ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನ 13ನೇ ಪದವಿ ಪ್ರದಾನ ಸಮಾರಂಭ ಶನಿವಾರ ಕಾಲೇಜು ಆವರಣದಲ್ಲಿ ಜರುಗಿತು.
ಅತಿಥಿಯಾಗಿ ಪಾಲ್ಗೊಂಡಿದ್ದ ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆ ನಿರ್ದೇಶಕ ಡಾ. ವೆಂಕಪ್ಪ ದೇಸಾಯಿ ಮಾತನಾಡಿ, ಭಾರತದ ಪ್ರಾಚೀನ ಸಂಪ್ರದಾಯಗಳಲ್ಲಿ ಅಡಗಿರುವ ಅಗಾಧ ಜ್ಞಾನದ ಮಾಹಿತಿ ನೀಡಿದರಲ್ಲದೆ, ನಮ್ಮ ಐತಿಹಾಸಿಕ ಕಟ್ಟಡಗಳಾದ ದೇವಾಲಯಗಳು, ಅರಮನೆಗಳು, ಇತರ ಕಡೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಡಗಿದೆ. ಇಂತಹ ಸತ್ಯಗಳನ್ನು ಅಧ್ಯಯನ ಮಾಡಿ ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಬಗ್ಗೆ ಹೆಮ್ಮೆ ಪಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಿದ್ಯಾರ್ಥಿಗಳು ಈ ಜ್ಞಾನವನ್ನು ಜಗತ್ತಿಗೆ ಪ್ರಚಾರ ಮಾಡಬೇಕು ಎಂದರು.
ಎಸ್‌ಡಿಎಂ ವಿವಿ ಉಪಕುಲಪತಿ ಡಾ. ನಿರಂಜನಕುಮಾರ ಮಾತನಾಡಿ, ನಮ್ಮೆಲ್ಲರ ಜೀವನದಲ್ಲಿ ಯಶಸ್ಸು ಸಾಧಿಸಲು ಕೃತಜ್ಞತಾ ಭಾವ ಅಗತ್ಯ. ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನದ ಜಗತ್ತಿನಲ್ಲಿ ನಮ್ಮ ಪೋಷಕರು ಮತ್ತು ಡಾ ವೀರೇಂದ್ರ ಹೆಗ್ಗಡೆ ಅವರಂತಹ ಆದರ್ಶ ವ್ಯಕ್ತಿಗಳು ನಮ್ಮಲ್ಲಿ ನಿರ್ಮಿಸಿದ ಮೌಲ್ಯ, ವ್ಯವಸ್ಥೆಯು ನಮಗೆ ಮಾರ್ಗದರ್ಶನ ನೀಡುತ್ತದೆ ಎಂದರು.
ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಪೂಜಾ ನಾಡಿಗೇರ 9.94 ಸಿಜಿಪಿಎ ಅಂಕದೊಂದಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಚಿನ್ನದ ಪದಕ ಪಡೆದರು. 697 ಪದವಿ ಪೂರ್ವ ವಿದ್ಯಾರ್ಥಿಗಳು, 28 ಸ್ನಾತಕೋತ್ತರ ಮತ್ತು 29 ಪಿಎಚ್‌ಡಿ ವಿದ್ಯಾರ್ಥಿಗಳು ಪ್ರಮಾಣಪತ್ರ ಪಡೆದರು.
ಎಸ್‌ಡಿಎಂಇ ಸೊಸೈಟಿ ಕಾರ್ಯದರ್ಶಿ ಜೀವಂಧರಕುಮಾರ, ಆಡಳಿತ ಮಂಡಳಿ ಸದಸ್ಯರು, ಶೈಕ್ಷಣಿಕ ಮಂಡಳಿ ಸದಸ್ಯರು, ಡೀನ್‌ಗಳು ಮತ್ತು ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಇತರರು ಇದ್ದರು. ಪ್ರಾಂಶುಪಾಲ ಡಾ. ಕೆ.ಗೋಪಿನಾಥ ಸ್ವಾಗತಿಸಿದರು. ಪ್ರೊ. ವಿ.ಕೆ. ಪರ್ವತಿ ವಂದಿಸಿದರು.