ಬಳ್ಳಾರಿ : ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಸೆ. 05 ರಿಂದ 8 ರವರೆಗೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಗ್ರಾಪಂ, ರಂಗತೋರಣ ಸಂಸ್ಥೆ ಸಹಯೋಗದೊಂದಿಗೆ ಕಪ್ಪಗಲ್ಲು ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ರಂಗತೋರಣ ಸಂಸ್ಥೆ ವತಿಯಿಂದ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸೆ. 5 ರಂದು ಎಚ್.ಎನ್. ಭೀಮೇಶ ನಿದೇರ್ಶನದ ‘ ಶ್ರೀ ಕೃಷ್ಣ ಸಂಧಾನ(ನಗೆ ನಾಟಕ)’ ವನ್ನು ಸಿರಿಗೇರಿ ಧಾತ್ರಿ ರಂಗಸಂಸ್ಥೆ ಪ್ರದರ್ಶಿಸಿಲಿದ್ದಾರೆ. ಮಹಾದೇವ ಹೊಸೂರು ನಿರ್ದೇಶನದ ಸೆ. 6 ರಂದು ‘ ಜ್ವಾಕಿ ತಂಗಿ ’, ಸೆ. 7ರಂದು ‘ ಸಂಪೂರ್ಣ ಹೇಮರೆಡ್ಡಿ ಮಲ್ಲಮ್ಮ ’, ಸೆ. 8 ರಂದು ‘ ಮುದುಕನ ಮದುವೆ ’ ಮೂರು ನಾಟಕಗಳನ್ನು ಪಂ. ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘ ಪ್ರದರ್ಶನ ನೀಡಲಿದೆ. ಕಾರ್ಯಕ್ರಮವನ್ನು ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಉದ್ಘಾಟಿಸಿಲಿದ್ದಾರೆ. ಈ ಮುಂಚೆ ರಂಗತೋರಣದ ತಯಾರಿಯ ‘ ಮುದ್ದಣ್ಣನ ಪ್ರಮೋಷನ್ ಪ್ರಸಂಗ, ಗಿರಿಜಾ ಕಲ್ಯಾಣ, ಸಂಜೆಹಾಡು, ದೂರದ ಹಕ್ಕಿಯ ಮೊದಲಾದ ನಾಟಕಗಳನ್ನು ‘ ರಂಗಸವಾರಿ ’ ಹೆಸರಿನಲ್ಲಿ ಹಲವಾರು ಗ್ರಾಮಗಳಲ್ಲಿ ಪ್ರದರ್ಶಿಸಿದೆ. ಅದರಂತೆ, ಕಳೆದ ವರ್ಷವೂ ಕಪ್ಪಗಲ್ಲು ಗ್ರಾಮದಲ್ಲಿ ಮೂರು ದಿನಗಳ ನಾಟಕೋತ್ಸವ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದರು.