ಜಿಲ್ಲೆ

ಇಂದಿನಿಂದ ಕೋಟಿ ದತ್ತ ಜಪಯಜ್ಞ

ಅರಸೀಕೆರೆ: ಕಂತೇನಹಳ್ಳಿ ಬಡಾವಣೆಗೆ ಹೊಂದಿಕೊಂಡಂತಿರುವ ಶ್ರೀಶನೈಶ್ಚರ ಸ್ವಾಮಿ ಕ್ಷೇತ್ರದಲ್ಲಿ ಲೋಕ ಕಲ್ಯಾಣಾರ್ಥವಾಗಿ ಜು.10ರಿಂದ 13ರವರೆಗೆ ಕೋಟಿ ದತ್ತ ಜಪ ಯಜ್ಞ ಸಮರ್ಪಣಾ ಧಾರ್ಮಿಕ ವಿಧಾನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇಗುಲದ ಪ್ರಧಾನ ಅರ್ಚಕ ಮುರಳಿ ಮಂದಾರ್ಥಿ ತಿಳಿಸಿದ್ದಾರೆ.

10ರಂದು ಗುರುವಾರ ಬೆಳಗ್ಗೆ 8 ಗಂಟೆಗೆ ಗುರುಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ದೇವನಂದಿ, ಅಂಕುರಾರ್ಪಣೆ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳನ್ನು ಹುಬ್ಬಳ್ಳಿ ಆಶ್ರಮದ ಶ್ರೀ ರಮೇಶ್ ಅವಧೂತರು ನೆರವೇರಿಸಲಿದ್ದಾರೆ. 11ರಂದು ಬೆಳಗ್ಗೆ 8.30ಕ್ಕೆ ದತ್ತಹೋಮ, ಪೂರ್ಣಾಹುತಿ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. 12ರಂದು ಬೆಳಗ್ಗೆ 8 ಗಂಟೆಗೆ ದತ್ತಹೋಮ ನಡೆಯಲಿದೆ. ಪ್ರವಾಸಿ ಮಂದಿರದ ಆವರಣದಿಂದ 10 ಗಂಟೆಗೆ ಹೊಸದುರ್ಗ ಕುಂಚಿಟಿಗ ಮಠದ ಶ್ರೀ ಶಾಂತವೀರ ದೇಶೀಕೇಂದ್ರ ಸ್ವಾಮೀಜಿ, ಸಚ್ಚಿದಾನಂದ ಸೇವಾಶ್ರಮದ ಸತೀಶ್ ಶರ್ಮ ಗುರೂಜಿ, ಶ್ರೀ ರಮೇಶ್ ಅವಧೂತರನ್ನು ಮೆರವಣಿಗೆ ಮೂಲಕ ದೇಗುಲಕ್ಕೆ ಕರೆತರಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್, ಮಾಜಿ ಅಧ್ಯಕ್ಷ ಪಂಚಾಕ್ಷರಿ, ಸದಸ್ಯ ಯುವರಾಜ್, ಸುಜಾತಾ ರಮೇಶ್, ಮಂಜುನಾಥ್, ವೀರಭದ್ರಪ್ಪ ಪಾಲ್ಗೊಳ್ಳುವರು. 13ರಂದು ಮಧ್ಯಾಹ್ನ 12.30ಕ್ಕೆ ಕೋಟಿ ದತ್ತ ಜಪಯಜ್ಞದ ಪೂರ್ಣಾಹುತಿಯೊಂದಿಗೆ ಎಲ್ಲ ಪೂಜಾ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ ಎಂದರು.

ನಗರಸಭೆ ಸದಸ್ಯ ಯುವರಾಜ್, ವೀರಭದ್ರಪ್ಪ, ಮಂಜುನಾಥ್ ಇದ್ದರು.