ಜಿಲ್ಲೆ

ಇಂಗ್ಲಿಷ್ ವ್ಯಾಮೋಹಕ್ಕೆ ಮಾತೃಭಾಷೆಗೆ ಧಕ್ಕೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಬೇಸರ

ಆನೇಕಲ್: ದೇಶದಲ್ಲಿ ಎಲ್ಲ ಮಾತೃ ಭಾಷೆಗಳು ಇಂಗ್ಲಿಷ್ ವ್ಯಾಮೋಹದಿಂದ ಕಳೆಗುಂದುತ್ತಿವೆ. ಇದಕ್ಕೆ ಸರ್ಕಾರದ ಕೆಲ ನಿಯಮಗಳೇ ಕಾರಣ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರು ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಪುಟ್ಬಾಲ್ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ಮಾತನಾಡಿದರು.

ಬ್ರಿಟಿಷರು ದೇಶ ಬಿಟ್ಟು ಹೋದರೂ ಇಂದಿಗೂ ನಾವು ಇಂಗ್ಲಿಷ್ ವ್ಯಾಮೋಹ ಬಿಟ್ಟಿಲ್ಲ. ಮಹಾತ್ಮ ಗಾಂಧಿ ಅವರು ಅಂದಿನ ಕಾಲದಲ್ಲೇ ಮಾತೃ ಭಾಷೆ ಉಳಿಸಲು ಕರೆ ನೀಡಿದ್ದರು. ಈಗಾಲಾದರೂ ಇಂಗ್ಲಿಷ್ ವ್ಯಾಮೋಹ ಬಿಡದಿದ್ದರೆ ದೇಶದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂದರು.

ಶಾಸಕ ಬಿ.ಶಿವಣ್ಣ ಮಾತನಾಡಿ, ನಟ ಪುನೀತ್ ರಾಜಕುಮಾರ್ ಅವರ ಅಗಲಿಕೆಯಿಂದ ಕನ್ನಡ ನಾಡಿಗೆ ಭಾರಿ ನಷ್ಟವಾಗಿದೆ ಎಂದರು.

ಕನ್ನಡ ಸಂಭ್ರಮ ಒಂದು ದಿನಕ್ಕೆ ಸೀಮಿತವಾಗಬಾರದು. ಇದು ಜೀವನದ ಭಾಷೆಯಾಗಬೇಕು ಎಂದರು.

ತಹಸೀಲ್ದಾರ್ ದಿನೇಶ್ ಮಾತನಾಡಿ, ನಟ ಪುನೀತ್ ರಾಜ್‌ಕುಮಾರ್ ಅವರ ಅಗಲಿಕೆ ಕನ್ನಡ ನಾಡಿನ ಜನರನ್ನು ಘಾಸಿಗೊಳಿಸಿದೆ. ಇಂತಹ ಸಂದರ್ಭದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸದೆ ಸರಳ ಕಾರ್ಯಕ್ರಮಕ್ಕೆ ಒತ್ತು ನೀಡಲಾಗಿದೆ ಎಂದರು.

ಗಾಯಕಿ ಎಂ.ಡಿ.ಪಲ್ಲವಿ ಹಾಗೂ ತಂಡ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟಿತು. ಸಾಹಿತಿ ಸಯ್ಯದ್ ರೆಹಮತ್ ಉಲ್ಲಾ ಅವರ ಮೊದಲ ಬೆಳಕು ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಪುರಸಭಾ ಉಪಾಧ್ಯಕ್ಷೆ ಲಲಿತಾ ಲಕ್ಷ್ಮೀನಾರಾಯಣ್, ಡಿವೈಎಸ್‌ಪಿ ಮಲ್ಲೇಶ್, ವೃತ್ತ ನಿರೀಕ್ಷಕ ಕೆ.ವಿಶ್ವನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ನರಸಿಂಹರಾಜು, ನೌಕರರ ಸಂಘದ ಅಧ್ಯಕ್ಷ ಶಿವಣ್ಣ, ಕರವೇ ಉಪಾಧ್ಯಕ್ಷ ಆರ್. ಪುನೀತ್, ಪುರಸಭಾ ಸದಸ್ಯ ಮುನಾವರ್, ರವಿ, ಕಸಾಪ ಮಾಜಿ ಅಧ್ಯಕ್ಷ ಪಿ.ಧನಂಜಯ ಮತ್ತಿತರರು ಹಾಜರಿದ್ದರು.

ರಾಜ್ಯೋತ್ಸವ ಪ್ರಶಸ್ತಿ:  ತಾಲೂಕು ಆಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾಜಸೇವೆ: ಅತ್ತಿಬೆಲೆ ಪೊಲೀಸ್ ವೃತ್ತ ನಿರೀಕ್ಷಕ ಕೆ.ವಿಶ್ವನಾಥ್, ಕನ್ನಡ ಪಂಡಿತ: ಎಸ್.ರೇಣುಕಾರಾಧ್ಯ, ಸಂಗೀತ ವಿದ್ವಾನ್ ಎನ್.ಶ್ರೀನಿವಾಸ್, ಭುವನೇಶ್ವರಿ ಕನ್ನಡ ಸಂಘದ ಎಸ್.ಮೂರ್ತಿ ಕುಮಾರ್, ನಾಟಕ ನಿರ್ದೇಶಕ ಎನ್.ಅಶ್ವತ್ಥ್, ಡೋಲು ವಿದ್ವಾನ್ ಆರ್.ತೇಜ, ಸಾಮಾಜಿಕ ಸೇವೆಯಲ್ಲಿ ಮಲ್ಟಿಮೀಡಿಯಾ ಚಂದ್ರು, ಕಿರಣ್‌ಕುಮಾರ್ ರೆಡ್ಡಿ, ಲೋಕೇಶ್‌ಗೌಡ, ಜಿ.ಕುಮಾರ್, ಸನಾವುಲ್ಲಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.