ಇ-ತ್ಯಾಜ್ಯ ಸಂಗ್ರಹಿಸುತ್ತಿರುವ ಒಣ ತ್ಯಾಜ್ಯ ಸಂಗ್ರಹ ಘಟಕದ ಸಿಬ್ಬಂದಿ 
ಜಿಲ್ಲೆ

ಇ-ತ್ಯಾಜ್ಯ ವಿಲೇವಾರಿ ತಲೆನೋವು

Tumakuru


ತುಮಕೂರು: ಮಹಾನಗರ ಪಾಲಿಕೆಯಲ್ಲಿ ಇ-ತ್ಯಾಜ್ಯ ವಿಲೇವಾರಿ ದೊಡ್ಡ ತಲೆನೋವಾಗಿ ಪರಿಣಮಿಸಿ ಇ-ತ್ಯಾಜ್ಯ ಸಂಗ್ರಹಕ್ಕಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಅಥವಾ ನಿಗದಿತ ಕಡೆಗಳಲ್ಲಿ ಯಾವುದೇ ವೈಜ್ಞಾನಿಕ ಕ್ರಮಗಳನ್ನು ಕೈಗೊಂಡಿಲ್ಲದೇ ಇರುವುದು ಬೆಳಕಿಗೆ ಬಂದಿದೆ. ಸದ್ಯ ಒಣಕಸ ಸಂಗ್ರಹಿಸುವ ಘಟಕಗಳಲ್ಲೇ ಇ-ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸುತ್ತಿದ್ದು ಸೂಕ್ತ ನಿರ್ವಹಣೆ ಇಲ್ಲದಿರುವುದು ಕಂಡುಬಂದಿದೆ.

ಪರಿಸರಕ್ಕೆ ಗಂಭೀರ ಸಮಸ್ಯೆ ಎನಿಸಿರುವ ಇ-ತ್ಯಾಜ್ಯ ವಿಲೇವಾರಿಗೆ ‘ಸ್ಮಾರ್ಟ್‌ಸಿಟಿ’ಯಲ್ಲೇ ವ್ಯವಸ್ಥಿತ ಕ್ರಮ ಕೈಗೊಳ್ಳದೇ ಇರುವುದು ಪಾಲಿಕೆಯ ದಿವ್ಯ ನಿರ್ಲಕ್ಷ್ಯಕ್ಕೆ ಸ್ಪಷ್ಟ ನಿದರ್ಶನವೆನಿಸಿದೆ. ಪಾಲಿಕೆ ಪರಿಸರ ಶಾಖೆ ಪ್ರಕಾರ ನಗರದಲ್ಲಿ ವಾರ್ಷಿಕವಾಗಿ 1 ರಿಂದ 2 ಟನ್‌ನಷ್ಟು ಇ-ತ್ಯಾಜ್ಯ ಸಂಗ್ರಹವಾಗುತ್ತಿದೆ. ಬಲ್ಬ್, ಎಲೆಕ್ಟಿಕ್ ವೈರ್‌ಗಳನ್ನು ಇ -ತ್ಯಾಜ್ಯವೆಂದು ಪರಿಗಣಿಸಿ ಸಂಗ್ರಹಿಸಲಾಗಿದೆ. ಮೊಬೈಲ್ ಫೋನ್, ಕಂಪ್ಯೂಟರ್, ಲ್ಯಾಪ್‌ಟ್ಯಾಪ್, ಎಲ್‌ಇಡಿ ಟಿವಿ, ರೆಫ್ರಿಜಿರೇಟರ್, ಅವುಗಳ ಬಿಡಿಭಾಗಗಳನ್ನು, ಡಿಜಿಟಲ್ ಉಪಕರಣ ಸೇರಿ ಹಾಳಾಗಿರುವ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮನೆ, ಮನೆ ಕಸ ಸಂಗ್ರಹಿಸುವ ವಾಹನಗಳಲ್ಲೇ ಸಂಗ್ರಹಿಸಲಾಗುತ್ತಿದೆ.

4 ಒಣಕಸ ಸಂಗ್ರಹ ಘಟಕ: ನಗರದ 4 ಕಡೆ ಒಣ ತ್ಯಾಜ್ಯ ಸಂಗ್ರಹ ಘಟಕಗಳಿವೆ. ಉಪ್ಪಾರಹಳ್ಳಿ ಅಂಡರ್‌ಪಾಸ್, ಶೆಟ್ಟಿಹಳ್ಳಿ ರಿಂಗ್ ರಸ್ತೆ, ಶಿರಾಗೇಟ್ ಹಾಗೂ ದಾನಾ ಪ್ಯಾಲೇಸ್ ಹತ್ತಿರದ ಪಿಟಿಪಿ ಬಳಿ ಒಣ ಕಸದ ಜತೆಗೆ ಇ-ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಆದರೆ, ಇ-ತ್ಯಾಜ್ಯ ವಿಲೇವಾರಿಗೆ ಯಾವುದೇ ವೈಜ್ಞಾನಿಕ ಕ್ರಮವನ್ನು ಕೈಗೊಳ್ಳದಿರುವುದು ‘ಸ್ಮಾರ್ಟ್‌ಸಿಟಿ’ ಆಡಳಿತಕ್ಕೆ ಹಿಡಿದ ಕನ್ನಡಿ ಇದಾಗಿದೆ.

ಸ್ಮಾರ್ಟ್‌ಸಿಟಿ ಯೋಜನೆ ಅಡಿ ನಗರವನ್ನು ಸ್ಮಾರ್ಟ್‌ಗೊಳಿಸಲು ಸಾವಿರಾರು ಕೋಟಿ ರೂಪಾಯಿ ನೀರಿನಂತೆ ಬಳಸಲಾಗಿದೆಯಾದರೂ ಇ-ತ್ಯಾಜ್ಯ ನಿರ್ವಹಣೆಗೆ ಕ್ರಮವಹಿಸದೇ ಇರುವ ಅಧಿಕಾರಿಗಳ ಬಗ್ಗೆ ಪರಿಸರವಾದಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಪರಿಸರಕ್ಕೆ ಮಾರಕ: ದಾಬಸ್‌ಪೇಟೆಯಲ್ಲಿ ಇ ಪರಿಸರ ಹೆಸರಿನಲ್ಲಿ ಇ -ತ್ಯಾಜ್ಯ ನಿರ್ವಹಣಾ ಘಟಕ ಇತ್ತು. ಇಲ್ಲಿ ಇ-ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿತ್ತು. ಈಗ ಅದೂ ಬಂದ್ ಆಗಿದೆ. ಹಸಿರು ದಳ ಎಂಬ ಸರ್ಕಾರೇತರ ಸಂಸ್ಥೆಯು ನಗರದಲ್ಲಿನ ಒಣ ತ್ಯಾಜ್ಯ ಸಂಗ್ರಹ ಘಟಕಗಳ ನಿರ್ವಹಣಾ ಹೊಣೆ ಹೊತ್ತಿದ್ದು ಇ-ತ್ಯಾಜ್ಯವನ್ನು ಪ್ರತ್ಯೇಕ ಮಾಡಿ ಕೆಜಿ ಲೆಕ್ಕದಲ್ಲಿ ಮಾರಾಟ ಮಾಡುತ್ತಿದೆ. ಇದರಿಂದ ಪಾಲಿಕೆಗು ಅಲ್ಪಸ್ವಲ್ಪ ಆದಾಯ ಬರುತ್ತಿದೆಯಾದರು ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ ಇರುವುದು ಪರಿಸರಕ್ಕೆ ಮಾರಕವೆನಿಸಿದೆ.

ಮನೆಗಳಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲಾಗುತ್ತಿದೆ. ಅದೇ ಮಾದರಿಯಲ್ಲಿ, ಪರಿಸರಕ್ಕೆ ಹಾನಿಕಾರಕ ಎನಿಸಿರುವ ವಿದ್ಯುನ್ಮಾನ ಉಪಕರಣಗಳ ತ್ಯಾಜ್ಯಗಳನ್ನು (ಇ -ತ್ಯಾಜ್ಯ) ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಆದರೆ, ಪಾಲಿಕೆ ಈ ನಿಟ್ಟಿನಲ್ಲಿ ಇ-ತ್ಯಾಜ್ಯ ವಿಲೇವಾರಿಯಲ್ಲಿ ಸೂಕ್ತ ಕ್ರಮವಹಿಸಿಲ್ಲ. ಕೆಲವರಂತೂ ಕೆಟ್ಟ ಮೊಬೈಲ್ ಫೋನ್, ರೆಫ್ರಿಜಿರೇಟರ್, ಕೂಲರ್ ಬಿಡಿಭಾಗಗಳನ್ನು, ಸೊಳ್ಳೆ ಬ್ಯಾಟ್ ಇಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಗರದ ಹೊರಭಾಗದ ರಸ್ತೆ ಬದಿಯಲ್ಲಿ ಎಸೆಯುತ್ತಿರುವುದು ಕಂಡುಬಂದಿದೆ.| ಇಮ್ರಾನ್ ಪಾಷ ಸಾಮಾಜಿಕ ಕಾರ್ಯಕರ್ತ.

ನಮ್ಮಲ್ಲಿ ಇ-ತ್ಯಾಜ್ಯ ಸಮಸ್ಯೆ ಗಂಭೀರವಾಗಿಲ್ಲ. 4 ಕಡೆ ಒಣ ತ್ಯಾಜ್ಯ ಸಂಗ್ರಹ ಘಟಕಗಳಿದ್ದು ಅಲ್ಲಿಯೇ ಇ-ತ್ಯಾಜ್ಯವನ್ನು ಪ್ರತ್ಯೇಕಿಸಲಾಗುತ್ತಿದೆ. ಸಣ್ಣ-ಪುಟ್ಟ ಮೊಬೈಲ್ ಚಾರ್ಜರ್, ಬ್ಯಾಟರಿ, ಬಲ್ಬ್‌ಗಳು ಇಂತಹ ಇ ತ್ಯಾಜ್ಯ ಸಂಗ್ರಹವಾಗುತ್ತಿದ್ದು ಕಂಪ್ಯೂಟರ್, ಲ್ಯಾಪ್‌ಟ್ಯಾಪ್, ರೆಫ್ರಿಜಿರೇಟರ್‌ನಂತಹ ದೊಡ್ಡ ದೊಡ್ಡ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖಾಸಗಿಯವರೇ ಸಂಗ್ರಹಿಸಿ ವೈಜ್ಞಾನಿಕವಾಗಿ ಇ-ತ್ಯಾಜ್ಯ ವಿಲೇವಾರಿ ಮಾಡುವ ಎನ್‌ಜಿಒಗಳಿಗೆ ನೀಡುತ್ತಿರುವುದು ಕಂಡುಬಂದಿದೆ. |ಎಚ್.ವಿ.ದರ್ಶನ್ ಆಯುಕ್ತ