ಜಿಲ್ಲೆ

ಆಹಾರ ಇಲಾಖೆ ಗೋದಾಮಿನಲ್ಲಿ ಕಳ್ಳತನ

ಚಾಮರಾಜನಗರ : ನಗರದ ಆಹಾರ ಇಲಾಖೆ ಗೋದಾಮಿಗೆ ಖದೀಮರು ಶುಕ್ರವಾರ ರಾತ್ರಿ ಕನ್ನ ಹಾಕಿದ್ದು, ಅಪಾರ ಪ್ರಮಾಣದ ಅಕ್ಕಿ ಮತ್ತು ಗೋಧಿಯನ್ನು ಕದ್ದು ಹೋಗಿದ್ದಾರೆ.

ನಗರದ ಸತ್ತಿ ರಸ್ತೆಯಲ್ಲಿನ ಗೋದಾಮು ಹಾಗೂ ಕಾಳನಹುಂಡಿ ಸಮೀಪದಲ್ಲಿರುವ ಗೋದಾಮಿಗೆ ಕಳ್ಳರು ಕನ್ನ ಹಾಕಿದ್ದಾರೆ. ಸತ್ತಿ ರಸ್ತೆಯಲ್ಲಿನ ಗೋದಾಮಿನ ಬಾಗಿಲು ಮೀಟಿ ಕಳ್ಳತನ ಮಾಡಿದ್ದರೇ, ಕಾಳನಹುಂಡಿಯಲ್ಲಿ ಸಲೀಸಾಗಿ ಕೃತ್ಯ ನಡೆದಿದೆ. ಕಾಳನಹುಂಡಿಯಲ್ಲಿ 70 ಕ್ವಿಂಟಾಲ್ ಅಕ್ಕಿ ಹಾಗೂ ಚಾಮರಾಜನಗರದ ಗೋದಾಮಿನಲ್ಲಿ 50 ಚೀಲ ಅಕ್ಕಿ ಮತ್ತು 5 ಚೀಲ ಗೋಧಿ ಕಳವಾಗಿದೆ. ಒಟ್ಟಾರೆಯಾಗಿ ಸುಮಾರು 100 ಕ್ವಿಂಟಾಲ್ ಅಕ್ಕಿ ಗೋಧಿಯನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ, ಚಾಮರಾಜನಗರ ಗ್ರಾಮಾಂತರ ಠಾಣೆ ಹಾಗೂ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಗೋದಾಮುಗಳಿಗೆ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದಿರುವುದು ಕಂಡುಬಂದಿದೆ. ಸೆಕ್ಯುರಿಟಿ ಗಾರ್ಡ್, ಸಿಸಿಟಿವಿ ವ್ಯವಸ್ಥೆ ಇರದಿರುವುದು ಕಂಡುಬಂದಿದೆ. ಕಾಳನಹುಂಡಿ ಗೋದಾಮಿನಲ್ಲಿ ನಡೆದಿರುವ ಕಳ್ಳತನದಲ್ಲಿ ಯಾವುದೇ ಬಲವಂತದ ಪ್ರಕ್ರಿಯೆ ನಡೆದಿರುವುದು ಕಂಡುಬಂದಿದ್ದು, ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.