ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿಬಿ) ತನ್ನ ಗ್ರಾಹಕರಿಗೆ ಡಿಜಿಟಲ್ ಮತ್ತು ಆನ್ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಪರಿಚಯಿಸುವಲ್ಲಿ ಮಂಚೂಣಿಯಲ್ಲಿದೆ. ಇದೀಗ ಬ್ಯಾಂಕ್ ಸರ್ಕಾರದ ಮಾಹಿತಿ ಉಪಯುಕ್ತತೆ ಪೂರೈಕೆದಾರ ಸಂಸ್ಥೆ ರಾಷ್ಟ್ರೀಯ ಆಡಳಿತ ಸೇವೆಗಳ ನಿಗಮ ಜತೆಗೆ ಸೇರಿ ಇ-ಬ್ಯಾಂಕ್ ಗ್ಯಾರಂಟಿ ಸೇವೆಯನ್ನು ಅಧಿಕೃತವಾಗಿ ಆರಂಭಿಸಿದೆ.
ನಗರದ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಭಂಡಿವಾಡ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಇ-ಬ್ಯಾಂಕ್ ಗ್ಯಾರಂಟಿ ಸೇವೆ ಆರಂಭಿಸಿದ ದೇಶದ ಮೊದಲ ಗ್ರಾಮೀಣ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇ-ಬ್ಯಾಂಕ್ ಗ್ಯಾರಂಟಿಯಿಂದ ಇನ್ನು ಮುಂದೆ ಇ-ಸಹಿ ಹಾಗೂ ಇ-ಸ್ಟಾಂಪ್ಗಳ ಬಳಕೆಯಾಗಲಿದೆ ಎಂದರು.
ಇ-ಬ್ಯಾಂಕ್ ಗ್ಯಾರಂಟಿ ಸೌಲಭ್ಯ ಪ್ರಕ್ರಿಯೆ ಇನ್ನಷ್ಟು ಸರಳವಾಗಲಿದ್ದು, ಇದರಿಂದ ಗ್ಯಾರಂಟಿ ನಿಡುವ ಪ್ರಕ್ರಿಯೆ ಕೆಲ ನಿಮಿಷಗಳಲ್ಲಿ ಮುಗಿಯಲಿದೆ. ಇ-ಬ್ಯಾಂಕ್ ಗ್ಯಾರಂಟಿ ಬಿಡುಗಡೆ ಮಾಡಿದ ತಕ್ಷಣವೇ ಫಲಾನುಭವಿಗಳು ಎನ್ಇಎಸ್ಎಲ್ ಪೋರ್ಟಲ್ನಲ್ಲಿ ವೀಕ್ಷಿಸಬಹುದು. ಈ ವ್ಯವಸ್ಥೆ ಅನುಷ್ಠಾನದಿಂದ ಅರೆ ಪಟ್ಟಣ ಮತ್ತು ಗ್ರಾಮೀಣ ಭಾಗದ ಗ್ರಾಹಕರಿಗೆ ಅನುಕೂಲವಾಗಲಿದೆ. ಇದಲ್ಲದೆ ಬ್ಯಾಂಕ್ ಖಾತರಿ ವಿಷಯದಲ್ಲಿ ಪಾರದರ್ಶಕತೆ ಹೆಚ್ಚಲಿದೆ ಎಂದರು.
2024-25ರ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಉತ್ತಮ ಸಾಧನೆ ತೋರಿದೆ. 20,941 ಕೋಟಿ ರೂ. ಠೇವಣಿ ಮತ್ತು 17,573 ಕೋಟಿ ರೂ. ಮಂಗಡ ಮಟ್ಟ ತಲುಪುವ ಮೂಲಕ ಶೇ. 7.32 ಪ್ರಗತಿ ದರದ್ಲಲಿ 38,514 ಕೋಟಿ ರೂ. ವಹಿವಾಟು ದಾಖಲಿಸಿದೆ ಎಂದರು.
ಬ್ಯಾಂಕಿನ ಮಹಾ ಪ್ರಬಂಧಕ ಎಂ. ಪುನೀತ್, ಆರ್.ಟಿ. ಕಾಂಬಳೆ, ಸಹಾಯಕ ಮಹಾಪ್ರಬಂಧಕ ಉಲ್ಲಾಸ ಗುನಗಾ, ಮುಖ್ಯ ಪ್ರಬಂಧಕಿ ಅನುರಾಧ, ಹಿರಿಯ ಪ್ರಬಂಧಕ ನವೀನ ರೆಡ್ಡಿ, ಹಿರಿಯ ಅಧಿಕಾರಿಗಳು, ಇತರರು ಇದ್ದರು.