ಜಿಲ್ಲೆ

ಇಂಗ್ಲೆಂಡ್ ಪಾರ್ಲಿಮೆಂಟರ್ ಲೀಡರ್ ಶಿಪ್ ಗೆ ವಾಲಿ ಆಯ್ಕೆ

Bidar

ಬೀದರ್: ಲಂಡನ್‌ನ ಪ್ರತಿಷ್ಠಿತ ಕೋವೆಂಟ್ರಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪ್ರತಿನಿಧಿಯಾಗಿ ಆಯ್ಕೆಯಾಗಿ ಗಮನ ಸೆಳೆದಿರುವ ನಗರದ ಪ್ರತಿಭಾವಂತ ವಿದ್ಯಾರ್ಥಿ ಆದೀಶ್ ಡಾ.ರಜನೀಶ್ ವಾಲಿ ಇದೀಗ ಮತ್ತೊಂದು ಸಾಧನೆ ಮಾಡಿದ್ದಾರೆ. ವಿಶ್ವಸಂಸ್ಥೆ ಪ್ರಶಸ್ತಿ ಪುರಸ್ಕೃತ ಫೇಥ್ ಆ್ಯಂಡ್ ಬಿಲೀಫ್ ಫೋರಂನ ಪಾರ್ಲಿಮೆಂಟರ್ ಲೀಡರ್ ಶಿಪ್ ಪ್ರೋಗ್ರಾಂನಲ್ಲಿ ಪಾಲ್ಗೊಳ್ಳುವ ಸದಾವಕಾಶ ಪಡೆದುಕೊಂಡಿದ್ದಾರೆ.

ಫೇಥ್ ಆ್ಯಂಡ್ ಬಿಲೀಫ್ ಫೋರಂ ಅತ್ಯಂತ ಪ್ರತಿಷ್ಠಿತ ಹಾಗೂ ಗೌರವಾನ್ವಿತ ಸಂಸ್ಥೆಯಾಗಿದ್ದು, ವಿಶ್ವಸಂಸ್ಥೆಯಿಂದ ಪುರಸ್ಕಾರ ಪಡೆದಿದೆ. ಈ ಸಂಸ್ಥೆಯು ಪ್ರತಿ ವರ್ಷ ಯುವ ನಾಯಕತ್ವ ಬೆಳವಣಿಗೆ ಮತ್ತು ಯುವಕರಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ, ಉದ್ಯಮ ಸ್ಥಾಪನೆ, ತಂತ್ರಜ್ಞಾನ ಬಳಕೆ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಪರಿಪೂರ್ಣತೆ ಸಾಧಿಸಲು ನೆರವಾಗುವ ಪಾರ್ಲಿಮೆಂಟರ್ ಲೀಡರ್ ಶಿಪ್ ಪ್ರೋಗ್ರಾಂ ರೂಪಿಸುತ್ತದೆ.

ನಾಯಕತ್ವ ಗುಣ ಇರುವ ಮತ್ತು ಯುವ ಉದ್ಯಮಿಗಳನ್ನು ಈ ಪ್ರತಿಷ್ಠಿತ ಯೋಜನೆಯಡಿ ಆಯ್ಕೆ ಮಾಡಲಾಗುತ್ತದೆ. 2020-21ನೇ ಸಾಲಿಗೆ ಆಯ್ಕೆಯಾದ ಐವರಲ್ಲಿ ಆದೀಶ್ ವಾಲಿ ಏಕೈಕ ಭಾರತೀಯರು. ಮೇಲಾಗಿ ಕನ್ನಡಿಗರು ಎಂಬುದು ವಿಶೇಷ.

ಪಾರ್ಲಿಮೆಂಟರ್ ಲೀಡರ್ ಶಿಪ್ ಪ್ರೋಗ್ರಾಂ ಅಡಿ ಆಯ್ಕೆಯಾದವರು ಇಂಗ್ಲೆಂಡ್ ಲೋಕಸಭಾ ಸದಸ್ಯೆ ತೈವೊ ಜತೆ ರಾಜಕೀಯ ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಹುದು. ಇಂಗ್ಲೆಂಡ್‌ ಪಾರ್ಲಿಮೆಂಟ್ ಆಗಿರುವ ವೆಸ್ಟ್ ಮಿನಿಸ್ಟರ್ ಕಲಾಪದಲ್ಲಿ ಭಾಗಿಯಾಗಬಹುದು. ಅಲ್ಲಿನ ಪ್ರಧಾನಿ ಪಾಲ್ಗೊಳ್ಳುವ ಅಧಿವೇಶನದಲ್ಲೂ ಪಾಲ್ಗೊಳ್ಳಬಹುದು. ಇದರ ಜತೆಗೆ ಇಂಗ್ಲೆಂಡ್‌ನ ಹೆಸರಾಂತ ಕಂಪನಿಗಳ ಸಿಇಒ ಮತ್ತು ನಿರ್ದೇಶಕರನ್ನು ಭೇಟಿಯಾಗುವ, ಕಾರ್ಯ ವಿಧಾನ ತಿಳಿದುಕೊಳ್ಳುವ, ಉದ್ಯಮ ಕ್ಷೇತ್ರದಲ್ಲಿನ ಒಳಹೊರಗನ್ನು ತಿಳಿದುಕೊಳ್ಳುವ ಅವಕಾಶ ಸಿಗಲಿದೆ. ವರ್ಷದ ಅವಧಿ ಪೂರ್ಣಗೊಂಡ ನಂತರ ವೈಭವಪೂರ್ಣ ಕಾರ್ಯಕ್ರಮ ನಡೆಸಿ ಪದವಿ ಪ್ರದಾನ ಮಾಡಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರ ಮಾಡಿರುವ ಸಂಸ್ಥೆಯೊಂದರ ಮಹತ್ವದ ಯೋಜನೆಯಡಿ ಆದೀಶ್ ವಾಲಿ ಆಯ್ಕೆಯಾಗುವ ಮೂಲಕ ರಾಜ್ಯದ, ದೇಶದ ಗೌರವ ಹೆಚ್ಚಿಸಿದ್ದಾರೆ.