ಚನ್ನರಾಯಪಟ್ಟಣ: ವಿದ್ಯಾರ್ಥಿಗಳಲ್ಲಿ ವ್ಯಾಪಾರ ಹಾಗೂ ವ್ಯವಹಾರ ಜ್ಞಾನ ಬೆಳೆಯಲು ಆಹಾರಮೇಳ ಅಗತ್ಯ ಎಂದು ಟೈಮ್ಸ್ ಪಿಯು ಕಾಲೇಜಿನ ಕಾರ್ಯದರ್ಶಿ ಬಿ.ಕೆ.ಗಂಗಾಧರ್ ಹೇಳಿದರು.
ಪಟ್ಟಣದ ಟೈಮ್ಸ್ ಪಿಯು ಕಾಲೇಜು ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಆಹಾರಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಂತದಿಂದಲೇ ಶಿಕ್ಷಣದ ಜತೆಗೆ ವ್ಯಾಪಾರ ಜ್ಞಾನವನ್ನು ತುಂಬುವುದು ಅಗತ್ಯ ಎಂದರು.
ಶಿಕ್ಷಣ ಎಂಬುದು ಹೆಚ್ಚು ಅಂಕ ಗಳಿಕೆಯೊಂದಿಗೆ ಉನ್ನತ ಹುದ್ದೆ ಹಾಗೂ ಹಣ ಸಂಪಾದನೆಗೆ ಸೀಮಿತವಾಗಬಾರದು. ಬದಲಿಗೆ ದೇಶದ ಆರ್ಥಿಕತೆ ಸಾಗುತ್ತಿರುವ ಬಗ್ಗೆ ಗಮನಹರಿಸಿ ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹಣ, ಆಸ್ತಿ ಸಂಪಾದನೆಗಿಂತ ಮೌಲ್ಯಯುತ ಮಾನವೀಯತೆ ಬೆಳೆಸಿಕೊಳ್ಳಬೇಕು. ಆಗಮಾತ್ರ ಅನ್ನದ ಬೆಲೆ ತಿಳಿಯಲು ಸಾಧ್ಯ. ಯಾವ ಬಗೆಯ ತಿನಿಸನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಚಿಂತೆ ಕೆಲವರಿಗಿದ್ದರೆ, ಇನ್ನು ದೇಶದಲ್ಲಿ ಅದೆಷೊ್ಟೀೀ ಜನ ಒಂದು ಹೊತ್ತಿನ ಅನ್ನವಿಲ್ಲದೆ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದರು.
ಒಬ್ಬ ರೈತ ಹಗಲು-ರಾತ್ರಿ ಎನ್ನದೆ ಬೆವರು ಸುರಿಸಿ ತನ್ನ ಜಮೀನಿನಲ್ಲಿ ದುಡಿದು ಅನ್ನ ಬೆಳೆದು ದೇಶಕ್ಕೆ ನೀಡುತ್ತಾನೆ. ತನಗಾಗಿ ಏನನ್ನೂ ನಿರೀಕ್ಷಿಸುವುದಿಲ್ಲ, ಆದರೆ ಅನ್ನದ ಬೆಲೆ ತಿಳಿಯದ ಕೆಲವರು ಅರ್ಧದಲ್ಲಿಯೇ ಊಟ ಬಿಟ್ಟು ಬಿಸಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗಮನ ಸೆಳೆದ ಆಹಾರಮೇಳ: ಕಾಲೇಜು ಆವರಣದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕ್ಯಾಂಟೀನ್ ಮತ್ತು ಮಳಿಗೆಗಳನ್ನು ತೆರೆಯಲಾಗಿತ್ತು. ಪಾನಿಪುರಿ, ಚುರುಮುರಿ, ಬಜ್ಜಿ, ಬ್ರೆಡ್ ರೋಸ್ಟ್, ಐಸ್ ಕ್ರೀಮ್, ನಿಪಟ್ಟು, ಚಿಕನ್ ಬಿರಿಯಾನಿ, ಫೈಡ್ ರೈಸ್, ಗೋಬಿ, ಫ್ರೂಟ್ ಸಲಾಡ್, ಅಕ್ಕಿ ರೊಟ್ಟಿ, ಪರೋಟ, ಚಿಕನ್ ಕರಿ ಸೇರಿದಂತೆ ವಿವಿಧ ತಿನಿಸುಗಳು ಗ್ರಾಹಕರ ಬಾಯಲ್ಲಿ ನೀರೂರಿಸಿದವು. ವಿದ್ಯಾರ್ಥಿಗಳು ಗ್ರಾಹಕರನ್ನು ತಮ್ಮತ್ತ ಆಕರ್ಷಿಸಿ ವ್ಯಾಪಾರ ಮಾಡಿ ಹಣ ಸಂಪಾದಿಸಿದರು.
ಸಂಸ್ಥೆಯ ಅಧ್ಯಕ್ಷ ಎ.ಬಿ.ಸುರೇಂದ್ರಕುಮಾರ್, ಪ್ರಾಂಶುಪಾಲ ಶ್ರೀಕಂಠ, ಆಡಳಿತಾಧಿಕಾರಿ ಅನೂಪ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಇತರರು ಹಾಜರಿದ್ದರು.