ಜಿಲ್ಲೆ

ಇಂಟರ್‌ನ್ಯಾಷನಲ್ ಬುಕ್ ಆ್ ರೆಕಾರ್ಡ್ಸ್‌ಗೆ ಪ್ರತೀಕ್ಷಾ, 44 ನಿಮಿಷ 4 ಸೆಕೆಂಡ್ ಹುಲಾ ಹೂಪ್ ರಿಂಗ್ ತಿರುಗಿಸಿದ ಪೋರಿ

ನವೀನ್ ಚಂದ್ರ ಶೆಟ್ಟಿ ಆನೇಕಲ್

ತಾಲೂಕಿನ ಕುಗ್ರಾಮ ಹಳೇಹಳ್ಳಿಯ ಪ್ರತೀಕ್ಷಾ ಎಂಬ 5 ವರ್ಷದ ಬಾಲಕಿ ಹುಲಾ ಹೂಪ್ ರಿಂಗ್ ತಿರುಗಿಸುವುದರಲ್ಲಿ ಇಂಟರ್ ನ್ಯಾಷನಲ್ ಬುಕ್ ಆ್ ರೆಕಾರ್ಡ್ಸ್‌ಗೆ ಸೇರ್ಪಡೆಗೊಂಡಿದ್ದಾಳೆ. ಈಕೆ ಸತತ 44 ನಿಮಿಷ 4 ಸೆಕೆಂಡ್‌ವರೆಗೆ ರಿಂಗ್ ತಿರುಗಿಸಿ ಸಾಧನೆ ಮಾಡಿದ್ದಾಳೆ.

ಹಳೇಹಳ್ಳಿಯ ಶ್ರೀನಿವಾಸ ಹಾಗೂ ದೀಪಾ ದಂಪತಿ ಪುತ್ರಿಯಾದ ಈಕೆ ಇದೇ ಸಾಧನೆಗಾಗಿ ಇಂಡಿಯನ್ ಚಿಲ್ಡ್ರ್‌ನ್ ಟ್ಯಾಲೆಂಟ್ ಅವಾರ್ಡ್, ಇಂಡಿಯಾ ಸ್ಟಾರ್ ಐಕಾನ್ ಕಿಡ್ಸ್ ಅಚೀವರ್ಸ್‌ ಅವಾರ್ಡ್, ಕರ್ನಾಟಕ ಅಚೀವರ್ಸ್‌ ಬುಕ್ ಆಫ್ ರೆಕಾರ್ಡ್ಸ್, ಸುವರ್ಣ ಸಾಧನಶ್ರೀ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ. ಇನ್ನೂ ಹಲವು ಪ್ರಶಸ್ತಿಗಳು ಹುಡುಕಿ ಬರುತ್ತಿವೆ.

ಮೊಬೈಲ್‌ೆನ್‌ನಿಂದ ಸ್ಫೂರ್ತಿ: ತಂದೆಯ ಮೊಬೈಲ್‌ನಲ್ಲಿ ಹುಲಾ ಹೂಪ್ ರಿಂಗ್ಸ್ ತಿರುಗಿಸುವ ವಿಡಿಯೋ ನೋಡಿ ತನಗೂ ಅಂಥ ರಿಂಗ್ ತಂದುಕೊಡುವಂತೆ ಕೇಳಿಕೊಂಡಿದ್ದಳು. ಮೊಬೈಲ್ ನೋಡಿಕೊಂಡೇ ರಿಂಗ್ ತಿರುಗಿಸುವುದನ್ನು ರೂಢಿಸಿಕೊಂಡಿದ್ದಳು. ಇದನ್ನು ಗಮನಿಸಿದ ದೀಪಾ ಅವರು, ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದರು. ಸ್ವತಃ ತಾವೇ ಗುರುವಾಗಿ ತರಬೇತಿ ನೀಡಿ, ವಿಡಿಯೋ ತುಣುಕನ್ನು ಇಂಟರ್‌ನ್ಯಾಷನಲ್ ಬುಕ್ ಆ್ ರೆಕಾರ್ಡ್ಸ್‌ಗೆ ಕಳುಹಿಸಿದ್ದರು. ಸಂಸ್ಥೆಯವರ ಎದುರು ಪ್ರತೀಕ್ಷಾ 44 ನಿಮಿಷ 4 ಸೆಕೆಂಡ್ ತಿರುಗಿಸಿ ದಾಖಲೆ ಮಾಡಿದಳು.

ಬಹುಮುಖ ಪ್ರತಿಭೆ: ಪ್ರತೀಕ್ಷಾ ಬಹುಮುಖ ಪ್ರತಿಭೆ. ನಟನೆ, ನೃತ್ಯ, ಚಿತ್ರಕಲೆ, ಮಾಡೆಲಿಂಗ್, ಕ್ಲೇ ಮಾಡೆಲಿಂಗ್ ಸೇರಿ ಹಲವು ಕೌಶಲಗಳನ್ನು ಹೊಂದಿದ್ದಾಳೆ. ಆಕೆಯ ಸಾಧನೆ ಖುಷಿ ತಂದಿದೆ ಎಂದು ತಾಯಿ ದೀಪಾ ಹೇಳುತ್ತಾರೆ. ಆಕೆಗೆ ಅಗತ್ಯ ಸಹಾಯ ಮತ್ತು ಬೆಂಬಲ ಸಿಕ್ಕರೆ ದೇಶ ಮೆಚ್ಚುವ ಸಾಧನೆ ಆಕೆಯಿಂದ ಸಾಧ್ಯವಾಗುತ್ತದೆ ಎಂದು ಆಶಾಭಾವ ವ್ಯಕ್ತಪಡಿಸುತ್ತಾರೆ.

ನನ್ನ ಮಗಳು ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಹುಲಾ ಹೂಪ್ ರಿಂಗ್ ತಿರುಗಿಸುವುದನ್ನು ಅಭ್ಯಾಸ ಮಾಡಿ, ಈ ಸಾಧನೆ ಮಾಡಿದ್ದಾಳೆ. ಇದಕ್ಕೆ ಆಕೆಯ ತಾಯಿ ದೀಪಾ ಮಾರ್ಗದರ್ಶನವೂ ಇದೆ. ಆಕೆಗೆ ಇನ್ನಷ್ಟು ಒಳ್ಳೆಯ ಅವಕಾಶ ಸಿಕ್ಕರೆ ಹೆಚ್ಚಿನ ಸಾಧನೆ ಮಾಡುತ್ತಾಳೆ. ಶ್ರೀನಿವಾಸ್, ಪ್ರತೀಕ್ಷಾಳ ತಂದೆ ನಾವು ಬಡ ಕುಟುಂಬದವರು. ಆದರೆ ಮಗಳು ಹುಲಾ ಹೂಪ್ ಮೂಲಕ ಹಲವು ಸಾಧನೆ ಮಾಡಿದ್ದಾಳೆ. ಗ್ರಾಮೀಣ ಮಕ್ಕಳು ಸಾಧನೆಗೆ ಮಾಡಲು ಹಿಂದೆ ಉಳಿಯಬಾರದು. ದೀಪಾ, ಪ್ರತೀಕ್ಷಾಳ ತಾಯಿ