ಕೋಲಾರ: ಇ-ಹಾಸ್ಪಿಟಲ್ ಕಾರ್ಯಕ್ರಮದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೇಮಕಗೊಂಡಿದ್ದ ಡೇಟಾ ಎಂಟ್ರಿ ಆಪರೇಟರ್ಗಳನ್ನು (ಡಿಇಒ) ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಸೀಮಿತಗೊಳಿಸಿ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಇದರಿಂದಾಗಿ ಹಲವು ಮಂದಿ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಅನುಮೋದಿಸಲಾದ ಡೇಟಾ ಎಂಟ್ರಿ ಆಪರೇಟರ್ಗಳನ್ನು ಜಿಲ್ಲಾ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು. ಇದೀಗ ಡಿಇಒ ಹುದ್ದೆಗಳನ್ನು ಯುಕ್ತಗೊಳಿಸುವಂತೆ ಆರೋಗ್ಯ ಇಲಾಖೆಯ ಉಪ ನಿರ್ದೇಶಕರು ಬುಧವಾರ ಸಂಜೆ ಆದೇಶಿಸಿದ್ದು, ಹುದ್ದೆಗಳನ್ನು ಸೀಮಿತಗೊಳಿಸುವಂತೆ ಜಿಲ್ಲಾ ಶಸ್ತ್ರಚಿಕಿತ್ಸ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದ್ದಾರೆ.
ಸರ್ಕಾರದ ಸುತ್ತೋಲೆಯ ಬಗ್ಗೆ ಇ-ಹಾಸ್ಪಿಟಲ್ ಕಾರ್ಯಕ್ರಮದ ನೋಡಲ್ ಅಧಿಕಾರಿ ಸಿಬ್ಬಂದಿ ಗಮನಕ್ಕೆ ತರುತ್ತಿದ್ದಂತೆ ನಗರ ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆಯಲ್ಲಿ 10 ಮಂದಿ ಮತ್ತು ವಿವಿಧ ತಾಲೂಕು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಲಾ 5 ಮಂದಿ ಕೆಲಸ ಬಹಿಷ್ಕರಿಸಿದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ರೋಗಿಗಳು ಒಪಿಡಿ ಚೀಟಿ ಪಡೆದುಕೊಳ್ಳಲು ಪರದಾಡುವಂತಾಯಿತು.
ನಿತ್ಯ ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆಗೆ ಒಂದು ಸಾವಿರಕ್ಕೂ ಹೆಚ್ಚು ಒಳ ರೋಗಿಗಳು ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗಳಿಗೂ 300ಕ್ಕೂ ಹೆಚ್ಚು ರೋಗಿಗಳು ಆಗಮಿಸುತ್ತಾರೆ. ಎಂದಿನಂತೆ ಗುರುವಾರ ಕೆಲಸಕ್ಕೆ ಆಗಮಿಸಿದ ಡೇಟಾ ಎಂಟ್ರಿ ಆಪರೇಟ್ಗಳು ಸುತ್ತೋಲೆ ಹೊರಡಿಸಿದ್ದ ವಿಷಯ ತಿಳಿಯುತ್ತಿದ್ದಂತೆ ಕರ್ತವ್ಯ ಬಹಿಷ್ಕರಿಸುವ ಮೂಲಕ ಪ್ರತಿಭಟಿಸಿದರು.
ಕಳೆದ 10 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಇದೀಗ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಇದೇ ಕೆಲಸವನ್ನು ನಂಬಿಕೊಂಡು ಕೆಲಸ ಮಾಡುತ್ತಿದ್ದ ಸಿಬ್ಬಂದಿ ಜೀವನ ಇದೀಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಡಿಇಒಗಳನ್ನು ಆಸ್ಪತ್ರೆ ಹಂತದಲ್ಲಿ ಹೊರಗುತ್ತಿಗೆ ಆಧಾರದ ಮೇರೆಗೆ ನೇಮಕ ಮಾಡಿಕೊಳ್ಳಲಾಗಿದೆ. ಆದರೆ ವೇತನವನ್ನು ಸರ್ಕಾರ ಕೊಡುವುದು 13 ಸಾವಿರದಿಂದ 17 ಸಾವಿರದ ತನಕ, ಅದನ್ನು ಪ್ರತಿ ತಿಂಗಳಲ್ಲೂ ನಿಗದಿತ ಸಮಯದೊಳಗೆ ನೀಡುತ್ತಿರಲಿಲ್ಲ. ನಾಲ್ಕೆ$ದು ತಿಂಗಳಿಗೊಮ್ಮೆ ಪಾವತಿ ಮಾಡಲಾಗುತ್ತಿತ್ತು. ಆದರೂ ಸಹ ಕುಟುಂಬ ನಿರ್ವಹಣೆ ಮಾಡಿಕೊಂಡು ಹೋಗಲಾಗುತ್ತಿತ್ತು, ಮಾನವ ಸಂಪನ್ಮೂಲ ಕಲ್ಪಿಸಿರುವ ಗುತ್ತಿಗೆ ಸಂಸ್ಥೆಯವರು ಇದೀಗ ವೇತನ ಬಾಕಿ ಉಳಿಸಿಕೊಂಡಿದ್ದು, ಪಾವತಿ ಮಾಡುತ್ತಾರೊ, ಇಲ್ಲವೊ ಎಂಬುದರ ಬಗ್ಗೆ ಅನುಮಾನ ಕಾಡುತ್ತಿದೆ ಎಂದು ಕೆಲ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.
ಕೆಲಸ ಏನು...?: ಆರೋಗ್ಯ ಇಲಾಖೆಯಿಂದ ಇ&ಹಾಸ್ಪಿಟಲ್ ಕಾರ್ಯಕ್ರಮದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇರೆಗೆ ಡೇಟಾ ಎಂಟ್ರಿ ಆಪರೇಟರ್ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಕೌಂಟರ್ಗಳಲ್ಲಿ ಒಪಿಡಿ ಚೀಟಿ ನೀಡುವುದು, ಬಿಲ್ ಮಾಡುವುದು, ಡೇಟಾ ಎಂಟ್ರಿ ಮಾಡುವುದು, ಔಷಧ ಮಳಿಗೆ, ದಾಖಲೆ ಕೊಠಡಿ ಹೀಗೆ ವಿವಿಧ ರೀತಿಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಯ ಸಿಬ್ಬಂದಿ ಜತೆಗೆ ಗುತ್ತಿಗೆ ಸಿಬ್ಬಂದಿಯೂ ಕೆಲಸ ಮಾಡುತ್ತಿದ್ದು, ಏಕಾಏಕಿಯಾಗಿ ಸುತ್ತೋಲೆ ಹೊರಡಿಸಿರುವುದು ಸಿಬ್ಬಂದಿ ಆಕ್ರೋಶಕ್ಕೆ ಕಾರಣವಾಗಿದೆ.
ತೊಂದರೆಯಾಗದಂತೆ ಕ್ರಮ: ಡಿಇಒಗಳು ಕೆಲಸವನ್ನು ವಹಿಷ್ಕರಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಜಗದೀಶ್ ಅವರು, ಇತರ ಸಿಬ್ಬಂದಿ ಕರೆಯಿಸಿ ಒಪಿಡಿ ಕೌಂಟರ್ಗಳಿಗೆ ನಿಯೋಜಿಸಿ ರೋಗಿಗಳಿಗೆ ತೊಂದರೆಯಾಗದಂತೆ ಕ್ರಮಕೈಗೊಂಡರು. ಜತೆಗೆ ಶುಶ್ರೂಷಾಧಿಕಾರಿಗಳನ್ನು ಕರೆಯಿಸಿ ಸಿಬ್ಬಂದಿ ಪಾಳಿಯಲ್ಲಿ ಕೆಲಸ ಮಾಡಿಸಬೇಕು, ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ನಿಗಾವಹಿಸಬೇಕು ಎಂದು ಸೂಚಿಸಿದರು.
ಡಿಇಒ ಹುದ್ದೆಗಳನ್ನು ಸೀಮಿತಗೊಳಿಸಲು ಸರ್ಕಾರ ಸೂಚಿಸಿದ್ದು, ಎನ್ಎಚ್ಎಂ ಅಡಿಯಲ್ಲಿ ನೇಮಕಗೊಂಡಿದ್ದ ಸಿಬ್ಬಂದಿಯು ಕೆಲಸದಿಂದ ಹೊರ ಉಳಿದರು. ಕೂಡಲೇ ಇತರೆ ಸಿಬ್ಬಂದಿ ನಿಯೋಜಿಸಿ ರೋಗಿಗಳಿಗೆ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ. | ಡಾ.ಜಗದೀಶ್ ಪ್ರಭಾರ ಜಿಲ್ಲಾ ಶಸ್ತ್ರ ಚಿಕಿತ್ಸಕ, ಎಸ್ಎನ್ಆರ್ ಆಸ್ಪತ್ರೆ ಏ.30ರಿಂದಲೇ ನಮ್ಮನ್ನು ಬಿಡುಗಡೆಗೊಳಿಸುವಂತೆ ಸರ್ಕಾರ ಆದೇಶಿಸಿದೆ. ಪೂರ್ವ ಮಾಹಿತಿ ನೀಡಿಲ್ಲ, ನೋಡಲ್ ಅಧಿಕಾರಿ ಬೆಳಗ್ಗೆ ಮಾಹಿತಿ ನೀಡಿದಾಗ ಗೊತ್ತಾಯಿತು, ಏಕಾಏಕಿ ನಿರ್ಧಾರಗಳಿಂದ ಸಂಕಷ್ಟದಲ್ಲಿ ಸಿಕ್ಕಿ ಹಾಕಿಕೊಳ್ಳಲಾಗಿದೆ. | ಹೆಸರು ಹೇಳಲು ಇಚ್ಚಿಸದ ಡಿಇಒ