ಜಿಲ್ಲೆ

ಇಂಜಿನ್‌ಗೆ ರಾಗಿ ಹುಲ್ಲು ಸಿಲುಕಿ ಕಾರಿಗೆ ಬೆಂಕಿ

ಬಾಲಮುರಳಿಕೃಷ್ಣ

ಸರಗೂರು: ರಸ್ತೆಯಲ್ಲಿ ಹಾಕಿದ್ದ ಒಕ್ಕಣೆಯಿಂದಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಕಾರು ಸುಟ್ಟು ಕರಕಲಾದ ಘಟನೆ ಸರಗೂರು ತಾಲ್ಲೂಕಿನ ಯಶವಂತಪುರ ಗ್ರಾಮದ ಬಳಿ ನಡೆದಿದೆ.

ತಾಲ್ಲೂಕಿನ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಹೋಗುವ ರಸ್ತೆಯಲ್ಲಿರುವ ಯಶವಂತಪುರ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಹೊಂಡ ಸಿಟಿ ಕಾರಿನ ಇಂಜಿನ್‌ಗೆ ರಾಗಿ ಮತ್ತು ಹುರುಳಿಯ ಹುಲ್ಲು ಸಿಲಿಕಿಕೊಂಡು ಬಳಿಕ ಬೆಂಕಿ ಕಾಣಿಸಿಕೊಂಡಿದೆೆ. ಬಳಿಕ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.

ಮೈಸೂರು ಮೂಲದ ಇರ್ಫಾನ್ ಮತ್ತು ಆತನ ಸ್ನೇಹಿತ ರೂಮನ್ ಕಾಡು ಬೇಗೂರಿನಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಮೈಸೂರಿಗೆ ಹೋಗುವಾಗ ತಡರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಯದಿಂದ ಪಾರಾಗಿದ್ದಾರೆ. ಮಧ್ಯರಾತ್ರಿ ಈ ಘಟನೆ ನಡೆದಿದ್ದರಿಂದ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಬೆಂಕಿ ನಂದಿಸಲು ಯಾವುದೇ ನೆರವು ಸಿಗದ ಕಾರಣ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಪ್ರಯಾಣಿಕರು ಕಾರನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು.

ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಸರಗೂರು ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.