ಜಿಲ್ಲೆ

ಇಂಗ್ಲಿಷ್ ಕಲಿಕೆಯಲ್ಲಿನ ಕೀಳರಿಮೆ ಅಳಿಸಿ ಆತ್ಮವಿಶ್ವಾಸ ಹೆಚ್ಚಿಸಿ: ಡಿಡಿಪಿಯು ಕಾಂಬಳೆ

ವಿಜಯವಾಣಿ ಸುದ್ದಿಜಾಲ ಗದಗ

ಇಂಗ್ಲಿಷ್ ಕಲಿಕೆ ಕುರಿತು ವಿದ್ಯಾರ್ಥಿಗಳಲ್ಲಿರುವ ಕೀಳರಿಮೆ ಅಳಿಸಿ ಹಾಕಿ ಆತ್ಮ ವಿಶ್ವಾಸ ಹೆಚ್ಚಿಸುವ ಕೆಲಸವನ್ನು ಇಂಗ್ಲಿಷ್ ಉಪನ್ಯಾಸಕರು ಮಾಡಬೇಕು ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಎಂ. ಕಾಂಬಳೆ ಹೇಳಿದರು.

ನಗರದಲ್ಲಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ, ಪದವಿ ಪೂರ್ವ ಆಂಗ್ಲ ಉಪನ್ಯಾಸಕರ ವೇದಿಕೆ ಹಾಗೂ ಆದರ್ಶ ಶಿಕ್ಷಣ ಸಮಿತಿಯ ಶ್ರೀ ಡಿ.ಎಸ್. ಕುರ್ತಕೋಟಿ ಮೆಮೊರಿಯಲ್ ಪದವಿ ಪೂರ್ವ ಮಹಾವಿದ್ಯಾಲಯ ಆಶ್ರಯದಲ್ಲಿ ಜಿಲ್ಲೆಯ ಪದವಿ ಪೂರ್ವ ಕಾಲೇಜ್ ಗಳ ಆಂಗ್ಲ ಭಾಷಾ ಉಪನ್ಯಾಸಕರಿಗೆ ಶುಕ್ರವಾರ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವೇದಿಕೆಯು ಕಲಿಕಾ ಗುಣಮಟ್ಟ ಹೆಚ್ಚಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ಅಭಿನಂದನೀಯ ಎಂದರು.

ಇಲಾಖೆ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.

ಆದರ್ಶ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎ.ಡಿ. ಗೋಡಖಿಂಡಿ ಮಾತನಾಡಿದರು. ಸೇವೆಯಿಂದ ನಿವೃತ್ತಿ ಹೊಂದಿದ ಡಾ.ಲಾರೆನ್ಸ್ ತಟಪಟಿ, ಎಸ್.ಸಿ. ಹೆದ್ದೂರಿ, ಅನಿಲ ವೈದ್ಯ, ಪಿ.ಎಲ್. ದಿಗ್ಗೆವಾಡಿ ಹಾಗೂ ಉಪನ್ಯಾಸಕರಾದ ಕಿಶೋರಬಾಬು ನಾಗರಕಟ್ಟಿ, ಶಿವಾನಂದ ಕಲ್ಲೂರ, ವಿ.ಕೆ. ಸೊರಟೂರ, ಸಂಗನಗೌಡ ಪಾಟೀಲ, ವೈ.ಆರ್. ಸಕ್ರೋಜಿ ಅವರನ್ನು ಸನ್ಮಾನಿಸಲಾಯಿತು. ಪ್ರಶ್ನೆ ಪತ್ರಿಕೆ ತಯಾರಿಸುವ ಕುರಿತು ಸಂಪನ್ಮೂಲ ವ್ಯಕ್ತಿ ಪ್ರೊ.ಜಿ.ಎಸ್. ಬೆಟಗೇರಿ ತರಬೇತಿ ನೀಡಿದರು. ಪ್ರಾಚಾರ್ಯ ವಿ.ಎಂ. ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಶ್ರೀಧರ ದೇಶಪಾಂಡೆ ಸ್ವಾಗತಿಸಿದರು. ವೇದಿಕೆಯ ಕಾರ್ಯದರ್ಶಿ ರಮಾಕಾಂತ ದೊಡ್ಡಮನಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಎಂ.ಆರ್.ಕುಲಕರ್ಣಿ ವಂದಿಸಿದರು. ಪ್ರಾಚಾರ್ಯ ಸಿದ್ದು ಯಾಪಲಪರವಿ ನಿರೂಪಿಸಿದರು. ಪ್ರಾಚಾರ್ಯ ರವಿಂದ್ರಕುಮಾರ ಕುಲಕರ್ಣಿ ಮತ್ತು ಜಿಲ್ಲೆಯ ಎಲ್ಲ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.