ರಿಪ್ಪನ್‌ಪೇಟೆ ಸಮೀಪದ ಅರಸಾಳು ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ರೈಲಿಗೆ ಪೂಜೆ ಸಲ್ಲಿಸಲಾಯಿತು. ನಾಗಾರ್ಜುನ ಸ್ವಾಮಿ, ದೊಡ್ಡೇಗೌಡ, ಲೋಕೇಶ್ ಇತರರಿದ್ದರು. 
ಜಿಲ್ಲೆ

ಇಂಟರ್ ಸಿಟಿ ರೈಲು ನಿಲುಗಡೆಗೆ ಸಂಭ್ರಮ

ರಿಪ್ಪನ್‌ಪೇಟೆ: ಬೆಂಗಳೂರು - ತಾಳಗುಪ್ಪ ಇಂಟರ್‌ಸಿಟಿ ರೈಲು ಅರಸಾಳು ರೈಲ್ವೇ ನಿಲ್ದಾಣದಲ್ಲಿ ನಿಲುಗಡೆಗೊಳ್ಳುತ್ತಿರುವುದಕ್ಕೆ, ಬಿಜೆಪಿ ಮುಖಂಡರು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.

ಸೋಮವಾರ ಮುಂಜಾನೆ ರೈಲು ನಿಲ್ದಾಣದಲ್ಲಿ ನಿಲುಗಡೆಗೊಳ್ಳುತ್ತಿದ್ದಂತೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ನಾಗಾರ್ಜುನ ಸ್ವಾಮಿ ಮಾತನಾಡಿ, ಜನರ ಬಹುದಿನದ ಬೇಡಿಕೆಯನ್ನು ಸಂಸದರಾದ ಬಿ.ವೈ. ರಾಘವೇಂದ್ರ ಈಡೇರಿಸಿ, ಜನರ ಸುಲಭ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ ಎಂದರು.

ಪ್ರತಿದಿನ ಬೆಳಗ್ಗೆ ತಾಳಗುಪ್ಪದಿಂದ - ಬೆಂಗಳೂರಿಗೆ ಹೊರಡುವ ರೈಲು ಅರಸಾಳು ನಿಲ್ದಾಣದಲ್ಲಿ 6.19ಕ್ಕೆ ನಿಲುಗಡೆಗೊಂಡು 6.20ಕ್ಕೆ ಹೊರಡಲಿದೆ. ಮಧ್ಯಾಹ್ನ ಬೆಂಗಳೂರಿನಿಂದ ಹೊರಟು ಅರಸಾಳು ನಿಲ್ದಾಣಕ್ಕೆ ರಾತ್ರಿ 8.20ಕ್ಕೆ ಆಗಮಿಸಿ, 8.21ಕ್ಕೆ ಹೊರಡಲಿದೆ. ಕೋಣಂದೂರು, ಹುಂಚ ಹಾಗೂ ಹೊಸನಗರ ಭಾಗದ ಪ್ರಯಾಣಿಕರಿಗೆ ಬಹಳ ಅನುಕೂಲವಾಗಲಿದೆ ಎಂದರು. ಮುಖಂಡರಾದ ದೊಡ್ಡೇಗೌಡ, ಲೋಕೇಶ್, ಗಣೇಶ ಇತರರಿದ್ದರು.