ಜಿಲ್ಲೆ

ಇಂದಿನಿಂದ ಅಭಿಯಾನ ಶಿಬಿರ

ಚಾಮರಾಜನಗರ: ಚಾಮರಾಜನಗರ ಭಾಗಶಃ ಅರಣ್ಯ ಪ್ರದೇಶದಿಂದ ಕೂಡಿರುವ ಜಿಲ್ಲೆ. ಕಾಡಿನೊಳಗೆ ಮತ್ತು ಕಾಡಂಚಿನ ಗ್ರಾಮಗಳಲ್ಲಿ ಪರಿಶಿಷ್ಟ ಪಂಗಡದ ಬುಡಕಟ್ಟು ಸಮುದಾಯದ ಜನರು ವಾಸ ಮಾಡುತ್ತಿದ್ದಾರೆ. ಇವರಿಗೆ ದಾಖಲೆಗಳನ್ನು ಒದಗಿಸುವ ಸಲುವಾಗಿ ಜೂ.16ರಿಂದ 30ವರೆಗೆ ಅಭಿಯಾನ ಜಾಗೃತಿ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಧರ್ತಿ ಆಬಾ ಜನ ಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಬುಡಕಟ್ಟು ಸಮುದಾಯದ ಜನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಬೇಕಾಗುವ ದಾಖಲಾತಿಗಳನ್ನು ಒದಗಿಸುವುದು ಮತ್ತು ಯೋಜನೆ ಕುರಿತು ಅರಿವು ಮೂಡಿಸುವ ಸಲುವಾಗಿ ಧರ್ತಿ ಆಬಾ ಅಭಿಯಾನ ಜಾಗೃತಿ ಮತ್ತು ಸೌಲಭ್ಯ ಕುರಿತ ಶಿಬಿರ ಅಭಿಯಾನವನ್ನು ಜಿಲ್ಲೆಯಾದ್ಯಂತ ಜೂ.16 ರಿಂದ 27ರವರೆಗೆ ಆಯೋಜಿಸಲಾಗಿದೆ. ಉಳಿದ ಮೂರು ದಿನಗಳು ಕಾರ್ಯಕ್ರಮಗಳು ನಡೆಯಲಿವೆ.

ಗುಂಡ್ಲುಪೇಟೆಯಿಂದ ಆರಂಭ:

ಧರ್ತಿ ಆಬಾ ಅಭಿಯಾನ ಜಾಗೃತಿ ಮತ್ತು ಸೌಲಭ್ಯಗಳ ಕುರಿತ ಶಿಬಿರವು ಜೂ.16 ರಿಂದ 27ರವರೆಗೆ ನಿಗದಿಯಾಗಿದೆ. ಜೂ.16ರಂದು ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಗ್ರಾಮ ಪಂಚಾಯಿತಿಯ ಮದ್ದೂರು ಕಾಲನಿಯ ಬುಡಕಟ್ಟು ಆಶ್ರಮ ಶಾಲೆ, ಜೂ.17ರಂದು ಚಾಮರಾಜನಗರ ತಾಲೂಕು ಕೆಂಪನಪುರ ಗ್ರಾಮ ಪಂಚಾಯಿತಿಯ ಕಣ್ಣೇಗಾಲ ಗ್ರಾಮದ ಮಾರಮ್ಮನ ದೇವಸ್ಥಾನ, ಜೂ.18ರಂದು ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮ ಪಂಚಾಯಿತಿಯ ತೊಂಡವಾಡಿ ಗ್ರಾಮದ ನಾಯಕರ ಬೀದಿ ಚಾವಡಿ, ಜೂ.19ರಂದು ಚಾಮರಾಜನಗರ ತಾಲೂಕಿನ ಅರಕಲವಾಡಿ ಗ್ರಾಮ ಪಂಚಾಯಿತಿಯ ಯಾನಗಹಳ್ಳಿಯ ವಾಲ್ಮೀಕಿ ಭವನ, ಜೂ.19 ಮತ್ತು 20ರಂದು ಯಳಂದೂರು ತಾಲೂಕಿನ ಅಗರ ಗ್ರಾಮದ ಹಿಂಡಿಮಾರಮ್ಮನ ದೇವಸ್ಥಾನದ ಆವರಣ, ಜೂ.20ರಂದು ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಗ್ರಾಮ ಪಂಚಾಯಿತಿಯ ಸೋಮನಪುರ ಗ್ರಾಮದ ಅಂಗನವಾಡಿ ಕಟ್ಟಡ, ಜೂ.21ರಂದು ಯಳಂದೂರು ತಾಲೂಕಿನ ದುಗ್ಗಹಟ್ಟಿ ಗ್ರಾಮ ಪಂಚಾಯಿತಿಯ ಡಿ. ಕಂದಹಳ್ಳಿ ಗ್ರಾಮದ ನಾಯಕರ ಬೀದಿ ಚಾವಡಿ, ಜೂ.23 ಮತ್ತು 24ರಂದು ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮ ಪಂಚಾಯಿತಿಯ ಮೇಲ್ ಮಾಳ ಗ್ರಾಮಕ್ಕೆ ಸಂಬಂಧಿಸಿದಂತೆ ಮುರಟಿಪಾಳ್ಯ ಬುಡಕಟ್ಟು ಆಶ್ರಮ ಶಾಲೆ, ಜೂ.25 ಮತ್ತು 26ರಂದು ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಗ್ರಾಮಕ್ಕೆ ಸಂಬಂಧಿಸಿದಂತೆ ಯರಕನಗದ್ದೆ ಕಾಲನಿಯ ಸೋಲಿಗರ ಭವನ ಹಾಗೂ ಬಂಗ್ಲೆ ಪೋಡುವಿನ ವಾಲ್ಮೀಕಿ ಭವನ, ಜೂ.26 ಮತ್ತು 27ರಂದು ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮ ಪಂಚಾಯಿತಿ ಆವರಣ, ಜೂ.27ರಂದು ಚಾಮರಾಜನಗರ ತಾಲೂಕಿನ ಬೇಡಗುಳಿ ಗ್ರಾಮಕ್ಕೆ ಸಂಬಂಧಿಸಿದಂತೆ ಕಾಡಿಗೆರೆಯ ಟಿವಿಎಸ್ ಕಾಫಿ ಎಸ್ಟೇಟ್‌ನಲ್ಲಿ ಶಿಬಿರಗಳು ನಡೆಯಲಿವೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ ತಿಳಿಸಿದ್ದಾರೆ.

ನನ್ನ ಗುರುತು ಕಾರ್ಯಕ್ರಮ: ಜಿಲ್ಲಾ ಪಂಚಾಯಿತಿಯಿಂದಲೂ ಬುಡಕಟ್ಟು ಜನರಿಗೆ ದಾಖಲೆಗಳನ್ನು ಒದಗಿಸುವ ಸಲುವಾಗಿ ವಿಶಿಷ್ಟ ಯೋಜನೆಯಾದ ‘ನನ್ನ ಗುರುತು’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ದಾಖಲೆಗಳೇ ಇಲ್ಲದ ಜನರಿಗೆ ದಾಖಲೆಗಳನ್ನು ಒದಗಿಸಲು ರಾಜ್ಯಸರ್ಕಾರದಿಂದ ಪ್ರಾಯೋಗಿಕವಾಗಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಗ್ರಾಮ ಪಂಚಾಯಿತಿ ಮತ್ತು ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ಹುಸ್ಕೂರಿನಲ್ಲಿ ನನ್ನ ಗುರುತು ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಈ ಅಭಿಯಾನದಡಿ ಕುಟುಂಬಗಳ ಸಮೀಕ್ಷೆ, ಆಧಾರ್ ಕಾರ್ಡ್, ಜನನ-ಮರಣ ಪ್ರಮಾಣ ಪತ್ರ, ಇ ಶ್ರಮ ಕಾರ್ಡ್, ನರೇಗಾ ಚೀಟಿ, ಯುಡಿಐಡಿ ಕಾರ್ಡ್, ಪಿಂಚಣಿ, ಬ್ಯಾಂಕ್ ಖಾತೆ, ಪಡಿತರ ಚೀಟಿ, ಆಯುಷ್ಮಾನ್ ಭಾರತ್ ಕಾರ್ಡ್, ಪಿಎಂಜೆಜೆವಿವೈ, ಪಿಎಂಎಸ್‌ಬಿವೈ ವಿಮಾ ಸೌಲಭ್ಯಗಳಿಗೆ ದಾಖಲೆಗಳನ್ನು ನೀಡಲಾಗುತ್ತಿದೆ.

ಯೋಜನೆಯಡಿ ನಡೆಯುತ್ತಿರುವ ಅಭಿಯಾನವನ್ನು ಅಗತ್ಯವಿದ್ದರೆ ಮುಂದುವರಿಸಲು ಅವಕಾಶವಿದೆ. ಹೀಗಾಗಿ ಈ ಶಿಬಿರದ ಮೂಲಕ ಅಗತ್ಯ ದಾಖಲೆಗಳು ಇಲ್ಲದವರು ದಾಖಲೆಗಳನ್ನು ಪಡೆಯಬಹುದಾಗಿದೆ. ಧರ್ತಿ ಆಬಾ ಅಭಿಯಾನ ಜಾಗೃತಿ ಮತ್ತು ಸೌಲಭ್ಯಗಳ ಕುರಿತ ಶಿಬಿರವು ಜೂ.16 ರಿಂದ 30ರವರೆಗೆ ನಿಗದಿಯಾಗಿದೆ. ವಿವಿಧ ಗ್ರಾಮಗಳಲ್ಲಿ ನಿಗದಿಯಾಗಿರುವ ಸ್ಥಳಗಳಲ್ಲಿ ಶಿಬಿರಗಳು ನಡೆಯಲಿವೆ. ಬಿಂದ್ಯಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಚಾಮರಾಜನಗರ