಿಯವರಿಗೆ ಹೇಳ್ತೀನಿ ತಗೊಳ್ರಿ ಎಂದರು.
ಖಾಸಗಿ ಆಸ್ಪತ್ರೆ ಸಹಕಾರ: ಸದ್ಯ ಜಿಲ್ಲೆಯಲ್ಲಿ ಕರೊನಾ ಶಂಕಿತರಿಗೆ ಸರ್ಕಾರಿ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 250ಕ್ಕೂ ಹೆಚ್ಚು ಬೆಡ್ನ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಬಿದ್ದರೆ ಖಾಸಗಿ ಆಸ್ಪತ್ರೆಗಳ ಸೇವೆ ಪಡೆಯಲು ಸಿದ್ಧ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಾಸ್ಕ್ ಸಂದೇಹದ ಕರೆಗಳೇ ಹೆಚ್ಚು: ಹೆಚ್ಚು ಕರೆಗಳು ಬಂದಿದ್ದು ಮಾಸ್ಕ್ ಕಡ್ಡಾಯವೇ ಎಂಬ ಸಂದೇಹದ ಕುರಿತು. ಕೆಲವರು ಜಿಲ್ಲಾಡಳಿತದಿಂದ ಮಾಸ್ಕ್ ವಿತರಿಸುವಂತೆ ಮನವಿ ಮಾಡಿದರೆ, ಇನ್ನೂ ಕೆಲವರು ಹೆಚ್ಚಿನ ದರಕ್ಕೆ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ದೂರಿದರು. ಮಾಸ್ಕ್ ಪ್ರತಿಯೊಬ್ಬರಿಗೂ ಕಡ್ಡಾಯವಲ್ಲ. ಅಗತ್ಯ ಇಲ್ಲದವರು ಮಾಸ್ಕ್ ಖರೀದಿಸಬೇಡಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಕೆಮ್ಮು, ಸೀನು, ಅಲರ್ಜಿ ಇರುವವರು, ಹಿರಿಯ ನಾಗರಿಕರು, ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಮಾತ್ರ ಮಾಸ್ಕ್ ಧರಿಸಲಿ. ಆರೋಗ್ಯವಂತರಿಗೆ ಮಾಸ್ಕ್ ಕಡ್ಡಾಯವಲ್ಲ ಎಂದರು.
ಧಾರವಾಡ ಜಿಲ್ಲೆಗೆ ಬರಬೇಡಿ: ಕರೊನಾ ಸೋಂಕು ಹರಡುವುದನ್ನು ಎಲ್ಲ ರೀತಿಯಿಂದ ತಡೆಗಟ್ಟಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಬೇರೆ ಕಡೆಯಿಂದ ಧಾರವಾಡ ಜಿಲ್ಲೆಗೆ ಯಾರೂ ಬರಬೇಡಿ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಮನವಿ ಮಾಡಿದ್ದಾರೆ.
ವಿಜಯವಾಣಿ ಹುಬ್ಬಳ್ಳಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕರೆಗಳಿಗೆ ಅವರು ಉತ್ತರಿಸಿದ ಅವರು, ಅಕ್ಕಪಕ್ಕದ ಜಿಲ್ಲೆಗಳಿಂದ ಧಾರವಾಡ ಜಿಲ್ಲೆಗೆ ಯಾರೂ ಬರಬಾರದು ಹಾಗೂ ಜಿಲ್ಲೆಯಿಂದ ಯಾರೂ ಹೊರಗೆ ಹೋಗಬಾರದು. ಈಗಾಗಲೇ ಎಲ್ಲ ವಾಣಿಜ್ಯ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗಿದೆ. ಹುಬ್ಬಳ್ಳಿ ವಾಣಿಜ್ಯ ಕೇಂದ್ರವಾಗಿರುವುದರಿಂದ ಹೆಚ್ಚು ಜನ ಬೇರೆ ಕಡೆಯಿಂದ ಬರುತ್ತಾರೆ. ಅದನ್ನು ನಿಲ್ಲಿಸಬೇಕಾಗಿದೆ ಎಂದರು. ಹೊರದೇಶದಿಂದ ಜಿಲ್ಲೆಗೆ ಬಂದವರಿಗೆ ಕರೊನಾ ಇದ್ದರೆ ಸೋಂಕು ವೇಗವಾಗಿ ಹರಡುತ್ತದೆ. ಹಾಗಾಗಿ ಹೊರದೇಶ ಅಥವಾ ಸೋಂಕು ಪ್ರಬಲವಾಗಿರುವ ರಾಜ್ಯಗಳಿಂದ ಬಂದಿರುವ ಜನರ ಮೇಲೆ ನಿಗಾ ಇಡಲಾಗಿದೆ. ಹಾಗೇನಾದರೂ ಹೊರಗಡೆಯಿಂದ ಬಂದವರ ಬಗ್ಗೆ ಮಾಹಿತಿ ಇದ್ದರೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ತಿಳಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ. ಬಿ.ಸಿ. ಸತೀಶ, ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ ಅವರು ಉಪಸ್ಥಿತರಿದ್ದರು.
ಮಾಸ್ಕ್ ದಾಳಿ: ಆರೋಗ್ಯ ಸೇವೆಯಲ್ಲಿ ತೊಡಗಿದವರು ಮಾಸ್ಕ್ ಧರಿಸಬೇಕು. ಆರೋಗ್ಯವಾಗಿರುವ ಸಾಮಾನ್ಯ ಜನರು ಮಾಸ್ಕ್ ಹಾಕಿಕೊಳ್ಳುವ ಅಗತ್ಯವಿಲ್ಲ. ಕೆಮ್ಮು, ಶೀತವಾದರೆ ಮಾಸ್ಕ್ ಹಾಕಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಮಾಸ್ಕ್ಗಳಿಗೆ ಹೆಚ್ಚು ಬೇಡಿಕೆ ಇದೆ. ಹಾಗೆಂದು ಹೆಚ್ಚು ದರಕ್ಕೆ ಮಾರಾಟ ಮಾಡುವುದು ಗಮನಕ್ಕೆ ಬಂದರೆ ಅಂತಹ ಮಳಿಗೆ ಮೇಲೆ ದಾಳಿ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ನೀರು ನಿಲ್ಲದಂತೆ ನೋಡಿಕೊಳ್ಳಿ: ಕಳೆದ ಕೆಲ ತಿಂಗಳ ಹಿಂದೆ ಉಂಟಾದ ಪ್ರವಾಹದಿಂದ ರೋಗಗಳು ಉಲ್ಬಣಿಸುತ್ತವೆ. ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವಂತೆ ಮೂರ್ನಾಲ್ಕು ತಿಂಗಳ ಹಿಂದೆಯೇ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾಗಿ ಕಿರೇಸೂರ ಗ್ರಾಮದ ವೀರಣ್ಣ ಕೊಂಡಗೋಳಿ ಎಂಬುವವರು ಹೇಳಿದರು.
ತಕ್ಷಣ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಿ ಎಂದು ಕೋರಿದರು. ಇದಕ್ಕೆ ಡಿಸಿ ಮೇಡಂ ಸಕಾರಾತ್ಮಕವಾಗಿ ಸ್ಪಂದಿಸಿದರು.
ಪಾಲಿಕೆ ಕರ್ತವ್ಯ ಲೋಪಕ್ಕೆ ಜನರ ಆಕ್ರೋಶ: ಕರೊನಾ ಸೋಂಕಿನ ಭಯ ಎಲ್ಲೆಡೆ ಆವರಿಸಿರುವ ಬೆನ್ನಲ್ಲೇ ಹುಬ್ಬಳ್ಳಿ ನಗರದಲ್ಲಿ ಸ್ವಚ್ಛತೆ ಸರಿಯಾಗಿ ಕೈಗೊಳ್ಳದ ಮಹಾನಗರ ಪಾಲಿಕೆ ವಿರುದ್ಧ ದೂರುಗಳ ಸರಮಾಲೆಯೇ ಹರಿದು ಬಂದಿದೆ.
ವಿಜಯವಾಣಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಹಲವರು ಕರೆ ಮಾಡಿ ಸ್ವಚ್ಛತೆ ಕೊರತೆ ಬಗ್ಗೆ ಗಮನಕ್ಕೆ ತಂದರು.
ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ. ಜಿಲ್ಲಾಧಿಕಾರಿಯವರ ಕಾರ್ಯ ಶ್ಲಾಘನೀಯ. ಆದರೆ, ಅದೇ ವೇಗದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ನಗರದಲ್ಲಿ ಸ್ವಚ್ಛತೆ ನಿರ್ಲಕ್ಷಿಸಲಾಗಿದೆ. ತೊಟ್ಟಿಗಳಿಂದ ಕಸ ಎತ್ತುತ್ತಿಲ್ಲ ಎಂದರು.
ಹುಬ್ಬಳ್ಳಿಯ ದಾಜಿಬಾನಪೇಟ, ಚನ್ನಪೇಟ, ಹಳೇಹುಬ್ಬಳ್ಳಿ, ಮುಂತಾದೆಡೆ ಎಲ್ಲೆಂದರಲ್ಲಿ ಕಸ ಬಿದ್ದಿದೆ. ಕೊಳಕು, ಗಲೀಜು ಹರಿದಾಡುತ್ತಿದ್ದು, ಗಬ್ಬು ವಾಸನೆ ಹರಡಿದೆ. ಗಣೇಶಪೇಟ ಮೀನು ಮಾರುಕಟ್ಟೆ ಹಾಗೂ ಸುತ್ತಮುತ್ತ ಸ್ವಚ್ಛತೆಯೇ ಇಲ್ಲ ಎಂದು ಕರೆ ಮಾಡಿದ ಹಲವರು ದೂರಿದರು. ಸ್ವಚ್ಛತೆಗೆ ಗಮನ ಹರಿಸುವಂತೆ, ಜನರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿ ಎಂದು ಮನವಿ ಮಾಡಿದರು.
ಇನ್ನು ದಾಜಿಬಾನಪೇಟನಲ್ಲಿರುವ ಬಟ್ಟೆ ಅಂಗಡಿಗಳಿಗೆ ಖರೀದಿಗೆಂದು ಜನ ಮುಗಿ ಬೀಳುತ್ತಿದ್ದಾರೆ. ಅನೇಕ ಅಂಗಡಿಗಳಲ್ಲಿ ಕೈ ತೊಳೆಯುವ ವ್ಯವಸ್ಥೆ ಇಲ್ಲ. ಮುಖಕ್ಕೆ ಮಾಸ್ಕ್ ಹಾಕುತ್ತಿಲ್ಲ. ಹೆಚ್ಚು ಜನ ಸೇರುತ್ತಿರುವುದರಿಂದ ಸೋಂಕು ಹರಡುವ ಅಪಾಯ ಇದೆ ಎಂದು ಅನೇಕರು ಫೋನ್ ಮಾಡಿ ಕಳಕಳಿ ವ್ಯಕ್ತಪಡಿಸಿದರು.