ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನೆಗಾಗಿ ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ಸ್ಥಳ ಪರಿಶೀಲನೆ ಮಾಡಿದರು. ಅರವಿಂದ ಕುಲಕರ್ಣಿ, ಸಂತೋಷ ಕುಂಟೋಜಿ, ಬನ್ನೆಪ್ಪ ಡೋಣೂರ, ಶ್ರೀಶೈಲ ತಾಳಿಕೋಟಿ ಇತರರಿದ್ದರು. 
ಜಿಲ್ಲೆ

ಇಂಗಳೇಶ್ವರ ಗ್ರಾಮದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನೆ ಸ್ಥಳ ಪರಿಶೀಲನೆ

ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದ ಬಸ್ ನಿಲ್ದಾಣ ಆವರಣದಲ್ಲಿ ಅಶ್ವಾರೂಢ ಬಸವೇಶ್ವರ ಪಂಚ ಲೋಹದ ಪುತ್ಥಳಿಯನ್ನು ಸ್ಥಾಪನೆ ಮಾಡಲು ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ಅವರು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಬಸವೇಶ್ವರ ವೃತ್ತದ ಸ್ಥಳ ಪರಿಶೀಲನೆ ಮಾಡಿದರು.

ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ಅವರು ಮಾತನಾಡಿ, ವಿಜಯಪುರ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಬಸವೇಶ್ವರ ಪುತ್ಥಳಿ ಸ್ಥಾಪನೆ ಸ್ಥಳ ಪರಿಶೀಲನೆ ಮಾಡಲಾಗಿದೆ. ಜೂ.6ರ ನಂತರ ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಈಗಾಗಲೇ ಅಶ್ವಾರೂಢ ಬಸವೇಶ್ವರರ ಪಂಚ ಲೋಹದ ಪುತ್ಥಳಿ ಸ್ತಾಪನೆಗೆ 1.36 ಕೋಟಿ ರೂ. ವೆಚ್ಚ ಅಂದಾಜು ಮಾಡಲಾಗಿದೆ. ಉತ್ತಮ ರೀತಿಯಿಂದ ಬಸವೇಶ್ವರ ಪುತ್ಥಳಿ ತಯಾರಿಸಿ ಸುತ್ತಲೂ ಹುಲ್ಲಿನ ಗರಿಕೆ ಗಾರ್ಡನ್ ಹಾಗೂ ಕಾರಂಜಿ ಮತ್ತು ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಬೇಕು. ಸಿದ್ಧೇಶ್ವರ ದೇವಸ್ಥಾನದ ಬಸವನಬಾಗೇವಾಡಿ ರಸ್ತೆಯಿಂದ ಡಿವೈಡರ್ ರಸ್ತೆ ಮಧ್ಯದಲ್ಲಿ ವಿದ್ಯುತ್ ಕಂಬಗಳನ್ನು ಸ್ಮಾರಕದವರೆಗೆ ಅಳವಡಿಸಬೇಕು ಎಂದು ಮನವಿ ಮಾಡಿದರು.

ಗ್ರಾಮ ಲೆಕ್ಕಾಧಿಕಾರಿ ಸಂತೋಷ ಕುಂಟೋಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬನ್ನೆಪ್ಪ ಡೋಣೂರ, ಶ್ರೀಶೈಲ ತಾಳಿಕೋಟಿ, ರೇವಣಸಿದ್ದ ದಳವಾಯಿ, ಶ್ರೀಶೈಲ ಚಾಂದಕವಟೆ, ಶಿವಾನಂದ ನಡಕಟ್ಟಿ, ಮಲ್ಲಪ್ಪ ತಕ್ಕೋಡ, ಚನ್ನಬಸಪ್ಪ ಸಿಂಧೂರ, ಭೀಮಪ್ಪ ಡಿಗ್ಗಾವಿ, ಶಂಕ್ರೆಪ್ಪ ಪೂಜಾರಿ, ಸಂಗಪ್ಪ ದಳವಾಯಿ, ಮಲ್ಲಪ್ಪ ಬಮ್ಮಣಗಿ, ಮುತ್ತಪ್ಪ ಬಡಿಗೇರ, ನಾಗಣ್ಣ ಚಿಗರಿ ಇತರರಿದ್ದರು.