ಜಿಲ್ಲೆ

ಇ-ಕಾಮರ್ಸ್‌ನಲ್ಲಿ ಭಾರತ ದಾಪುಗಾಲು: ಪ್ರಾಧ್ಯಾಪಕ ಎಂ.ಶಂಕರ್

ಶಿಕಾರಿಪುರ: ಭಾರತ ಈ ಶತಮಾನದ ಶಕ್ತಿಯಾಗಿ ವಿಶ್ವದ ಎಲ್ಲ ಕ್ಷೇತ್ರಗಳಲ್ಲಿ ವಿಜೃಂಭಿಸಲಿದೆ. ಹೊಸ ಹೊಸ ಆವಿಷ್ಕಾರಗಳ ಜತೆಗೆ ತನ್ನದೇ ಆದ ವಿಶಿಷ್ಟ ಹೆಜ್ಜೆಗಳಿಂದ ಭಾರತ ಪ್ರಕಾಶಿಸುತ್ತಿದೆ ಎಂದು ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಎಂ.ಶಂಕರ್ ಹೇಳಿದರು.

ಕುಮದ್ವತಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ವಾಣಿಜ್ಯ ಪದವಿ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ಐಕ್ಯೂಎಸಿ ಆಯೋಜಿಸಿದ್ದ ಇ-ಕಾಮರ್ಸ್ ಮತ್ತು ಡಿಜಿಟಲ್ ಇಂಡಿಯಾ ವಿಷಯ ಕುರಿತು ಉಪನ್ಯಾಸ ನೀಡಿದರು.

ಇ-ಕಾಮರ್ಸ್ ಮತ್ತು ಡಿಜಿಟಲ್ ಇಂಡಿಯಾ ಇವುಗಳ ಯಶಸ್ಸು ಕೆಲವೇ ವರ್ಷಗಳಲ್ಲಿ ಗೋಚರವಾಗಿದೆ. ಈ ವೇಗವನ್ನು ಇನ್ನಷ್ಟು ಕಾಯ್ದುಕೊಳ್ಳಬೇಕಿದೆ. ಭವಿಷ್ಯದಲ್ಲಿ ಭಾರತ ಇನ್ನಷ್ಟು ಅಭಿವೃದ್ಧಿ ಕಂಡುಕೊಳ್ಳುವಲ್ಲಿ ಇದು ಸಹಾಯಕವಾಗಿದೆ. ಇ-ಕಾಮರ್ಸ್‌ನಿಂದ ಭಾರತ ಇಂದು ವಿಶ್ವದಲ್ಲೇ ಉತ್ತಮ ಸ್ಥಾನಮಾನ ಹೊಂದಿದೆ. ದೇಶದ ಯುವ ಸಮೂಹ ನಾವೀನ್ಯತೆಗೆ ಬಹುಬೇಗ ಒಗ್ಗಿಕೊಳ್ಳುತ್ತಿದೆ. ಈ ಯೋಜನೆಗಳಿಂದಾಗಿ ಶತಮಾನದ ಹೊಸ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ ಎಂದರು.

ಪ್ರಾಚಾರ್ಯ ಡಾ. ಜಿ.ಆರ್.ಹೆಗಡೆ ಮಾತನಾಡಿ, ಭಾರತ ಇಂದು ವಿಶ್ವದಲ್ಲೇ ತಾಂತ್ರಿಕವಾಗಿ ಬಹು ವಿಸ್ತಾರದ ಪಥದಲ್ಲಿ ಮುನ್ನಡೆಯುತ್ತಿದೆ. ಇಡೀ ಜಗತ್ತು ನೋಡುವಂತೆ ಭಾರತ ಜ್ಞಾನಮುಖಿಯಾಗಿ ಬೆಳೆಯುತ್ತಿದೆ. ವಿದ್ಯಾರ್ಥಿಗಳು ಹೊಸ ರಾಷ್ಟ್ರೀಯ ಶಿಕ್ಷಣ ಪಠ್ಯಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಹೊಸಹೊಸ ಆವಿಷ್ಕಾರಗಳು ಹೊರಹೊಮ್ಮುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.