ಮೈಸೂರು: ಇ-ಖಾತಾ ವ್ಯವಸ್ಥೆಯನ್ನು ಜನಸ್ನೇಹಿಯಾಗಿ ರೂಪಿಸಬೇಕು. ಈ ಮೂಲಕ ಆಸ್ತಿ ಮಾಲೀಕರಿಗೆ ಉಂಟಾಗಿರುವ ಅನನುಕೂಲವನ್ನು ಬಗೆಹರಿಸಬೇಕು ಎಂದು ಮಾಜಿ ಮೇಯರ್ ಶಿವಕುಮಾರ್ ಆಗ್ರಹಿಸಿದರು.
ಇ-ಖಾತಾ ವ್ಯವಸ್ಥೆಯಿಂದ ಮೈಸೂರು ಪಾಲಿಕೆಗೆ ಅಂದಾಜು 150 ಕೋಟಿ ರೂ. ಸೇರಿದಂತೆ ರಾಜ್ಯದ 10 ಪಾಲಿಕೆಗಳಿಂದ ಒಂದು ಸಾವಿರ ಕೋಟಿ ರೂ. ಸೋರಿಕೆಯಾಗಿದ್ದು, ಇದು ಸರ್ಕಾರಕ್ಕೆ ದೊಡ್ಡ ನಷ್ಟವಾಗಿದೆ.
ಜತೆಗೆ, ಈ ವ್ಯವಸ್ಥೆ ಅಧಿಕಾರಿಗಳ ಲಂಚಾವತಾರಕ್ಕೂ ಕಾರಣವಾಗಿದೆ. ಸಾರ್ವಜನಿಕರನ್ನು ಸುಲಿಗೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಆದ್ದರಿಂದ ಜನಸ್ನೇಹಿ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ರಾಜ್ಯ ಸರ್ಕಾರವು ಯಾವುದೇ ಪೂರ್ವಪ್ರಯೋಗ ಮಾಡಿ ಸಾಧಕ-ಬಾಧಕ ಪರೀಕ್ಷಿಸಿ ಮಾಡಿಲ್ಲ. ಏಕಾಏಕಿ ರಾಜ್ಯಾದ್ಯಂತ ಇ-ಖಾತಾ ವ್ಯವಸ್ಥೆ ಅನುಷ್ಠಾನಕ್ಕೆ ತಂದಿದೆ. ಈಗ ಬಳಸುತ್ತಿರುವ ತಂತ್ರಾಂಶ ಅಸಮರ್ಪಕ, ಅವೈಜ್ಞಾನಿಕವಾಗಿದೆ. ಇದರಿಂದಾಗಿ ಸಾರ್ವಜನಿಕರು ಇ- ಖಾತೆಗಾಗಿ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗದೆ ಪರದಾಡುವಂತಾಗಿದೆ ಎಂದು ಆರೋಪಿಸಿದರು.
ಮೈಸೂರು ನಗರದಲ್ಲಿಯೇ ಸುಮಾರು 2.5 ಲಕ್ಷ ಆಸ್ತಿಗಳಿವೆ. ಮಾಲೀಕರು ಇ-ಖಾತೆಗಾಗಿ ಅರ್ಜಿ ಸಲ್ಲಿಸಿದರೆ ಒಂದೊಂದೂ ಅರ್ಜಿ ಮಾಹಿತಿಯನ್ನು ತಂತ್ರಾಂಶದಲ್ಲಿ ಭರ್ತಿ ಮಾಡಲು ಸುಮಾರು ಅರ್ಧ ದಿನ ಹಿಡಿಯುತ್ತಿದೆ. ಇನ್ನೂ 8 ಸಾವಿರ ಅರ್ಜಿಗಳು ಬಾಕಿ ಇವೆ.
ಜತೆಗೆ ಅರ್ಜಿ ಸಲ್ಲಿಸಲೆಂದೇ ವೃದ್ಧರು, ಮಹಿಳೆಯರು ಪಾಲಿಕೆಯ ಎಲ್ಲ 9 ವಲಯ ಕಚೇರಿಗಳ ಎದುರು ಗಂಟೆಗಟ್ಟಲೇ ಕಾದು ನಿಲ್ಲುವಂತಾಗಿದೆ. ಸಿಎಂ ತವರು ಮೈಸೂರಿನಲ್ಲೇ ಈ ಪರಿಸ್ಥಿತಿ ಉಂಟಾಗಿದ್ದರೂ ಅವರು ಇನ್ನೂ ಏಕೆ ಸುಮ್ಮನಿದ್ದಾರೆಂಬುದು ತಿಳಿಯದಾಗಿದೆ ಎಂದು ಕಿಡಿಕಾರಿದರು.
ಈಗಾಗಲೇ ಮುಂಬೈ, ನೋಯ್ಡ, ದೆಹಲಿ ಮೊದಲಾದ ಕಡೆಗಳಲ್ಲಿ ಇ-ಖಾತೆಯನ್ನು ವ್ಯವಸ್ಥಿತವಾಗಿ ಜಾರಿಗೆ ತರಲಾಗಿದೆ. ಕೇರಳ, ತೆಲಂಗಾಣ, ಮಹಾರಾಷ್ಟ್ರದಲ್ಲೂ ಈ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿದೆ. ಅಲ್ಲಿ ಅತ್ಯಾಧುನಿಕ ತಂತ್ರಾಂಶ ಬಳಸಿರುವ ಕಾರಣ ಇ-ಖಾತೆಯನ್ನು ಆನ್‌ಲೈನ್ ಮೂಲಕ ಸುಲಭವಾಗಿ ದೊರೆಯುವಂತೆ ಮಾಡಲಾಗಿದೆ. ಆದರೆ ನಮ್ಮಲ್ಲಿನ ತಂತ್ರಾಂಶ ತೀರ ಕಳಪೆಯಾಗಿದೆ.
ಇದನ್ನು ರಾಜ್ಯಾದ್ಯಂತ ಜಾರಿಗೊಳಿಸುವ ಮೊದಲು ಯಾವುದಾದರೂ ನಗರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿ ಪರಿಶೀಲಿಸಿಲ್ಲ. ಈ ಹಂತದಲ್ಲಿ ಎದುರಾದ ಲೋಪಗಳನ್ನು ಸರಿಪಡಿಸಿಕೊಂಡ ಬಳಿಕ ರಾಜ್ಯಾದ್ಯಂತ ವಿಸ್ತರಣೆ ಮಾಡಬೇಕಿತ್ತು. ಈ ರೀತಿ ಮಾಡದ ಕಾರಣ ಈಗ ಜನತೆಗೆ ಸಮಸ್ಯೆ ಎದುರಿಸಬೇಕಾಗಿದೆ ಎಂದರು.
ಪಾಲಿಕೆ ಮಾಜಿ ಸದಸ್ಯರಾದ ಬಿ.ವಿ.ಮಂಜುನಾಥ್, ಸುಬ್ಬಯ್ಯ ಇದ್ದರು.