ಔರಾದ್: ನಾನು ಓದಿದ್ದು ಸಾಫ್ಟ್ ವೇರ್ ಇಂಜಿನಿಯರ್. ಆದರೆ ಮದುವೆ ನಂತರ ಪತಿ ಮನೆಯವರ ಮಾತಿಗೆ ಮೀರದೆ ಕೃಷಿಗೆ ಸೈ ಎಂದೆ. ಹಲವು ಸಂಕಷ್ಟಗಳ ನಡುವೆಯೂ ಇಷ್ಟಪಟ್ಟು ದುಡಿದು ಕೃಷಿಯಲ್ಲಿ ಸಾಧನೆ ಮಾಡಿದೆ. ಇಂಜಿನಿಯರ್ ವೃತ್ತಿಗಿಂತ ಹೊಲದಲ್ಲಿ ಕೆಲಸ ಮಾಡಿ ಹೆಚ್ಚು ಗಳಿಸಿ ಆರ್ಥಿಕವಾಗಿ ಸಬಲರಾಗಬಹುದು. ಕೃಷಿಯಲ್ಲಿ ಸಿಗುವ ತೃಪ್ತಿ ಬೇರೆಲ್ಲೂ ಸಿಗದು ಎಂದು ರಾಯಚೂರಿನ ಯಶಸ್ವಿ ರೈತ ಸಾಧಕಿ ಕವಿತಾ ಮಿಶ್ರಾ ಹೇಳಿದರು.
ರಿಲಾಯನ್ಸ್ ಫೌಂಡೇಷನ್ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸಹಯೋಗದಡಿ ಶನಿವಾರ ಧೂಪತ ಮಹಾಗಾಂವ ಗ್ರಾಪಂ ಆವರಣದಲ್ಲಿ ಆಯೋಜಿಸಿದ್ದ ಕಿಸಾನ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ತಮ್ಮ ಕೃಷಿ ಯಶೋಗಾಥೆ ಬಿಚ್ಚಿಟ್ಟು ಸಭಿಕರ ಗಮನ ಸೆಳೆದರು. ಕೃಷಿ ಹೇಗೆ ಲಾಭಕರ ಎಂಬುದನ್ನು ತಿಳಿಹೇಳಿ ರೈತರಲ್ಲಿ ಪ್ರೇರಣೆ ತುಂಬಿದರು.
ನನ್ನೂರು ಧಾರವಾಡ. ರಾಯಚೂರು ಜಿಲ್ಲೆ ಕವಿತಾಳ ಪತಿಯ ಊರು. ಇದು ಸೌಲಭ್ಯವಂಚಿತ ಗ್ರಾಮ. ಮದುವೆ ಬಳಿಕ ಬಹುರಾಷ್ಟ್ರೀಯ ಕಂಪನಿಯಲ್ಲಿ ನೌಕರಿ ಸಿಕ್ಕಿತು. ನೌಕರಿಗೆ ಹೋಗುವುದಾಗಿ ಪತಿಗೆ ಹೇಳಿದಾಗ ನನ್ನ ಸಂದರ್ಶನ ಪತ್ರ ಹರಿದು ಹಾಕಿದರು. ಹೊಲ, ಮನೆ ನೋಡ್ಕೋ ಸಾಕು ಅಂದ್ರು. ಅಮ್ಮನಿಗೆ ಕೇಳಿದರೆ ಗಂಡನ ಮನೆಯವರು ಹೇಳಿದಂತೆ ಕೇಳು ಎಂದರು. ಸಾಫ್ಟ್ ವೇರ್ ಇಂಜಿನಿಯರ್ ಆಗಬೇಕಾದ ನಾನು ಬೇರೆ ದಾರಿ ಇಲ್ಲದೆ ಕೃಷಿಗೆ ಸೈ ಎಂದೆ. ಆದರೆ ಏನಾದರೂ ಸಾಧನೆ ಮಾಡಬೇಕೆಂಬ ನನ್ನಲ್ಲಿದ್ದ ಹಂಬಲ ಇಂದು ಕೃಷಿ ಸಾಧಕಿಯಾಗಿ ಮಾಡಿತು ಎಂದು ವಿವರಿಸಿದರು.
ಕಲ್ಲುಗಳೇ ತುಂಬಿದ್ದ 22 ಎಕರೆ ಬರಡು ಭೂಮಿಗೆ ಹೊಸ ರೂಪ ಕೊಟ್ಟೆ. 12 ಕೊಳವೆಬಾವಿಗೆ ನೀರು ಸಿಗಲಿಲ್ಲ. 13ನೇಯದ್ದರಲ್ಲಿ ಕೇವಲ ಒಂದೂವರೆ ಇಂಚು ನೀರು ಬಂತು. ಮೊದಲು ದಾಳಿಂಬೆ ಬೇಸಾಯಕ್ಕೆ ಕೈಹಾಕಿದೆ. ಇದರಿಂದ ಬಂದ ಆದಾಯ ಸ್ವಲ್ಪ ಖುಷಿ ಕೊಟ್ಟಿತು. ಆದರೆ ದಾಳಿಂಬೆ ವಿದೇಶಕ್ಕೆ ಸಾಗಿಸುವ ಭರದಲ್ಲಿ ಕೈಯಲ್ಲಿದ್ದ ಎಲ್ಲ ಹಣದ ಜತೆಗೆ ಸಾಲ ಮಾಡಿದೆ. ಕೆಲವೆಡೆಗಳಿಂದ ದಾಳಿಂಬೆ ರಿಜೆಕ್ಟ್ ಆಗಿ ವಾಪಸ್ ಬಂದವು. ಆಗ ಗುಡ್ಡದಿಂದ ಜಾರಿ ಬಿದ್ದ ಅನುಭವ ಆಯಿತು. ಸಾಲಗಾರರು ಬೆನ್ನತ್ತಿದರು. ಸಂಬಂಧಿಗಳು ಸಹ ದೂರ ಉಳಿದರು. ಆಗ ನಾನು ಆತ್ಮಹತ್ಯೆ ಚಿಂತೆ ಮಾಡಿದೆ. ಆ ಸ್ಥಿತಿಯಲ್ಲಿ ಪತಿ ನನ್ನ ಕೈಹಿಡಿದರು. ಕೃಷಿಯಲ್ಲಾದ ತಪ್ಪನ್ನು ತಿದ್ದಿಕೊಂಡೆ. ಏಕಬೆಳೆ ಬದಲು ಬಹು ಬೆಳೆ ಆರಂಭಿಸಿದೆ. ಶ್ರೀಗಂಧ, ಮಾವು, ಪೇರು, ಕರಿಬೇವು, ಸೀಬೆ, ನೇರಳೆ ಜತೆ ಕುರಿ, ಕೋಳಿ ಸಾಕಣೆ ಮಾಡಿದೆ. ಪರಿಸ್ಥಿತಿಗಳ ಜತೆಗೆ ಸಾಗಬೇಕು ಎಂಬುದನ್ನು ಅರಿತು ಋತುಮಾನದ ಬೆಳೆ ಅನುಸರಿಸಿದೆ. ಎಲ್ಲವೂ ಕೈಹಿಡಿದವು. ಕೃಷಿ ಕೋಟ್ಯಧೀಶ ಮಾಡಬಹುದು ಎಂಬುದನ್ನು ಸಾಬೀತುಪಡಿಸಿದೆ. ನನ್ನ ಕೃಷಿ ಸಾಧನೆಗೆ 4 ರಾಷ್ಟ್ರ, 1 ಅಂತಾರಾಷ್ಟ್ರೀಯ, 16 ರಾಜ್ಯ ಪ್ರಶಸ್ತಿ ಜತೆಗೆ ಸ್ಥಳೀಯ ಹಲವು ಪ್ರಶಸ್ತಿಗಳು ಬಂದಿವೆ. ಸ್ವಲ್ಪ ಜಮೀನಿದ್ದರೂ ಕಷ್ಟಪಟ್ಟು, ಇಷ್ಟಪಟ್ಟು ದುಡಿದರೆ ಲಾಭ ಖಚಿತ ಎಂದರು.
ಸಹಾಯಕ ಕೃಷಿ ನಿರ್ದೇಶಕ ಎ.ಎಂ. ಮಾಜೀದ್ ಕೃಷಿ ಇಲಾಖೆ ಕುರಿತು, ತಾಪಂ ಇಒ ಮಾಣಿಕರಾವ ಪಾಟೀಲ್ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಕವಿತಾ ಮಿಶ್ರಾ ಭಾಷಣ ಮುಗಿಯುತ್ತಿದ್ದಂತೆ ರೈತರೊಂದಿಗೆ ಸಂವಾದ ಜರುಗಿತು. ವಿವಿಧ ಬೆಳೆಗಳನ್ನು ಯಾವ ರೀತಿ ಬೆಳೆಯಬೇಕು ಹೀಗೆ ರೈತರ ಪ್ರಶ್ನೆಗಳಿಗೆ ಮಿಶ್ರಾ ಸಮಾಧಾನಕರ ಉತ್ತರ ನೀಡಿದರು.
ರಿಲಾಯನ್ಸ್ ಫೌಂಡೇಷನ್ ಜಿಲ್ಲಾ ಯೋಜನಾಧಿಕಾರಿ ಶಿವಾನಂದ ಮಠಪತಿ, ಕೆವಿಕೆ ವಿಜ್ಞಾನಿ ಡಾ.ಅಕ್ಷಯಕುಮಾರ, ತೋಟಗಾರಿಕೆ ಸಹಾಯಕ ನಿರ್ದೇಶಕ ಸಚಿನ್, ಮೀನುಗಾರಿಕೆ ಸಹಾಯಕ ನಿರ್ದೇಶಕ ಗಣೇಶ, ಡಾ.ರಾಜೇಶ್ವರಿ, ರಾಮಚಂದ್ರ ಶೇರಿಕಾರ, ಸಂಗಪ್ಪ ಅತಿವಾಳ ಇತರರಿದ್ದರು. ಪಿಡಿಒ ಶಿವಾನಂದ ಔರಾದೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಚೆನ್ನಬಸವ ಹೇಡೆ ನಿರೂಪಣೆ ಮಾಡಿದರು.
ಹರಿದುಬಂದ ರೈತ ಸಮೂಹ
ಸಮ್ಮೇಳನಕ್ಕೆ ವಿವಿಧೆಡೆಯಿಂದ ರೈತ ಸಮೂಹ ಹರಿದು ಬಂದಿತು. ಏಕಂಬಾ, ಮಣಿಗೆಂಪುರ, ಬಾಬಳಿ, ಬಾಚೇಪಳ್ಳಿ, ಜಂಬಗಿ, ವಡಗಾಂವ, ಬೆಳಕುಣಿ(ಭೌ), ನಾಗೂರ(ಎಂ), ನಂದಿನಾಗೂರ, ಸಂತಪುರ, ಪಾಶಾಪುರ, ಖಾನಾಪುರ, ಚಿಕಲಿ, ಸುಂದಾಳ ಸೇರಿ ವಿವಿಧ ಗ್ರಾಮಗಳಿಂದ ಸಾವಿರಾರು ರೈತರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು. ರೈತರು ಹುಗ್ಗಿ, ಸಾಂಬಾರು, ಅನ್ನ, ಭಜ್ಜಿ, ಜೋಳದ ರೊಟ್ಟಿ, ಶೇಂಗಾ ಹೋಳಿಗೆ, ಮೊಸರು, ಮಜ್ಜಿಗೆಯಂಥ ದೇಸಿ ಖಾದ್ಯಗಳನ್ನು ಸವಿದರು.
ರೈತ ಸಾಧಕಿಗೆ ಎತ್ತಿನ ಬಂಡಿ ಮೆರವಣಿಗೆ
ರೈತ ಸಾಧಕಿ ಕವಿತಾ ಮಿಶ್ರಾ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಭವ್ಯ ಸ್ವಾಗತ ಕೋರಲಾಯಿತು. ಬಸವ ಮಂಟಪದಿಂದ ಎತ್ತಿನ ಬಂಡಿಯಲ್ಲಿ ಮಿಶ್ರಾ ಅವರನ್ನು ಕೂಡಿಸಿ ವಾದ್ಯ ಮೇಳಗಳ ಮೂಲಕ ಗ್ರಾಪಂ ಕಚೇರಿವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಸಮ್ಮೇಳನದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ 10 ರೈತರನ್ನು ಸನ್ಮಾನಿಸಲಾಯಿತು. ಸುಂದಾಳದಲ್ಲಿ 60 ದಿನಗಳಿಂದ ಜರುಗುತ್ತಿರುವ ಟೇಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸ್ವಸಹಾಯ ಸಂಘದ ಮಹಿಳೆಯರಿಗೆ ನಗದು ಚೆಕ್ ಗಳನ್ನು ಸಹ ನೀಡಲಾಯಿತು.
ಯಾವ ಕೆಲಸವೂ ಸಣ್ಣದಲ್ಲ. ಧರ್ಮ, ಕರ್ಮಗಳೆರಡೂ ರೈತರ ಮೇಲೆ ನಿಂತಿವೆ. ಕೃಷಿ, ತೋಟಗಾರಿಕೆ ಜತೆ ಅರಣ್ಯ ಕೃಷಿ ಮಾಡಿದರೆ ಗೆಲುವು ಸಾಧ್ಯ. ಕಾರ್ಮಿಕರ ಜತೆ ನಾವು ಸಹ ಪರಿಶ್ರಮ ಪಡಬೇಕು. ಒಂದು ಬೆಳೆ ಹಿಂದೆ ಬೀಳದೆ ಋತುಮಾನದ ಬೆಳೆಗೆ ಆದ್ಯತೆ ಕೊಟ್ಟು ಬಹು ಬೆಳೆ ಪದ್ಧತಿ ಅಳವಡಿಸಿಕೊಂಡರೆ ಲಾಭ ಖಚಿತ.| ಕವಿತಾ ಮಿಶ್ರಾಪ್ರಗತಿಪರ ರೈತ ಮಹಿಳೆ, ರಾಯಚೂರು
ರಿಲಾಯನ್ಸ್ ಫೌಂಡೇಷನ್ ರೈತರ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಪ್ರತಿವರ್ಷ ಕಿಸಾನ್ ಸಮ್ಮೇಳನ ಆಯೋಜಿಸಿ ಯುವಕರನ್ನು ಕೃಷಿಯತ್ತ ಆಕರ್ಷಿಸುವಂತೆ ಮಾಡುತ್ತಿದೆ. ಗ್ರಾಪಂ ಸದಸ್ಯರು ಮತ್ತು ಮಹಿಳಾ ಸ್ವಸಹಾಯ ಸಂಘ ಸದಸ್ಯರಿಗೆ ನಾಯಕತ್ವ ತರಬೇತಿ ಸಹ ನೀಡಿ ಸ್ವಾವಲಂಬಿ ಜೀವನಕ್ಕೆ ಪ್ರೋತ್ಸಾಹಿಸಲಾಗುತ್ತಿದೆ.| ಶಿವಾನಂದ ಮಠಪತಿರಿಲಾಯನ್ಸ್ ಫೌಂಡೇಷನ್ ಜಿಲ್ಲಾ ಯೋಜನಾಧಿಕಾರಿ