ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಬಿ.ಶಿವಣ್ಣ  
ಜಿಲ್ಲೆ

ಇ-ಹರಾಜು ನಿಲ್ಲಿಸದಿದ್ದರೆ ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಚಿಕ್ಕಮಗಳೂರು: ಸ್ವಾಭಿಮಾನಿ ರೈತ ಬೆಳೆಗಾರರ ಫಲವತ್ತಾದ ಭೂಮಿಯನ್ನು ಸರ್ಫೇಸಿ ಕಾಯ್ದೆ ಅಡಿ ಕೆಲವು ಬ್ಯಾಂಕ್ ಅಧಿಕಾರಿಗಳು ದುರುz್ದೆÃಶದಿಂದ ಇ-ಹರಾಜು ಮಾಡುವುದನ್ನು ನಿಲ್ಲಿಸದಿದ್ದರೆ ಈ ಪಿಡುಗಿನ ವಿರುದ್ಧ ಬ್ಯಾಂಕ್‌ಗಳ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಬಿ.ಶಿವಣ್ಣ ಎಚ್ಚರಿಕೆ ನೀಡಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳೆಗಾರರ ಸಾಲ ತೀರುವಳಿ ಆದ ನಂತರವೂ ಕೆನರಾ ಬ್ಯಾಂಕ್ ಮೂಡಿಗೆರೆ ಶಾಖೆಯ ಮೂಲ ದಾಖಲೆಗಳನ್ನು ಬೆಳೆಗಾರರಿಗೆ ಹಿಂದಿರುಗಿಸದೇ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ ಮೂರು ವರ್ಷಗಳಿಂದ ಕಾಫಿ ಬೆಳೆಗಾರರ ಸಾಲ ವಸೂಲಾತಿಗಾಗಿ ಸರ್ಫೇಸಿ ಕಾಯ್ದೆ ಅಡಿಯಲ್ಲಿ ಬ್ಯಾಂಕ್‌ಗಳು ಇ-ಹರಾಜು ಮಾಡಲು ಮುಂದಾಗಿವೆ. ಇದನ್ನು ವಿರೋಧಿಸಿ, ಬ್ಯಾಂಕ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಮೂಡಿಗೆರೆ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡುವಿನ ಮೊಳಕಲ್ ಗ್ರಾಮದ ಬೆಳೆಗಾರ ಕೆ.ಕೆ.ಸುರೇಶ್ ಇವರು ತೋಟದ ನಿರ್ವಹಣೆಗಾಗಿ ಸಾಲ ಪಡೆದುಕೊಂಡಿದ್ದಾರೆ. ಹಲವಾರು ಕಾರಣಗಳಿಂದ ಸಾಲ ಮರುಪಾವತಿ ಮಾಡುವುದು ವಿಳಂಬವಾಗಿದ್ದು, ಕೆನರಾ ಬ್ಯಾಂಕ್‌ನ ಸೂಚನೆಯಂತೆ ಸುಮಾರು ೪೩ ಲಕ್ಷ ರೂಪಾಯಿ ಜನವರಿ ತಿಂಗಳಿನಲ್ಲಿ ಮರುಪಾವತಿ ಮಾಡಿದ್ದರೂ ಇದೂವರೆಗೂ ಈ ಬೆಳೆಗಾರರಿಗೆ ಸಾಲದ ಭದ್ರತೆಗಾಗಿ ನೀಡಿದ್ದ ತೋಟದ ಮೂಲ ದಾಖಲೆಗಳನ್ನು ಹಿಂದುರಿಗಿಸದೇ ಬ್ಯಾಂಕ್ ಅಧಿಕಾರಿಗಳು ಅನುಚಿತ ವರ್ತನೆ ತೋರಿದ್ದಾರೆ ಎಂದು ದೂರಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅಧ್ಯಕ್ಷತೆಯಲ್ಲಿ ಬೆಳೆಗಾರರ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ಎಲ್ಲ ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಸಂಸದರು ಸರ್ಫೇಸಿ ಕಾಯ್ದೆ ಅಡಿಯಲ್ಲಿ ರೈತ ಬೆಳೆಗಾರರ ಭೂಮಿಯನ್ನು ಹರಾಜು ಹಾಕುವುದನ್ನು ಸುಮಾರು ಆರು ತಿಂಗಳ ಕಾಲ ತಡೆ ಹಿಡಿಯುವಂತೆ ಹಾಗೂ ಬೆಳೆಗಾರರಿಗೆ ಬ್ಯಾಂಕ್‌ಗಳು ಓಟಿಎಸ್ ಮೂಲಕ ಸೌಹಾರ್ದಯುತವಾಗಿ ತಮ್ಮ ಸಾಲ ತೀರುವಳಿಯನ್ನು ಮಾಡಲು ಅವಕಾಶ ಕಲ್ಪಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು ಎಂದು ಹೇಳಿದರು.

ಬೆಂಗಳೂರಿನ ಕಾಫಿ ಮಂಡಳಿಯಲ್ಲಿ ಅಧ್ಯಕ್ಷ ಎಂ.ಜೆ. ದಿನೇಶ್ ಅವರ ನೇತೃತ್ವದಲ್ಲಿ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಭೆಯನ್ನು ಕರೆಯಲಾಗಿದ್ದು, ಅಲ್ಲಿಯೂ ಕೂಡ ಬೆಳೆಗಾರರ ತೋಟಗಳನ್ನು ಇ-ಹರಾಜು ಮಾಡುವುದನ್ನು ಬಿಟ್ಟು ಬ್ಯಾಂಕ್ ಹಾಗೂ ಬೆಳೆಗಾರರು ಪರಸ್ಪರ ಮಾತುಕತೆ ಮೂಲಕ ಋಣಮುಕ್ತರಾಗಲು ಅವಕಾಶ ಕಲ್ಪಿಸಿಕೊಡುವುದಾಗಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದರು.

ಇತ್ತೀಚಿನ ಬೆಳವಣಿಗೆಗಳಲ್ಲಿ ಕೆಲವು ಬ್ಯಾಂಕ್ ಹಿರಿಯ ಅಧಿಕಾರಿಗಳು ಸುಸ್ತಿದಾರರಾಗಿರುವ ಬೆಳೆಗಾರರ ಸಾಲವನ್ನು ಮಾತುಕತೆಗಳ ಮೂಲಕ ತೀರ್ಮಾನ ಮಾಡುವುದನ್ನು ಪರಿಗಣಿಸದೇ ಕೆಲವು ರಿಯಲ್ ಎಸ್ಟೇಟ್ ಬಂಡವಾಳ ಶಾಹಿಗಳ ಕೈಗೊಂಬೆಯAತೆ ವರ್ತಿಸಿದ್ದಾರೆ ಎಂದು ಟೀಕಿಸಿದರು.

ಈ ಘಟನೆಗಳನ್ನು ಸಧ್ಯದಲ್ಲೇ ನಿಯಂತ್ರಿಸದಿದ್ದಲ್ಲಿ ರೈತ ಬೆಳೆಗಾರರು ಜೀವನಾಧಾರವಾಗಿರುವ ತಮ್ಮ ಅಮೂಲ್ಯವಾದ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ದಿಮೆದಾರರಿಗೆ ಅನಿವಾರ್ಯವಾಗಿ ಒಪ್ಪಿಸಬೇಕಾಗಿರುತ್ತದೆ. ಇದಕ್ಕೆ ದುರಾಲೋಚನೆ ಮನಸ್ಥಿತಿಯ ಬ್ಯಾಂಕ್ ಅಧಿಕಾರಿಗಳು ಕಾರಣ ಎಂದು ಲೇವಡಿ ಮಾಡಿದರು.

ಈ ಕೂಡಲೇ ಡಿಎಲ್‌ಬಿಸಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಿ ಬೆಳೆಗಾರರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ, ಮುಖಂಡರಾದ ಜಯರಾಂ, ಸುರೇಶ್ ಗೌಡ, ಅಶೋಕ್ ಕುಮಾರ್, ಹಾಲಪ್ಪ, ರತೀಶ್ ಕುಮಾರ್, ಸುರೇಂದ್ರ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮತ್ತಿತರರು ಉಪಸ್ಥಿತರಿದ್ದರು.