ಇಂಡಿ: ತಾಲೂಕಿನಲ್ಲಿ ಕೈಗಾರಿಕೆ ವಸಾಹತು ಸ್ಥಾಪಿಸಲು ಶಾಸಕ ಯಶವಂತರಾಯಗೌಡ ಪಾಟೀಲರು ಬುಧವಾರ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಪಟ್ಟಣದ ವಸಂತ ನಗರದಲ್ಲಿ 100 ಎಕರೆ ಸರ್ಕಾರಿ ಜಮೀನು ಇದ್ದು ಅದನ್ನು ಬಳಸಿಕೊಳ್ಳಬಹುದು ಅಥವಾ ತಾಲೂಕಿನ ತಡವಲಗಾ ಗ್ರಾಮದಲ್ಲಿ 300 ಎಕರೆ ಸರ್ಕಾರಿ ಜಮೀನು ಮತ್ತು ತಾಲೂಕಿನ ಹಳಗುಣಕಿ ಗ್ರಾಮದಲ್ಲಿ 125 ಎಕರೆ ಜಮೀನು ಇದೆ. ಅದಲ್ಲದೆ ಖಾಸಗಿ ವ್ಯಕ್ತಿಗಳು ಜಮೀನು ಕೊಡಲು ಮುಂದೆ ಬಂದಿದ್ದಾರೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಈಗಾಗಲೇ ತಾಲೂಕಿನ ಬೂದಿಹಾಳ ಗ್ರಾಮದ ರಿ.ಸ.ನಂ 65ರಲ್ಲಿ ಸಣ್ಣ ಕೈಗಾರಿಕೆ ವಸಾಹತು ನಿರ್ಮಿಸುವ ಕುರಿತು ಜಮೀನು ಹಸ್ತಾಂತರಿಸಿದ್ದು ಕೂಡಲೇ ಅಭಿವೃದ್ಧಿಪಡಿಸಲು ಕೇಳಿಕೊಂಡರು.
ತಾಲೂಕು ನಂಜುಡಪ್ಪನವರ ವರದಿಯನ್ವಯ ಹಿಂದುಳಿದ ಪ್ರದೇಶವಾಗಿರುವುದರಿಂದ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದೆ. ಇಲ್ಲಿ ಕೈಗಾರಿಕೆ ವಸಾಹತು ಮಾಡಿದರೆ ನಿರುದ್ಯೋಗಿ ತಾಂತ್ರಿಕ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅದಲ್ಲದೆ ಕೈಗಾರಿಕೆ ಪ್ರದೇಶಕ್ಕೆ ಬೇಕಾಗುವ ರೈಲು ಸಾರಿಗೆ, ರಾಷ್ಟ್ರೀಯ ಹೆದ್ದಾರಿ, ವಿದ್ಯುತ್, ಕುಡಿಯುವ ನೀರು ಮತ್ತು ಜಮೀನು ಸೌಲಭ್ಯವಿದೆ ಎಂದು ಮನವರಿಕೆ ಮಾಡಿದ್ದಾರೆ.
ತಾಲೂಕು ರಾಜ್ಯದಲ್ಲಿಯೇ ನಿಂಬೆ ಮತ್ತು ದ್ರಾಕ್ಷಿ ಬೆಳೆಗೆ ಪ್ರಸಿದ್ಧಿ ಇದೆ ಮತ್ತು ಮಾನವ ಸಂಪನ್ಮೂಲವೂದೆ. ಕಾರಣ ಬಂಡವಾಳ ಹೂಡಿಕೆದಾರರಿಂದ ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪಿಸಲು ಶಾಸಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಚಿವರ ಅಪ್ತ ಕಾರ್ಯದರ್ಶಿ ಮತ್ತು ಕೈಗಾರಿಕೆ ಇಲಾಖೆಯ ಹಿರಿಯ ಸಿಬ್ಬಂದಿ ಉಪಸ್ಥಿತರಿದ್ದರು ಎಂದು ಶಾಸಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.