ಜಿಲ್ಲೆ

ಆಸ್ಪತ್ರೆಗಳಲ್ಲಿ ಅಗತ್ಯ ಸೌಕರ್ಯ ಕಲ್ಪಿಸಿ

ಗದಗ: ಕೋವಿಡ್ ಕೇರ್ ಕೇಂದ್ರಗಳಲ್ಲಿ ಅವ್ಯವಸ್ಥೆಗೆ ಆಸ್ಪದ ನೀಡದೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು. ತಪ್ಪಿದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ಅಧಿಕಾರಿಗಳಿಗೆ ಎಚ್ಚರಿಸಿದರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ನಿರ್ಬಂಧಿತ ಪ್ರದೇಶಗಳಿಗೆ ನಿಯೋಜಿಸಲಾದ ಅಧಿಕಾರಿಗಳು ಆಯಾ ಪ್ರದೇಶಗಳಿಗೆ ನಿಯಮಿತವಾಗಿ ಭೇಟಿ ನೀಡಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.

ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ಒದಗಿಸಬೇಕು. ಹೆಚ್ಚಿನ ದರ ಪಡೆದರೆ ಆಸ್ಪತ್ರೆಗಳ ವಿರುದ್ಧ ಕ್ರಮ ಜರುಗಿಸಬೇಕು. ಅಲ್ಲದೆ, ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸದಂತೆ ಸೂಚನೆ ನೀಡಲು ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿದರು. ಸೋಂಕು ನಿಯಂತ್ರಣಕ್ಕಾಗಿ ಈಗಾಗಲೇ ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಿ ನಿಯಮಿತವಾಗಿ ಸಭೆ ಜರುಗಿಸಿ ವರದಿ ಮಾಡದಿದ್ದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.

ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ಮಲಪ್ರಭಾ, ತುಂಗಭದ್ರಾ ಹಾಗೂ ಬೆಣ್ಣಿಹಳ್ಳ ಪಾತ್ರದ ಜಿಲ್ಲೆಯ ನರಗುಂದ, ರೋಣ ಹಾಗೂ ಮುಂಡರಗಿ ತಾಲೂಕಿನ ಗ್ರಾಮಗಳಲ್ಲಿ ತೀವ್ರ ನಿಗಾವಹಿಸಬೇಕು. ಸಾಂಕ್ರಾಮಿಕ ರೋಗಗಳು ಹಾಗೂ ವಿಷ ಜಂತುಗಳ ಹಾವಳಿ ಹೆಚ್ಚಾಗಬಹುದಾಗಿದ್ದು ಚಿಕಿತ್ಸೆಗಾಗಿ ವೈದ್ಯಕೀಯ ಸಿಬ್ಬಂದಿ ಹಾಗೂ ಔಷಧಗಳನ್ನು ದಾಸ್ತಾನಿಟ್ಟುಕೊಳ್ಳಬೇಕು ಎಂದರು.

ನೆರೆ ಪರಿಹಾರ ಕೇಂದ್ರಗಳಲ್ಲಿ ಕರೊನಾ ಸೋಂಕಿತರ ವಾಸಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು. ಮಳೆ ಹೆಚ್ಚಾಗುತ್ತಿರುವ ಪ್ರದೇಶಗಳಲ್ಲಿ ಕಚ್ಚಾ ಮನೆಗಳಲ್ಲಿ ವಾಸಿಸುತ್ತಿರುವವರನ್ನು ಗುರುತಿಸಿ ಸ್ಥಳಾಂತರಗೊಳಿಸಲು ಕ್ರಮ ವಹಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಯ ರಾಜ ಕಾಲುವೆ, ಚರಂಡಿ, ಒಳಚರಂಡಿಗಳನ್ನು ಸ್ವಚ್ಛಗೊಳಿಸಿ ಮಳೆ ನೀರು ಸರಾಗವಾಗಿ ಸಾಗುವಂತೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಎಸ್ಪಿ ಯತೀಶ ಎನ್. ಮಾತನಾಡಿ, ಗೃಹ ದಿಗ್ಬಂಧನ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲು ಸೂಚಿಸಿದರು. ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಹೊರಬರದಂತೆ ಅಗತ್ಯ ಪೊಲೀಸ ಸಿಬ್ಬಂದಿ ಒದಗಿಸಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ. ಮಾತನಾಡಿ, ನೆರೆಯಿಂದಾಗಿ ಜಲಾವೃತಗೊಂಡ ಜಮೀನುಗಳಿಗೆ ಕೃಷಿ, ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಸರ್ವೆ ಮಾಡಿ ಪರಿಹಾರಕ್ಕಾಗಿ ಕ್ರಮ ಜರುಗಿಸಬೇಕು. ಸತತ ಮಳೆಯಿಂದಾಗಿ ಜಲಾವೃತಗೊಳ್ಳಬಹುದಾದ ಸೇತುವೆಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಚನಾ ಫಲಕ ಅಳವಡಿಸಬೇಕು ಎಂದರು.

ಜಿ.ಪಂ. ಸಿಇಒ ಡಾ.ಆನಂದ ಕೆ, ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಇತರ ಅಧಿಕಾರಿಗಳು ಇದ್ದರು.

ಗೃಹ ದಿಗ್ಬಂಧನದಲ್ಲಿರುವವರ ಮೇಲೆ ನಿರಂತರ ನಿಗಾವಹಿಸಿ ನಿಗದಿತ ಅವಧಿಯೊಳಗೆ ವರದಿ ನೀಡಬೇಕು. ಸೋಂಕು ದೃಢಪಟ್ಟ ಪ್ರಕರಣಗಳ ಪ್ರಾಥಮಿಕ ಸಂರ್ಪತರನ್ನು 24 ಗಂಟೆಯೊಳಗೆ ಪತ್ತೆ ಮಾಡಿ ವರದಿ ಮಾಡಬೇಕು.ಸುಂದರೇಶಬಾಬು, ಜಿಲ್ಲಾಧಿಕಾರಿ