ಜಿಲ್ಲೆ

ಇ- ಟೆಂಡರ್ ಮೂಲಕ ರೈತರ ಉತ್ಪನ್ನಗಳ ಮಾರಾಟ

ಗುಂಡ್ಲುಪೇಟೆ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಸೋಮವಾರವೂ ತಾಲೂಕಿನ ತೆರಕಣಾಂಬಿ ಸಂತೆ ಆವರಣದಲ್ಲಿ ಇ- ಟೆಂಡರ್ ಮೂಲಕ ರೈತರ ಉತ್ಪನ್ನಗಳ ಮಾರಾಟ ಆರಂಭಿಸಿತು.


ಪ್ರತಿ ಗುರುವಾರ ನಡೆಯುತ್ತಿರುವ ತೆರಕಣಾಂಬಿ ಸಂತೆಯಲ್ಲಿ ದಲ್ಲಾಳಿಗಳ ಹಾವಳಿಯಿಂದ ರೈತರು ನಷ್ಟ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ಎಪಿಎಂಸಿ ಆಡಳಿತ ಮಂಡಳಿ ಕಳೆದ ಎರಡು ದಿನಗಳಂದ ಸಂತೆಗಳಲ್ಲಿ ರೈತರ ಉತ್ಪನ್ನಗಳನ್ನು ನೇರ ಮಾರಾಟ ಮಾಡುವ ಇ-ಟೆಂಡರ್ ಪ್ರಕ್ರಿಯೆ ಆರಂಭಿಸಿತ್ತು. ಇದಕ್ಕೆ ರೈತರು ಹಾಗೂ ಖರೀದದಾರರ ಒತ್ತಾಸೆ ದೊರಕಿತ್ತು. ಪ್ರತಿ ಗುರುವಾರ ಮಾತ್ರ ಹೆಚ್ಚಿನ ಜನಸಂದಣಿ ಹಾಗೂ ಗದ್ದಲ ಉಂಟಾಗುತ್ತಿದ್ದ ಕಾರಣದಿಂದ ಸೋಮವಾರ ಸಹ ಇ- ಟೆಂಡರ್ ಮುಂದುವರಿಸಲಾಯಿತು.


ಸೋಮವಾರ ನಡೆದ ನೇರ ಮಾರಾಟದಲ್ಲಿ ಸುಮಾರು ಹದಿನೈದು ಖರೀದಿದಾರರು ಭಾಗವಹಿಸಿದ್ದರು. 180 ಚೀಲ ಹುರುಳಿ, ಹುಣಿಸೆಹಣ್ಣು ಬಿಕರಿಯಾಯಿತು. ಖರೀದಿದಾರರೇ ಉತ್ಪನ್ನಗಳ ಗುಣಮಟ್ಟದ ಮೇಲೆ ಬೆಲೆ ನಿಗದಿಪಡಿಸಿದ್ದರಿಂದ ರೈತರಿಗೆ ಸಂತೆಗಿಂತಲೂ ಹೆಚ್ಚಿನ ದರ ದೊರಕಿತು. ಮುಂದಿನ ದಿನಗಳಲ್ಲಿ ಪ್ರತಿ ಗುರುವಾರ ಹಾಗೂ ಸೋಮವಾರ ಎರಡು ದಿನಗಳೂ ಇ- ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು ಎಂದು ಎಪಿಎಂಸಿ ಕಾರ್ಯದರ್ಶಿ ಶ್ರೀಧರ ಮಾಹಿತಿ ನೀಡಿದ್ದಾರೆ.