ಜಿಲ್ಲೆ

ಇಂಗ್ಲಿಷ್ ಜಾಗತಿಕ ಭಾಷೆ:ಕೆ.ಟಿ. ಶ್ರೀಕಂಠೇಗೌಡ

ಹಾಸನ: ಪ್ರತಿಯೊಬ್ಬರಿಗೂ ಅವಶ್ಯಕವಾಗಿರುವ ಶಿಕ್ಷಣ ನಿಂತ ನೀರಲ್ಲ, ಅದು ವಿಶಾಲವಾಗಿ ನಿರಂತರವಾಗಿ ಹರಿಯುವ ಹೊಳೆಯಾಗಿದೆ ಎಂದು ರಾಜ್ಯ ಪಿಯು ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಟಿ. ಶ್ರೀಕಂಠೇಗೌಡ ಹೇಳಿದರು.
ನಗರದ ಸಂತ ಫಿಲೋಮಿನಾ ಕಾಲೇಜು ಸಭಾಂಗಣದಲ್ಲಿ ಡಿಪಾರ್ಟ್‌ಮೆಂಟ್ ಆಫ್ ಸ್ಕೂಲ್ ಪಿಯು ಎಜುಕೇಶನ್, ಫಾರಂ ಆಫ್ ಇಂಗ್ಲಿಷ್ ಉಪನ್ಯಾಸಕರು ಮತ್ತು ಪ್ರಿನ್ಸಿಪಾಲ್ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಿಯು ಕಾಲೇಜು ಇಂಗ್ಲಿಷ್ ಉಪನ್ಯಾಸಕರಿಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಬದಲಾವಣೆ ನಿರಂತರವಾಗಿ ಇರುತ್ತದೆ. ಪ್ರತಿನಿತ್ಯ ಹೊಸ ಹೊಸ ವಿಚಾರಗಳನ್ನು ದಾಖಲಿಸಿಕೊಳ್ಳಬೇಕು. ಪಿಯು ಇಂಗ್ಲಿಷ್ ಉಪನ್ಯಾಸಕರಿಗೆ ಇಂತಹ ಕಾರ್ಯಾಗಾರವು ಉಪಯುಕ್ತವಾಗಿದೆ ಎಂದರು.
ಜಾಗತಿಕವಾಗಿ ಎಲ್ಲಾ ಭಾಷೆಗಳಿಗಿಂತ ಇಂಗ್ಲಿಷ್ ಅತ್ಯಂತ ವಿಶಾಲವಾದ ಭಾಷೆಯಾಗಿದ್ದು, ಅದು ತುಕ್ಕು ಹಿಡಿಯುವಂತಹದಲ್ಲ. ಈ ಜಗತ್ತಿನಲ್ಲೆಲ್ಲ ಸುತ್ತಿಕೊಂಡು ಬಂದಿದೆ. ಒಂದು ರಾಷ್ಟ್ರದಿಂದ ಮತ್ತೊಂದು ರಾಷ್ಟ್ರದೊಂದಿಗೆ ಸುತ್ತಾಡಿಕೊಂಡು ಬರಲು ಈ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದಲೇ ಈ ಭಾಷೆ ಸರ್ವವ್ಯಾಪಿ ಪ್ರಾಮುಖ್ಯತೆ ಪಡೆದಿದೆ. ಇಂಗ್ಲೆಂಡ ದೇಶದವರು ಇಂಗ್ಲಿಷ್ ಭಾಷೆಯನ್ನು ಎಷ್ಟು ಪ್ರೀತಿಸುತ್ತಾರೆ ಗೊತ್ತಿಲ್ಲ. ಆದರೆ ಭಾರತೀಯ ಜನರು ಹೆಚ್ಚು ಪ್ರೀತಿಸುತ್ತಾರೆ. ಈ ಭಾಷೆಯಿಂದಲೇ ಇತರೆ ದೇಶಗಳಲ್ಲಿ ನಮ್ಮ ಭಾರತದವರು ನೆಲೆ ನಿಂತಿದ್ದಾರೆ. ಅಮೆರಿಕಾ, ಆಸ್ಟೇಲಿಯಾ, ಜಪಾನ್, ಚೀನಾ, ದಕ್ಷಿಣ ಆಫ್ರಿಕಾ ಹೀಗೆ ಯಾವ ದೇಶಕ್ಕೆ ಹೋದರೂ ಕೂಡ ದೊಡ್ಡ ಸಂಖ್ಯೆಯಲ್ಲಿ ನಮ್ಮ ಜನರು ಇರುತ್ತಾರೆ. ಇಂಗ್ಲಿಷ್ ಎಂಬುದು ಈ ಜಗತ್ತಿನಲ್ಲಿ ಅಷ್ಟರ ಮಟ್ಟಿಗೆ ಜನಮಾನಸದ ಮೇಲೆ ಅಗಾದವಾದ ಪರಿಣಾಮ ಬೀರಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಿಪಾರ್ಟ್‌ಮೆಂಟ್ ಆಫ್ ಸ್ಕೂಲ್ ಪಿಯು ಎಜುಕೇಶನ್ ಉಪನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ, ಇಂಗ್ಲಿಷ್ ಫಾರಂ ಅಧ್ಯಕ್ಷ ಡಿ.ಕೆ. ಕುಮಾರಯ್ಯ, ಗೋಪಾಲ್, ಪಿಯು ಕಾಲೇಜು ಪ್ರಿನ್ಸಿಪಾಲ್ ಅಸೋಸಿಯೇಶನ್ ಅಧ್ಯಕ್ಷ ಎ.ಬಿ. ಸುರೇಂದ್ರ ಕುಮಾರ್, ಪಿಯು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಎಚ್.ಟಿ. ಸುರೇಶ್ ಕುಮಾರ್, ಸಂತಾ ಫಿಲೋಮಿನಾ ವಿದ್ಯಾರ್ಥಿನಿಯರ ಕಾಲೇಜು ಪ್ರಾಂಶುಪಾಲರಾದ ಡಾ. ಜಸಿಂತಾ ಕೊರಿಯಾ, ಇಂಗ್ಲಿಷ್ ಉಪನ್ಯಾಸಕ ಆರ್. ಸದಾನಂದ, ಕಾರ್ಯದರ್ಶಿ ಎಸ್.ಎಂ. ಕುಸುಮಾ ಹಾಗೂ ಲಕ್ಷ್ಮೀನಾರಾಯಣ್ ಇತರರು ಉಪಸ್ಥಿತರಿದ್ದರು.