ಜಿಲ್ಲೆ

ಇಂದಿಗೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ನಿಂತಿಲ್ಲ

ಮೈಸೂರು: ಹೆಣ್ಣು ಮಕ್ಕಳ ಮೇಲಿನ ಶೋಷಣೆಗಳು ಹೋಗಬೇಕಾದರೆ ಉತ್ಪಾದನೆಯ ಮೇಲಿನ ಖಾಸಗಿ ನಾಯಕತ್ವ ಹೋಗಬೇಕು. ಈ ಹೋರಾಟದಲ್ಲಿ ಮಹಿಳೆಯರು ಮತ್ತು ಪುರುಷರು ಒಟ್ಟಾಗಿ ಭಾಗಿಯಾಗಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಬರಲು ಸಾಧ್ಯ ಎಂದು ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಬಿ.ರವಿ ಹೇಳಿದರು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‌ಎಸ್) ಜಿಲ್ಲಾ ಸಮಿತಿ ವತಿಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚಿಗೆ ಆಯೋಜಿಸಿದ್ದ 5ನೇ ಜಿಲ್ಲಾಮಟ್ಟದ ಮಹಿಳಾ ಸಮ್ಮೇಳನದಲ್ಲಿ ಮಾತನಾಡಿದರು.

ಹೆಣ್ಣು ಮಕ್ಕಳು ಸಾಕಷ್ಟು ಮುಂದುವರಿದಿದ್ದರೂ ಅವರ ಮೇಲಿನ ದೌರ್ಜನ್ಯ ಮಾತ್ರ ನಿಂತಿಲ್ಲ. ಇದಕ್ಕೆ ಒಳಗಾಗುತ್ತಿರುವುದು ಅಶಿಕ್ಷಿತರು, ಬಡ ಹೆಣ್ಣು ಮಕ್ಕಳು ಮಾತ್ರ ಅಲ್ಲ ಬದಲಿಗೆ ಸುಶಿಕ್ಷಿತ, ಮಧ್ಯಮ, ಮೇಲ್ಮಧ್ಯಮ ವರ್ಗದ ಮಹಿಳೆಯರು ವಿವಿಧ ರೀತಿಯ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಾತಿನಿಧಿಕವಾಗಿ ಇವರು ಅಧಿಕಾರಕ್ಕೆ ಬಂದರೆ ಮಹಿಳಾ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತಿದೆ. ಹಾಗೆ ಆಗಿಲ್ಲ. ಈಗಲೂ ಪರಿಸ್ಥಿತಿ ಹಾಗೆ ಉಳಿದಿದೆ. ಆದ್ದರಿಂದ ರಾಜಕೀಯ ಅಧಿಕಾರದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಆಗುವುದಿಲ್ಲ.

ಸಮಾಜದಲ್ಲಿ ನೀತಿ, ನೈತಿಕತೆ, ಶಿಕ್ಷಣ ಸ್ಥಾನಮಾನ ಎಲ್ಲ ಸಂದರ್ಭಗಳಲ್ಲೂ ಹೆಣ್ಣು ಮತ್ತು ಗಂಡು ಇವರನ್ನು ನೋಡುವ ರೀತಿ ಇಬ್ಬಗೆಯದಾಗಿದೆ. ಹೆಣ್ಣು ಎನ್ನುವ ಕಾರಣಕ್ಕೆ ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಮತ್ತು ಹಲವಾರು ಅವಕಾಶಗಳಿಂದ ವಂಚಿಸುತ್ತಿದ್ದಾರೆ. ಇನ್ನೊಂದೆಡೆ ಆರ್ಥಿಕ ಶೋಷಣೆಯಲ್ಲೂ ಸಿಲುಕಿದ್ದಾರೆ ಎಂದರು.

ಸಂಘಟನೆಯ ರಾಜ್ಯ ಕಾರ್ಯದರ್ಶಿ ಶೋಭಾ ಮಾತನಾಡಿ, ಹೆಣ್ಣು ಮಕ್ಕಳು ಸಾಮಾಜಿಕ ಚಳವಳಿಯಲ್ಲಿ ಕಾಲಿಡುವುದು ಬಹಳ ಕಷ್ಟ. ಆದರೆ, ಒಮ್ಮೆ ಕಾಲಿಟ್ಟರೆ ಅದೊಂದು ದೊಡ್ಡ ಶಕ್ತಿ. ಇತಿಹಾಸ ಬದಲಾವಣೆಗಳಲ್ಲಿ ಹೆಣ್ಣು ಮಕ್ಕಳ ಭಾಗವಹಿಸುವಿಕೆ ಇಲ್ಲದೆ ಸಮಾಜದಲ್ಲಿ ಬದಲಾವಣೆಯಾಗಿಲ್ಲ ಎಂದರು.

ಹೆಣ್ಣು ಮಕ್ಕಳು ವ್ಯಕ್ತಿತ್ವ ರೂಪಿಸಿಕೊಳ್ಳುವುದರ ಬಗ್ಗೆ ಯೋಚಿಸಬೇಕಿದೆ. ಹಾಗೆಯೇ ಜ್ಞಾನ ಪ್ರಪಂಚಕ್ಕೆ ಲಗ್ಗೆ ಇಡಬೇಕಿದೆ. ಸಮಾಜದ ಎಲ್ಲ ಆಗುಹೋಗುಗಳಲ್ಲಿ ಹೆಣ್ಣು ಮಕ್ಕಳು ಭಾಗವಹಿಸಬೇಕು. ಇದು ಮಹಿಳಾ ಸಮಾನತೆಯ ಪರಿಕಲ್ಪನೆ ಎಂದು ಹೇಳಿದರು.

ಜ್ಯೋತಿಬಾಫುಲೆ ಅವರಿಗೆ ಅವರ ಅಕ್ಕ ಸುಗುಣ ಬಾಯಿ ಬೆನ್ನೆಲುಬಾಗಿದ್ದರು. ನಂತರ ಜ್ಯೋತಿ ಬಾ ಅವರು ಸಾವಿತ್ರಿಬಾಯಿ ಫುಲೆ ಅವರಿಗೆ ಶಿಕ್ಷಕರಾದರು. ಇಂದು ಅವರ ಜೀವನ ಹೋರಾಟ, ವಿಚಾರದಿಂದ ನಮ್ಮೆಲ್ಲರಿಗೂ ಸಾವಿತ್ರಿಬಾಯಿ ಆದರ್ಶವಾಗಿದ್ದಾರೆ ಎಂದರು.

ಸಂಘಟನೆಯ ನಾಯಕಿ ನಳಿನಾ ಮಾತನಾಡಿ, ಸಮಾಜದಲ್ಲಿ ಹೆಣ್ಣು ಮಕ್ಕಳು ನಾವು ಓದಿರುವ ವಿದ್ಯೆಗೆ ಅರ್ಥ ಕಲ್ಪಿಸಬೇಕಾದರೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ವ್ಯಕ್ತಿತ್ವ ಸರಿಯಾದ ದಾರಿಯಲ್ಲಿ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಸಂಘಟನೆಯ ರಾಜ್ಯ ಅಧ್ಯಕ್ಷೆ ಮಂಜುಳಾ ಮಾತನಾಡಿ, ಹುಟ್ಟುವುದಕ್ಕೂ ಅನುಮತಿ ಬೇಕಿರುವ ಅಥವಾ ನಿರಾಕರಣೆ ಇರುವ ಸಮಾಜದಲ್ಲಿ ಮಹಿಳೆಯರು ತನ್ನ ಸ್ವಾತಂತ್ರ್ಯಕ್ಕಾಗಿ ಮಹಿಳೆ, ಹಳೇ ಧೋರಣೆ ಮತ್ತು ಪುರುಷ ಪ್ರಧಾನ ಮನಸ್ಸುಗಳನ್ನು ನಿರಾಕರಿಸಿದರೆ ಅದನ್ನು ಜೀರ್ಣಿಸಿಕೊಳ್ಳಲು ಆಗದ ಸಮಾಜದಲ್ಲಿ ಆಕೆ ಬದುಕುತ್ತಿದ್ದಾಳೆ ಎಂದು ಕಳವಳ ವ್ಯಕ್ತಪಡಿಸಿದರು

ಮಹಿಳೆಯರಿಗೆ ಬೇಕಾದ ಸ್ವಾತಂತ್ರ್ಯ, ಗೌರವ ಭಗವಂತನಲ್ಲಿ ಮಾಡುವ ಪ್ರಾರ್ಥನೆಯಿಂದಾಗಲಿ, ಸರ್ಕಾರಗಳಿಂದಾಗಲಿ, ನ್ಯಾಯಾಂಗ -ಪೊಲೀಸ್ ವ್ಯವಸ್ಥೆಗಳಿಂದಾಗಲಿ ಸಿಕ್ಕಿಲ್ಲ. ಹೆಣ್ಣು ಮಕ್ಕಳ ಬದುಕು ಸುಧಾರಿಸುವುದಿಲ್ಲ ಎಂಬುದು ವಿವರಿಸಬೇಕಿಲ್ಲ. ಮತ್ತದು ಈ ವ್ಯವಸ್ಥೆಯಲ್ಲಿ ಅಸಾಧ್ಯ. ಆದ್ದರಿಂದ ನಮ್ಮ ಮುಂದಿರುವ ಒಂದೇ ದಾರಿ. ಅದುವೇ ಮಹಿಳಾ ಶಕ್ತಿಯ ಕ್ರೋಡೀಕರಣ. ಮಹಿಳೆಯರು ಹೆಚ್ಚು ಜ್ಞಾನ ಗಳಿಕೆಗೆ ಮುಂದಾಗುತ್ತಾ ಸಂಘಟಿತ ಹೋರಾಟ ಬೆಳೆಸಬೇಕಿದೆ. ಮೂಲವಾಗಿ ಸಂಘಟನೆಯ ಶಕ್ತಿ ಅರಿತುಕೊಳ್ಳುತ್ತಾ ಅದನ್ನು ಬಲಪಡಿಸಬೇಕಿದೆ ಎಂದು ಹೇಳಿದರು

ಸಂಘಟನೆಯ ನೂತನ ಸಮಿತಿ ರಚನೆ ರಚಿಸಲಾಯಿತು. ಅಧ್ಯಕ್ಷರಾಗಿ ನಳಿನಾ, ಉಪಾಧ್ಯಕ್ಷರಾಗಿ ಶೀಬಾ, ಜಿ.ಎಸ್.ಸೀಮಾ, ರೂಪಾ ದೇಶಪಾಂಡೆ, ಕಾರ್ಯದರ್ಶಿಯಾಗಿ ಆಸಿಯಾ ಬೇಗಂ, ಕಚೇರಿ ಕಾರ್ಯದರ್ಶಿಯಾಗಿ ಜಿ.ಪುಷ್ಪ, ಸ್ನೇಹ, ಗೌರಿ, ಪುಷ್ಪಾ, ಪ್ರೇಮಾ, ಸುಮಾ, ಗಾಯತ್ರಿ ಮತ್ತು ಸಿಂಧು ಕಾರ್ಯಕಾರಿ ಸಮಿತಿಗೆ ಆಯ್ಕೆಯಾದರು.