ಚಿಕ್ಕಮಗಳೂರು: ಮನೆ ಮತ್ತು ಸಮುದಾಯಗಳು ಸಮಾಜಮುಖಿಯಾಗಬೇಕು. ಸಾಹಿತ್ಯವು ಸಾಂಗತ್ಯವನ್ನು ತರುತ್ತದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಕಲ್ಯಾಣನಗರ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ವಕೀಲ ಬಿ.ಆರ್.ಜಗದೀಶ್ ನಿವಾಸದಲ್ಲಿ ಆಯೋಜಿಸಿದ್ದ ಶ್ರಾವಣ ಸಂಜೆಯ ಸಾಹಿತ್ಯಸುಧೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯ ಬದುಕಾಗಬೇಕು. ಮನಸ್ಸನ್ನು ಉದ್ರೇಕಿಸದೆ ಪ್ರಫುಲ್ಲಗೊಳಿಸುವಂತಿರಲಿ. ಮಾತೆಂಬುದು ಜ್ಯೋತಿರ್ಲಿಂಗ ಎಂದು ಶರಣರು ಹೇಳಿದ್ದಾರೆ. ನಾನು ಬರೆದರೆ ರಚನೆ, ನೀನು ಬರೆಸಿದರೆ ವಚನ ಎನ್ನುವ ಮೂಲಕ ಆಧ್ಯಾತ್ಮಿಕತೆಯನ್ನು ಸಾಹಿತ್ಯದಲ್ಲಿ ನೋಡಬಹುದು. ನಡೆ-ನುಡಿಯಲ್ಲಿ ಸಾಮರಸ್ಯ ಇರಲಿ ಎಂದು ಕಿವಿಮಾತು ಹೇಳಿದರು.
ಮನೆ, ಸಂಘಟನೆ, ಸಮುದಾಯಗಳು ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪಸರಿಸುವುದರೊಂದಿಗೆ ರಾಷ್ಟ್ರೀಯತೆಯನ್ನೂ ಬಿಂಬಿಸಬೇಕು. ಸರಳ ಜೀವನ, ಉದಾತ್ತ ಚಿಂತನೆ ನಮ್ಮದಾಗಲಿ. ಮಾತಿಗೆ ಮಾತು ಸೇರಿಸಿದರೆ ನುಡಿಯಾಗುತ್ತದೆ. ಮಾತಿಗೆ ಮಾತು ತಾಕಿದರೆ ಕಿಡಿಯಾಗುತ್ತದೆ. ಸಿದ್ಧನೆಂದರೆ ಯಾರ ಮನವನ್ನೂ ನೋಯಿಸದವ ಎಂಬ ಸಣ್ಣ ವಾಕ್ಯದಲ್ಲಿ ಸಾಹಿತ್ಯದ ಆಶಯವನ್ನೇ ಗುರುತಿಸಬಹುದು ಎಂದರು.
ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಮಾತನಾಡಿ, ಮಾತು ಹಿತಮಿತವಾಗಿರಲಿ. ಮಾತು ಚಿಂತನೆಗೆ ಮೂಲ, ಹೊಸತು ಕಲ್ಪನೆ ಗ್ರಾಸ. ಆದ್ಯತೆಯ ಪ್ರತಿರೂಪ ಪದವರ್ಣನೆಯಲ್ಲಿ ನುಡಿಚಿತ್ತದ ಅನುಭಾವ ಎಂಬ ಕವಿಯ ಪದ್ಯದಲ್ಲಿ ಸಾಹಿತ್ಯ ಸುಧೆ ಹರಿದಿದೆ. ಬದುಕಿನ ಸಾರವನ್ನು ಸಾಹಿತ್ಯದ ಮೂಲಕ ಉಣಬಡಿಸಿದವರು ಹಲವರು ಎಂದು ತಿಳಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ಮಾತನಾಡಿ, ಬದುಕಿನ ಎಲ್ಲ ಸೂಕ್ಷ್ಮಗಳನ್ನೂ ಸಾಹಿತ್ಯದ ಮೂಲಕ ಗ್ರಹಿಸಲು ಸಾಧ್ಯ. ವಚನಕಾರರು, ದಾಸರು, ಕವಿಶ್ರೇಷ್ಠರು ಮನೆಯಂಗಳದ ಕಾರ್ಯಕ್ರಮಗಳಲ್ಲಿ ಮುಖಾಮುಖಿಯಾಗುತ್ತಾರೆ. ರಾಷ್ಟ್ರಕವಿ ಕುವೆಂಪು ಹೇಳುವಂತೆ ಕನ್ನಡ ನಾಡು ಸರ್ವಜನಾಂಗದ ಶಾಂತಿಯ ತೋಟವಾಗಿದೆ ಎಂದರು.