ಸಕಲೇಶಪುರ: ಇಂದಿನ ಆಹಾರ ಪದ್ಧ್ದತಿ, ಕಲುಷಿತ ವಾತಾವರಣದ ನಡುವೆ ಮಹಿಳೆಯರು ಹಾಗೂ ಮಕ್ಕಳು ಸಾಕಷ್ಟು ಕಾಯಿಲೆಗಳಿಗೆ ತುತ್ತಾಗಬೇಕಾಗಿದೆ ಎಂದು ನಂಜಮ್ಮ ಮಹಿಳಾ ಸಮಾಜ ಅಧ್ಯಕ್ಷೆ ಕೌಸಲ್ಯಾ ಲಕ್ಷ್ಮಣಗೌಡ ಹೇಳಿದರು.
ಶನಿವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಹಾಗೂ ಸಮಾಜದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಮನೆ ಹಾಗೂ ಹೊರಗಿನ ಕೆಲಸ, ಮಕ್ಕಳ ನಿರ್ವಹಣೆಯ ಒತ್ತಡಗಳ ನಡುವೆಯೂ ಹೆಣ್ಣು ತನ್ನ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವುದಿಲ್ಲ. ಹೀಗಾಗಿ ಬಹಳ ಬೇಗ ಆರೋಗ್ಯ ಸಮಸ್ಯೆಯಿಂದ ಜೀವನವಿಡೀ ನರಳಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪುರುಷರ ಸಹಕಾರ ಇಲ್ಲದೆ ಮಹಿಳೆ ಯಾವುದೇ ಕ್ಷೇತ್ರದಲ್ಲಿಯೂ ಮುಂದುವರಿಯಲು ಸಾಧ್ಯವಿಲ್ಲ. ಕೆಲವರಿಗೆ ಪುರುಷರನ್ನು ದ್ವೇಷ ಮಾಡಿ ಮಾತನಾಡುತ್ತ ಪ್ರಚಾರ ಪಡೆಯಲು ಮುಂದಾಗುತ್ತಾರೆ. ಇದು ನಿಲ್ಲಬೇಕು, ಪುರುಷ ಮತ್ತು ಮಹಿಳೆ ನಡುವೆ ಉತ್ತಮ ಬಾಂಧವ್ಯ ಬೆಳೆಸುವ ವಾತಾವರಣಕ್ಕೆ ಹೆಚ್ಚು ಒತ್ತು ಕೊಡಬೇಕು. ಇದರಿಂದ ಕುಟುಂಬ ಹಾಗೂ ಸಮಾಜದಲ್ಲಿ ನೆಮ್ಮದಿಯ ಬದುಕು ಸಾಧ್ಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ, ಶೀಲಾ ಸುಧಾಕರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಾರದಾ ಗುರುಮೂರ್ತಿ, ಶೋಭಾ ಮಂಜುನಾಥ್, ನಿರ್ಮಲಾ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಸುಪ್ರಿಯಾ, ಉಪಾಧ್ಯಕ್ಷೆ ಶೋಭಾ ಮಂಜುನಾಥ್, ಖಚಾಂಚಿ ನಿರ್ಮಲಾ ಪವಿತ್ರನ್, ಪುರಸಭಾ ಸದಸ್ಯರಾದ ಅನ್ನಪೂರ್ಣ, ವನಜಾಕ್ಷಿ, ಜ್ಯೋತಿ, ರೇಖಾ ರುದ್ರಕುಮಾರ್ ಇದ್ದರು.