ಇಂಡಿ: ಹೆಚ್ಚಿನ ಸದಸ್ಯರಿದ್ದರೂ ಪುರಸಭೆ ಗದ್ದುಗೆ ಹಿಡಿಯುವಲ್ಲಿ ಬಿಜೆಪಿ ಸಂಪೂರ್ಣ ವಿಲವಾಗಿದ್ದು, 8 ಸದಸ್ಯರ ಬಲ ಹೊಂದಿದ ಕಾಂಗ್ರೆಸ್ ಪಕ್ಷ ಪುರಸಭೆಯ ಗದ್ದುಗೆ ಏರಿದ್ದರಿಂದ ಬಿಜೆಪಿ ಮುಖಭಂಗವಾಗಿದೆ.
23 ಸದಸ್ಯರು, ಸಂಸದರು, ಶಾಸಕರ ಬಲ ಸೇರಿ ಒಟ್ಟು 25 ಸಂಖ್ಯಾಬಲ ಹೊಂದಿದ ಇಂಡಿ ಪುರಸಭೆಯಲ್ಲಿ ಸೋಮವಾರ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರ ದಕ್ಕಿದೆ.
ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಸ್ಥಾನಕ್ಕೆ ಜಹಾಂಗೀರ ಸೌದಾಗರ ನಾಮಪತ್ರ ಸಲ್ಲಿಸಿದರೆ, ಬಿಜೆಪಿ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸಾಯಬಣ್ಣ ಮೂರಮನ್, ಉಪಾಧ್ಯಕ್ಷ ಸ್ಥಾನಕ್ಕೆ ರೇಣುಕಾ ಉಟಗಿ ನಾಮಪತ್ರ ಸಲ್ಲಿಸಿದ್ದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ-ಉಪಾಧ್ಯಕ್ಷ ಸ್ಪರ್ಧಿಗಳಿಗೆ 15 ಮತಗಳು ಲಭಿಸಿದರೆ, ಬಿಜೆಪಿ ಪಕ್ಷದ ಅಧ್ಯಕ್ಷ-ಉಪಾಧ್ಯಕ್ಷ ಸ್ಪರ್ಧಿಗಳಿಗೆ ಕೇವಲ 6 ಮತಗಳು ಲಭಿಸಿದವು.
ಹೆಚ್ಚಿಗೆ ಮತ ಪಡೆದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಸ್ಥಾನದ ಜಹಾಂಗೀರ ಸೌದಾಗರ ಅವರ ಗೆಲುವು 15 ಮತಗಳ ಅಂತರದಿಂದ ಆಗಿದೆ ಎಂದು ಚುನಾವಣಾ ಅಧಿಕಾರಿ, ತಹಸೀಲ್ದಾರ್ ಬಿ.ಎಸ್. ಕಡಕಭಾವಿ ಘೋಷಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಗುಲಾಲು ಎರಚಿ , ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
11 ಸದಸ್ಯರ ಬಲವಿದ್ದರೂ ಬಿಜೆಪಿ ಪಕ್ಷ ತನ್ನ ಪಕ್ಷದ ಸದಸ್ಯರ ಮತಗಳನ್ನೇ ಪಡೆಯುವಲ್ಲಿ ವಿಲವಾಗಿದ್ದು ಸ್ಥಳೀಯ ನಾಯಕರ ಒಗ್ಗಟ್ಟಿನ ಕೊರತೆ ಹಾಗೂ ಸದಸ್ಯರ ಭಿನ್ನಾಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಮಾತನಾಡುವ ಪರಿಸ್ಥಿತಿಗೆ ತಲುಪಿದವು.
ಕೊನೆಗೆ ಬಿಜೆಪಿ ಕಾರ್ಯಕರ್ತರೇ ತಮ್ಮ ಪಕ್ಷದ ಮುಖಂಡರ ನಿಷ್ಕಾಳಜಿಯ ಬಗ್ಗೆ ಮಾತನಾಡಿಕೊಳ್ಳುತ್ತಿರುವುದು ಕಂಡು ಬಂದಿತು. ಬಿಜೆಪಿ ಪಕ್ಷದಲ್ಲಿ ನಾಯಕತ್ವದ ಕೊರತೆಯಿಂದಲೇ ಈ ರೀತಿಯಾಗುತ್ತಿದೆ. ಸ್ಥಳೀಯ ಶಾಸಕ ಯಶವಂತರಾಯಗೌಡ ಪಾಟೀಲರ ಚಾಣಾಕ್ಷ ನಡೆಯಿಂದ ಪ್ರತಿ ಬಾರಿಯೂ ಬಿಜೆಪಿ ಪಕ್ಷಕ್ಕೆ ಮುಖಭಂಗವಾಗುತ್ತಿದೆ. ಬಿಜೆಪಿ ಪಕ್ಷದ ಸದಸ್ಯರು ತಮ್ಮ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದ್ದವು.
ಬಿಜೆಪಿ ಸದಸ್ಯರ ಪ್ರಾಥಮಿಕ ಸದಸ್ಯತ್ವ ಉಚ್ಛಾಟನೆ: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಬಿಜೆಪಿ ಪುರಸಭೆ ಸದಸ್ಯರಾದ ಸೈಪನ್ ಪವಾರ, ಜ್ಯೋತಿ ಪ್ರಕಾಶ ರಾಠೋಡ, ಕವಿತಾ ಜಯಚಂದ್ರ ರಾಠೋಡ ಅವರನ್ನು ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.