ಜಿಲ್ಲೆ

ಇಂಡಿಯಾ ಒಕ್ಕೂಟಕ್ಕೆ ಖರ್ಗೆ ಪ್ರಧಾನಿ ಅಭ್ಯರ್ಥಿಯಾಗಲಿ

ಕಲಬುರಗಿ: ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಘೋಷಿಸುವುದು ಬೆಸ್ಟ್ ಎಂದು ಮಾಜಿ ಸಚಿವ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ಖರ್ಗೆ ಅವರು ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬುದು ನನ್ನ ಅಭಿಪ್ರಾಯ. ಆ ಸಾಮರ್ಥ್ಯವೂ ಅವರಲ್ಲಿದೆ. ಇವರನ್ನು ಪ್ರಧಾನಿ ಅಭ್ಯರ್ಥಿಯಾಗಿಸಿದರೆ ದಲಿತರಿಗೆ ಅವಕಾಶ ಕೊಟ್ಟಂತಾಗಲಿದೆ.ಈ ಹಿಂದೆ ಮನಮೋಹನಸಿಂಗ್ ಅವರನ್ನು ಕಾಂಗ್ರೆಸ್ ಪ್ರಧಾನಿ ಮಾಡಿತ್ತು. ಖರ್ಗೆ ಅವರಿಗೆ ಅವಕಾಶ ಕೊಟ್ಟರೆ ತಪ್ಪೇನಿಲ್ಲ ಎಂದು ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಅಭಿಪ್ರಾಯ ಹಂಚಿಕೊAಡರು.
ಜೆಡಿಎಸ್ ವ್ಯಾಪಾರಿ ಪಕ್ಷವಿದ್ದಂತೆ. ಬಿಜೆಪಿಯವರು ನಾಲ್ಕು ಸೀಟು ಕೊಡುತ್ತಾರೆ ಎಂದಿದ್ದಕ್ಕೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ನಾವು(ಕಾಂಗ್ರೆಸ್)ಇನ್ನೂ ಎರಡು ಹೆಚ್ಚು ಕೊಡುತ್ತೇವೆ ಎಂದರೆ ನಮ್ಮ ಜತೆಗೆ ಬರುತ್ತಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಏನೂ ಆಗಲ್ಲ ಎಂದರು.
ಸನಾತನ ಧರ್ಮ ಎಂದರೆ ಹಿಂದು ಮಾತ್ರವಲ್ಲ. ಎಲ್ಲ ಹಳೆಯ ಧರ್ಮಗಳು ಅದರಲ್ಲಿ ಬರುತ್ತವೆ. ಕೆಲವು ಪಟ್ಟಭದ್ರ ಶಕ್ತಿಗಳು ಸೇರಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿವೆ. ಆ ಮೂಲಕ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹವಣಿಸುತ್ತಿವೆ ಎಂದ ರಾಯರಡ್ಡಿ, ಸನಾತನ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಎಲ್ಲಿ ಅವಹೇಳನ ಮಾಡಿದ್ದಾರೆ? ಅವರ ವಿರುದ್ಧ ಉತ್ತರಪ್ರದೇಶದಲ್ಲಿ ಎಫ್‌ಐಆರ್ ಹಾಕಿದ್ದು ತಪ್ಪು ಎಂದರು.