ಜಿಲ್ಲೆ

ಇಂಗು ಗುಂಡಿಗೂ ನರೇಗಾ ಅನುದಾನ

ಮಂಜುನಾಥ ಅಂಗಡಿ ಧಾರವಾಡ

ಗ್ರಾಮೀಣ ಪ್ರದೇಶದಲ್ಲಿ ಶುಚಿತ್ವ, ಸಾಂಕ್ರಾಮಿಕ ರೋಗಗಳಿಗೆ ಕಡಿವಾಣ ಹಾಕಲು ನರೇಗಾ ಅಡಿ ಇಂಗು ಗುಂಡಿಗಳನ್ನು ನಿರ್ವಿುಸಿಕೊಳ್ಳಲು ಅವಕಾಶವಿದೆ. ಜಿ.ಪಂ.ನಿಂದ ಮಳೆಗಾಲದಲ್ಲೂ ಕೂಲಿ ನೀಡಿ ಇಂಗು ಗುಂಡಿ ನಿರ್ವಣಕ್ಕೆ ಎಲ್ಲ ಗ್ರಾ.ಪಂ.ಗಳಿಗೆ ಆದೇಶಿಸಿದ್ದು, ಯೋಜನೆ ಅನುಷ್ಠಾನ ಚುರುಕಿನಿಂದ ಸಾಗಿದೆ.

ನರೇಗಾ ಉದ್ಯೋಗ ಚೀಟಿ ಹೊಂದಿರುವ ಗ್ರಾಮೀಣ ಫಲಾನುಭವಿ ಯೋಜನೆಗೆ ಅರ್ಹ. ಮನೆಯ ಹಿತ್ತಲಿನಲ್ಲಿ ಇಂಗು (ಬಚ್ಚಲು) ಗುಂಡಿಯನ್ನು ನಿರ್ವಿುಸಿಕೊಳ್ಳಲು ಸರ್ಕಾರ ನೂತನ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಿದೆ. ಪ್ರತಿ ಪಿಡಿಒಗೆ ಆರಂಭದಲ್ಲಿ ಕನಿಷ್ಠ 50 ಇಂಗು ನಿರ್ವಣದ ಗುರಿ ನೀಡಲಾಗಿದೆ. ಹೆಚ್ಚಿನ ಅರ್ಜಿ ಬಂದರೂ ಒಪ್ಪಿಗೆ ಕೊಡಲು ಪಿಡಿಒಗಳಿಗೆ ಅಧಿಕಾರ ನೀಡಲಾಗಿದೆ. ವೈಯಕ್ತಿಕ ಇಂಗು ಗುಂಡಿ ನಿರ್ವಿುಸಿಕೊಳ್ಳುವ ಫಲಾನುಭವಿಗೆ ಕೂಲಿ ಮೊತ್ತ ಹಾಗೂ ಸಾಮಗ್ರಿ ವೆಚ್ಚ ಸೇರಿ 17,000 ರೂ. ಅನುದಾನ ಸಿಗುತ್ತದೆ. ಗುಂಡಿಗೆ ನಿರ್ದಿಷ್ಟ ಅಳತೆ ಇದ್ದು, ಅಗತ್ಯತೆಗೆ ಅನುಗುಣವಾಗಿ ಮಾರ್ಪಾಡಿಗೂ ಅವಕಾಶವಿದೆ.

ಯೋಜನೆಯ ಉದ್ದೇಶ: ಬಹುತೇಕ ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಪಾತ್ರೆ, ಬಟ್ಟೆ, ಜಾನುವಾರು ತೊಳೆದ ನೀರು, ಸ್ನಾನಗೃಹದ ನೀರು ಗಲೀಜು ವಾತಾವರಣ ಸೃಷ್ಟಿಸುತ್ತವೆ. ಚರಂಡಿ ನೀರು ಡೆಂಘೆ, ಮಲೇರಿಯಾದಂಥ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತದೆ. ಇದನ್ನು ತಡೆಯಲು ಗ್ರಾ.ಪಂ.ನಿಂದ ಕೂಲಿ ಹಾಗೂ ಅನುದಾನ ನೀಡಿ ಇಂಗು ಗುಂಡಿಗಳನ್ನು ನಿರ್ವಿುಸಲಾಗುತ್ತಿದೆ. ಗುಂಡಿಯ ಆಳದಲ್ಲಿ ಕಲ್ಲು, ಜಲ್ಲಿ ಕಲ್ಲು, ಸಿಮೆಂಟ್ ರಿಂಗ್ ಹಾಕಿ ವೈಜ್ಞಾನಿಕ ಮಾದರಿಯಲ್ಲಿ ನಿರ್ವಿುಸುವುದರಿಂದ ಗಲೀಜು ನೀರು ಭೂಮಿಯಲ್ಲಿ ಇಂಗುತ್ತದೆ.

ಮುಗದ ಗ್ರಾಮದಲ್ಲಿ ಚುರುಕು: ಧಾರವಾಡ ತಾಲೂಕು ಮುಗದ ಗ್ರಾ.ಪಂ.ನಲ್ಲಿ ಕಾಮಗಾರಿ ಚುರುಕಿನಿಂದ ಸಾಗಿದೆ. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್. ಕಾದ್ರೊಳ್ಳಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಗ್ರಾಮಸಭೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಣೆ, ವಿವಿಧ ಇಲಾಖೆಗಳಿಂದ ಜಾಗೃತಿ, ಆರೋಗ್ಯಕ್ಕೆ ಒತ್ತು ನೀಡುವ ಆಶಾ ಕಾರ್ಯಕರ್ತೆಯರಿಂದ ಗ್ರಾಮದಲ್ಲಿ ಪ್ರಚಾರ ಮಾಡಲಾಗಿದೆ. ರೋಜಗಾರ್ ದಿನಾಚರಣೆ, ಗ್ರಾಮ ಸ್ವಚ್ಛತಾ ನಡಿಗೆ ಮೂಲಕ ಅರಿವು ಮೂಡಿಸಲಾಗಿದೆ. ಪರಿಣಾಮ 20ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, 10 ಇಂಗು ಗುಂಡಿಗಳು ಮುಕ್ತಾಯದ ಹಂತದಲ್ಲಿವೆ.

ಮಳೆಗಾಲದಲ್ಲಿ ನರೇಗಾ ಕಾಮಗಾರಿ ಕುಂಠಿತಗೊಳ್ಳುವುದನ್ನು ಅರಿತು ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದೆ. ಆರಂಭದಲ್ಲಿ ಸ್ಪಂದನೆ ಇಲ್ಲದಿದ್ದರೂ ಪ್ರಚಾರದಿಂದಾಗಿ ಹೆಚ್ಚು ಜನ ಅರ್ಜಿ ಸಲ್ಲಿಸುತ್ತಿದ್ದಾರೆ. ಸರ್ಕಾರದಿಂದ ಅನುದಾನ ನೀಡುತ್ತಿರುವುದರಿಂದ ಉತ್ತಮ ಸ್ಪಂದನೆ ಇದೆ. ಪ್ರತಿ ಮನೆಯಲ್ಲಿ ನಿರ್ವಿುಸಿಕೊಂಡರೆ ನೈರ್ಮಲ್ಯದ ಜೊತೆಗೆ ಹಿತ್ತಲು ಗಲೀಜಾಗುವುದಿಲ್ಲ. ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳಕ್ಕೂ ಇದು ಪೂರಕ. - ಡಾ. ಬಿ.ಸಿ. ಸತೀಶ, ಜಿ.ಪಂ. ಸಿಇಒ
ಜಿ.ಪಂ. ಸಿಇಒ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನ ಮತ್ತು ಸಹಕಾರದಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮದಲ್ಲಿ ಉತ್ತಮ ಪ್ರತಿಕ್ರಿಯೆ ಇದ್ದು, ಜನ ತಮ್ಮ ಮನೆ ಸುತ್ತಲಿನ ನೈರ್ಮಲ್ಯಕ್ಕಾಗಿ ಇಂಗು ಗುಂಡಿ ನಿರ್ವಿುಸಿಕೊಳ್ಳುತ್ತಿದ್ದಾರೆ. ಮಳೆಗಾಲದಲ್ಲೂ ನರೇಗಾ ಅಡಿ ಕೂಲಿ ಕೆಲಸ ಸಿಗುತ್ತಿದೆ. - ವಿರೂಪಾಕ್ಷಯ್ಯ ಕುಲಕರ್ಣಿ, ಮುಗದ ಪಿಡಿಒ