ಮಹಾಲಿಂಗಪುರ: ಆರೋಗ್ಯ ಉತ್ತಮವಾಗಿರಲು ಆಹಾರ ಪದ್ಧತಿ ಬಹಳ ಮುಖ್ಯವಾಗಿದೆ. ಪೌಷ್ಟಿಕ ಹಾಗೂ ಮಿತವಾದ ಆಹಾರ ಸೇವನೆ ಆರೋಗ್ಯ ಕಾಪಾಡುತ್ತದೆ ಎಂದು ತೇರದಾಳ ದಾನಿಗೊಂಡ ಆಯುರ್ವೇದ ಮೆಡಿಕಲ್ ಕಾಲೇಜಿನ ಉಪನ್ಯಾಸಕಿ ಡಾ. ಭಾರ್ಗವಿ ಯಂಕಂಚಿ ಹೇಳಿದರು.
ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಕಲಾ, ವಿಜ್ಞಾನ ಮತ್ತು ಡಿ.ಡಿ. ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಭಾಗ ಹಾಗೂ ಎನ್‌ಎಸ್‌ಎಸ್ ಘಟಕ ಹಾಗೂ ವೈಆರ್‌ಸಿ ವಿಭಾಗಗಳಿಂದ ಡಾ. ಪ್ರಭಾಕರ ಕೋರೆ ಅವರ 76ನೇ ಜನ್ಮ ದಿನದ ನಿಮಿತ್ತ ಸೋಮವಾರ ಆಯೋಜಿಸಲಾಗಿದ್ದ ಆರೋಗ್ಯ ಜಾಗೃತಿ ಮತ್ತು ರಕ್ತ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ನಮ್ಮ ಆಹಾರ ಕ್ರಮ ಮತ್ತು ಜೀವನ ಕ್ರಮ ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಸರಳ ಜೀವನ ಕ್ರಮ ಅನುಸರಿಸಬೇಕು ಎಂದರು.
ಪ್ರಾಚಾರ್ಯ ಡಾ.ಕೆ.ಎಂ. ಅವರಾದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕೆಟ್ಟ ವ್ಯಸನಗಳಿಂದ ದೂರವಿರಬೇಕು. ಒಳ್ಳೆಯ ಆಹಾರ ಪದ್ಧತಿ ಅನುಸರಿಸುವುದು, ನಿತ್ಯ ಯೋಗ, ವ್ಯಾಯಾಮ ಮಾಡುವುದು ಅತ್ಯಗತ್ಯ ಎಂದರು.
ಐಕ್ಯೂಎಸಿ ಸಂಯೋಜಕ ಡಾ.ಎಸ್.ಡಿ. ಸೊರಗಾಂವಿ, ವಿ.ಎಸ್. ಅಂಗಡಿ, ಎ.ಎಂ. ಉಗಾರೆ, ಆರ್.ಎಸ್. ಪೂಜಾರಿ, ಡಾ. ಮಹಾಂತೇಶ ಯಂಕಂಚಿ, ಐ.ಸಿ. ಶಿರೋಳ, ಆರ್‌ವಿ. ಚೌಗಲಾ ಮತ್ತು ವಿದ್ಯಾರ್ಥಿಗಳು ಇದ್ದರು.