ಜಿಲ್ಲೆ

ಇಂಡಿಯಾ ಒಕ್ಕೂಟದ ವ್ಯತ್ಯಾಸದಿಂದ ಬಿಜೆಪಿಗೆ ಗೆಲುವು

ನಾಗಮಂಗಲ: ದೆಹಲಿಯಲ್ಲಿ ಕಾಂಗ್ರೆಸ್ ಸೋತಿರುವುದು, ಭದ್ರ ತಳಹದಿ ಇಲ್ಲದಿರುವುದು ಹಾಗೂ ಜನಾಭಿಪ್ರಾಯವನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಬಿಜೆಪಿವರು ಇಂಡಿಯಾ ಒಕ್ಕೂಟದಲ್ಲಾದ ಕೆಲವು ವ್ಯತ್ಯಾಸಗಳಿಂದ ಗೆಲುವು ಸಾಧಿಸಿದ್ದಾರೆಯೇ ಹೊರತು ತಮ್ಮ ಸಾಮರ್ಥ್ಯದಿಂದ ಗೆದ್ದಿದ್ದಾರೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸಮರ್ಥಿಸಿಕೊಂಡರು.

ತಾಲೂಕಿನ ಕೆಲಗೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಮತ್ತು ಹರಿಯಾಣ ಚುನಾವಣೆಗಳಲ್ಲಿ ಇಂಡಿಯಾ ಒಕ್ಕೂಟ ಜತೆಯಾಗಿ ಚುನಾವಣೆ ಎದುರಿಸಿದ್ದರೆ ಹರಿಯಾಣದಲ್ಲಿ ಕಾಂಗ್ರೆಸ್ ಮತ್ತು ದೆಹಲಿಯಲ್ಲಿ ಎಎಪಿಗೆ ಗೆಲುವು ಸಿಗುತ್ತಿತ್ತು. ಆದರೆ ಇಂಡಿಯಾ ಒಕ್ಕೂಟದಲ್ಲಿ ಆದ ಕೆಲವು ವ್ಯತ್ಯಾಸಗಳಿಂದ ಬಿಜೆಪಿಗೆ ಲಾಭವಾಗಿದೆ. ದೆಹಲಿಯಲ್ಲಿ ಬಿಜೆಪಿ ಮೋದಿ ಅವರ ವರ್ಚಸ್ಸಿನಿಂದಲೋ ಅಥವಾ ಸ್ಥಳೀಯ ನಾಯಕರ ವರ್ಚಸ್ಸಿನಿಂದಲೋ ಅಧಿಕಾರಕ್ಕೆ ಬಂದಿಲ್ಲ. ಇಂಡಿಯಾ ಒಕ್ಕೂಟದಲ್ಲಿ ಉಂಟಾದ ವ್ಯತ್ಯಾಸದಿಂದ ಲಾಭ ಪಡೆದು ಅಧಿಕಾರಕ್ಕೆ ಬಂದಿದ್ದಾರೆ.

ರಸ್ತೆ ಅಭಿವೃದ್ಧಿ ವಿಚಾರವಾಗಿ ಇಂಜಿನಿಯರ್‌ಗಳು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವ ಜತೆಗೆ ಜನರಿಗೆ ಅನುಕೂಲವಾಗುವಂತೆ ಕಾಮಗಾರಿಯನ್ನು ನಡೆಸಿ ಎಂದು ಸೂಚನೆ ನೀಡಿದರು.

ಈ ಸಂದರ್ಭ ಗ್ರಾಮಸ್ಥರು ತಮ್ಮ ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕುರಿತು ಮನವಿ ಪತ್ರ ಸಲ್ಲಿಸಿದರು.

ಕಾಂಗ್ರೆಸ್ ಮುಖಂಡರಾದ ಸುನೀಲ್, ಲಕ್ಷ್ಮೀಕಾಂತ್, ಪ್ರಸನ್ನ, ದೇವರಾಜು ಮತ್ತಿತರಿದ್ದರು.