ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಗೆ ಭಾನುವಾರ ಭೇಟಿ ನೀಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ವಿವಿಧ ಮಾತ್ರೆ, ಔಷಧಗಳಿರುವ 150 ಕೋವಿಡ್ ಕಿಟ್ ಹಸ್ತಾಂತರಿಸಿದರು. ಬುಡಾ ಇಂಜಿನಿಯರ್ ಮಹಾಂತೇಶ ಹಿರೇಮಠ, ವೀರೇಶ ಹಿರೇಮಠ, ಪವನ ಹಿರೇಮಠ, ಈರಣ್ಣ ಗಣಾಚಾರಿ ಇತರರು ಇದ್ದರು. 
ಜಿಲ್ಲೆ

ಆಸ್ಪತ್ರೆಗಳಿಗೆ ಸಮರ್ಪಕ ಆಕ್ಸಿಜನ್ ಪೂರೈಕೆ

ಬೆಳಗಾವಿ: ಜಿಲ್ಲೆಯಲ್ಲಿ ಸಮರ್ಪಕವಾಗಿ ಹಾಗೂ ಅವಶ್ಯಕತೆಗೆ ಅನುಸಾರವಾಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಈ ಹಿಂದೆ ಜಿಲ್ಲೆಯಲ್ಲಿ ಒಟ್ಟು 15 ಕೆ.ಎಲ್. ಆಕ್ಸಿಜನ್ ಪೂರೈಕೆಯಾಗುತ್ತಿತ್ತು. ಈಗ ಸರ್ಕಾರದಿಂದ 22 ಕೆ.ಎಲ್. ಆಕ್ಸಿಜನ್ ಹಂಚಿಕೆಯಾಗಿದೆ. ಸ್ಥಳೀಯವಾಗಿ 3 ಸಂಸ್ಥೆಗಳಿಂದ 5 ಕೆ.ಎಲ್. ತಯಾರಿಕೆಯಾಗಿ ಕ್ರಮಬದ್ಧವಾಗಿ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದರು.

ಕರೊನಾ ನಿಯಂತ್ರಣ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಒಂದು ಹಾಗೂ ಎಲ್ಲ ತಾಲೂಕು ಕೇಂದ್ರಗಳಲ್ಲಿ ಒಂದರಂತೆ ಕೋವಿಡ್ ವಾರ್ ರೂಮ್ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್ ಕೇರ್ ಸೆಂಟರ್: ವಾರ್ ರೂಮ್‌ಗಳಲ್ಲಿ ಹೋಂ ಐಸೋಲೇಷನ್‌ನಲ್ಲಿ ಇರುವ ಸೋಂಕಿತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರ ಆರೋಗ್ಯ ಹಾಗೂ ಚಿಕಿತ್ಸೆ ಬಗ್ಗೆ ವಿಚಾರಿಸಲಾಗುತ್ತಿದೆ. ಅವರಿಗೆ ಸಂಬಂಧಪಟ್ಟ ಪ್ರಥಮ ಸಂಪರ್ಕಿತರನ್ನು ಹೋಮ್ ಕ್ವಾರಂಟೈನ್ ಇರುವ ಬಗ್ಗೆ ದೂರವಾಣಿ ಕರೆ ಮಾಡಿ ವಿಚಾರಿಸಲಾಗುತ್ತಿದೆ.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್‌ಗಳ ವಿವರಗಳನ್ನು ಪಡೆಯಲಾಗುತ್ತಿದೆ. ಅಲ್ಲದೆ, ಜಿಲ್ಲೆಯಲ್ಲಿ ಎಲ್ಲ ತಾಲೂಕುಗಳಲ್ಲಿ ಒಟ್ಟು 25 ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, ಒಟ್ಟು 66 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಾಸ್ಟೆಲ್, ಯಾತ್ರಿ ನಿವಾಸ ಹಾಗೂ ಕಾಲೇಜ್ ಸೇರಿ ಒಟ್ಟು 980 ಬೆಡ್‌ಗಳು ಲಭ್ಯವಿದೆ. ಸರ್ಕಾರದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 320 ಹಾಸಿಗೆಗಳು ಲಭ್ಯವಿವೆ ಎಂದರು.

6.72 ಲಕ್ಷ ಜನರಿಗೆ ಲಸಿಕೆ: ಜಿಲ್ಲೆಯಲ್ಲಿ 38,77,504 ಜನರಿಗೆ ಲಸಿಕೆ ನೀಡುವ ಗುರಿ ಇದ್ದು, ಈವರೆಗೆ 6,72,232 ಜನರಿಗೆ ಲಸಿಕೆ ನೀಡಲಾಗಿದೆ. 5,44,589 ಜನ ಮೊದಲನೇ ಡೋಸ್ ಪಡೆದುಕೊಂಡಿದ್ದಾರೆ. 1,27,643 ಜನರು 2ನೇ ಡೋಸ್ ಪಡೆದಿದ್ದಾರೆ. 4,16,946 ಜನ 2ನೇ ಡೋಸ್ ಪಡೆಯುವುದು ಬಾಕಿ ಇದೆ ಎಂದು ತಿಳಿಸಿದರು.

ಕೇಂದ್ರದಿಂದ 1,190 ವೈಯಲ್ಸ್ ಹಾಗೂ ರಾಜ್ಯದಿಂದ 2,480 ವೈಯಲ್ಸ್ ಕೋವ್ಯಾಕ್ಸಿನ್ ಲಸಿಕೆ ಪೂರೈಕೆಯಾಗಿದೆ. ಕೇಂದ್ರದಿಂದ 9,080 ವಯಲ್ಸ್ ಹಾಗೂ ರಾಜ್ಯದಿಂದ 12,560 ವಯಲ್ಸ್ ಕೋವಿಶೀಲ್ಡ್ ಲಸಿಕೆ ಪೂರೈಕೆಯಾಗಿದ್ದು, ಒಟ್ಟು 21,640 ವಯಲ್ಸ್ ಕೋವಿಶೀಲ್ಡ್ ಲಸಿಕೆ ಪೂರೈಕೆಯಾಗಿದೆ. 18ರಿಂದ 44 ವಯಸ್ಸಿನ 4,125 ಲಸಿಕೆ ನೀಡಲಾಗಿದೆ. ಮೇ 11ರಿಂದಲೇ ಈ ಲಸಿಕಾಕರಣ ಪ್ರಾರಂಭಿಸಲಾಗಿದೆ ಎಂದರು.

ರೆಮ್‌ಡೆಸಿವಿರ್ ಪೂರೈಕೆ: ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಏ. 1ರಿಂದ ಮೇ 15ರ ವರೆಗೆ 12,902 ರೆಮ್‌ಡೆಸಿವಿರ್ ವೈಯಲ್ಸ್‌ಗಳು ಪೂರೈಕೆಯಾಗಿವೆ. ಅವುಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಒಟ್ಟು 12,750 ವೈಯಲ್ಸ್ ನೀಡಲಾಗಿದೆ. ಸದ್ಯ ಜಿಲ್ಲಾ ಉಗ್ರಾಣದಲ್ಲಿ 152 ವೈಯಲ್ಸ್ ಇವೆ. ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಏ. 1ರಿಂದ ಮೇ 15ರ ವರೆಗೆ 12,561 ರೆಮ್‌ಡೆಸಿವಿರ್ ವೈಯಲ್ಸ್ ಪೂರೈಕೆಯಾಗಿವೆ.

ರೆಮ್‌ಡೆಸಿವಿರ್‌ಗಾಗಿ ಆಸ್ಪತ್ರೆಯವರು ವೆಬ್‌ಸೈಟ್ ಮೂಲಕ ನೋಂದಣಿ ಮಾಡಿದಾಗ ನೇರವಾಗಿ ಆಯಾ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಎಲ್ಲರಿಗೂ ರೆಮ್‌ಡೆಸಿವಿರ್ ಅಗತ್ಯವಿರುವುದಿಲ್ಲ. ವೈದ್ಯರ ಸಲಹೆ ಮೇರೆಗೆ ಮಾತ್ರ ನೀಡಲಾಗುವುದು ಎಂದು ತಿಳಿಸಿದರು.

ಕರೊನಾ ಮರಣ ಪ್ರಮಾಣ: ಕರೊನಾದಿಂದ 47 ಜನ ಮರಣ ಹೊಂದಿದ್ದಾರೆ. ಅಲ್ಲದೆ, ಸಕಾರಾತ್ಮಕ ಪ್ರಕರಣ ಶೇಕಡಾವಾರು (ಪಾಸಿಟಿವಿಟಿ ರೇಟ್) ಕಳೆದ 10 ದಿನದಿಂದ ಶೇ. 38.43ರಷ್ಟಿದೆ. ಗುಣಮುಖರಾದವರ ಪ್ರಮಾಣ ಶೇ. 75.91 ಆಗಿದ್ದು, ಕಳೆದ 10 ದಿನಗಳಿಂದ ಮರಣ ಪ್ರಮಾಣ ಶೇ. 0.23 ಆಗಿದೆ.

ಚಿಕಿತ್ಸೆಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 4,146 ಹಾಸಿಗೆಗಳು ಲಭ್ಯವಿವೆ. ಕರೊನಾ ರೋಗಿಗಳಿಗೆ ಮೀಸಲಿಟ್ಟಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಹಾಸಿಗೆಗಳು ಲಭ್ಯವಿದ್ದು, ಅವುಗಳಲ್ಲಿ 2,144 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಸಿ ಹಿರೇಮಠ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಇದ್ದರು.