ಬನಶಂಕರಿ ದೇವಿ ಜಾತ್ರೆ 
ಜಿಲ್ಲೆ

ಆಹೋರಾತ್ರಿ ಬನಶಂಕರಿ ಜಾತ್ರೆಯಲ್ಲಿ ಕಳ್ಳರ ಹಾವಳಿ !

ಬಾಗಲಕೋಟೆ: ಲಕ್ಷಾಂತರ ಜನರು ಸೇರುವ ಐತಿಹಾಸಿಕ ಬಾದಾಮಿಯ ಬನಶಂಕರಿ ದೇವಿ ಜಾತ್ರೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಖದೀಮರು ಗ್ಯಾಂಗ್ ಕಟ್ಟಿಕೊಂಡು ಜನರ ವಸ್ತುಗಳನ್ನು ದೋಚುತ್ತಿರುವ ವರದಿ ಆಗಿದೆ.

ಜಾತ್ರೆಯ ಅಂಗವಾಗಿ ಬನಶಂಕರಿಯಲ್ಲಿ ೧೦೦ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಿ, ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅದಾಗ್ಯೂ ಲಕ್ಷಾಂತರ ಜನರು ಸೇರುವ ಜಾತ್ರೆಯಲ್ಲಿ ಕಳ್ಳರ ಗ್ಯಾಂಗ್ ತಮ್ಮ ಕೈಚಳಕ ತೋರುತ್ತಿದ್ದಾರೆ.

೨೦ಕ್ಕೂ ಹೆಚ್ಚು ಜನರು ಮೊಬೈಲ್ ಕಳೆದುಕೊಂಡಿದ್ದು, ಅನೇಕರು ಚಿನ್ನದ ಚೈನ್, ಬೈಕ್, ಒಂದು ಕಾರು ಸಹ ಕಳ್ಳತನ ಆಗಿರುವ ಬಗ್ಗೆ ಜನರು ಅಲ್ಲಿ ತೆರೆದಿರುವ ತಾತ್ಕಾಲಿಕ ಪೊಲೀಸ್ ಹೊರ ಠಾಣೆಯಲ್ಲಿ ಮಾಹಿತಿ ನೀಡಿದ್ದಾರೆ. ಆದರೆ, ಅಽಕೃತವಾಗಿ ಇನ್ನೂ ಯಾರು ದೂರು ದಾಖಲಿಸಿಲ್ಲ.

ಜ. ೧೩ ರಂದು ನಡೆದ ರಥೋತ್ಸವಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಿದ್ದು, ಜನದಟ್ಟನೆ ವ್ಯಾಪಕ ಇದ್ದಿದ್ದರಿಂದ ಇದನ್ನೆ ಬಂಡವಾಳ ಮಾಡಿಕೊಂಡಿರುವ ಕಳ್ಳರ ಗ್ಯಾಂಗ್ ತಮ್ಮ ಕೈಚಳಕ ತೋರಿಸಿದ್ದಾರೆ.

ಜಾತ್ರೆಯಲ್ಲಿ ಕಳ್ಳರಿಂದ ವಸ್ತುಗಳನ್ನು ಕಳೆದುಕೊಂಡಿರುವ ಮಾಹಿತಿ ಪಡೆದ ಪೊಲೀಸರು ಕಳ್ಳರ ಪತ್ತೆಗಾಗಿ ಬಲೆಯನ್ನು ಬೀಸಿದ್ದಾರೆ. ಒಂದು ತಿಂಗಳು ಪೂರ್ತಿ ಆಹೋರಾತ್ರಿ ನಡೆಯುವ ಉತ್ತರ ಕರ್ನಾಟಕದ ಅತಿದೊಡ್ಡ ಜಾತ್ರೆಯಲ್ಲಿ ಒಂದಾದ ಬನಶಂಕರಿ ಜಾತ್ರೆಗೆ ಪ್ರತಿ ದಿನವೂ ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ.

ಈ ಹಿನ್ನಲೆಯಲ್ಲಿ ಜಾತ್ರೆಯ ಪ್ರದೇಶದಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮರಾ ಆಧರಿಸಿ ಕಳ್ಳರು ಹಾಗೂ ಅನುಮಾನಸ್ಪದ ವಾಹನಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ. ಈಗಾಗಲೇ ಅನುಮಾನಸ್ಪದವಾಗಿ ಕಂಡು ಬಂದ ಆರು ಜನರನ್ನು ವಶಕ್ಕೆ ಪಡೆದು ವಿಚಾರಣೆ ಸಹ ನಡೆಸುತ್ತಿದ್ದಾರೆ. ವಸ್ತು ಕಳೆದುಕೊಂಡಿರುವ ಜನರಿಗೆ ದೂರು ದಾಖಲಿಸುವಂತೆಯೂ ಪೊಲೀಸರು ಮನವಿ ಮಾಡಿದ್ದಾರೆ.