ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಪೂಜೆ ನೆರವೇರಿಸಿದರು. ಎಚ್.ಎಂ. ಮಲ್ಲನಗೌಡರ, ಡಾ.ಮಹೇಶ ಚಿತ್ತರಗಿ, ಸುನಿತಾ ಪಾಟೀಲ, ರಾಜಶೇಖರ ಕಾರದಗಿ, ದೀಪಕ ಜಾನ್ವೆಕರ, ಪ್ರಭು ಪ್ರಭುನವರ, ಬಸವರಾಜ ಆಯಟ್ಟಿ, ಬಸವರಾಜ ಪ್ರಭುನವರ, ಇತರರು ಇದ್ದರು. 
ಜಿಲ್ಲೆ

ಆಸ್ಪತ್ರೆ ಮೇಲ್ದರ್ಜೆಗೇರಿಸಲು ಕ್ರಮ

ಸವದತ್ತಿ: ಸುಮಾರು 157 ಕೋಟಿ ರೂ. ವೆಚ್ಚದಲ್ಲಿ ತಾಲೂಕು ಆಸ್ಪತ್ರೆಗೆ ನೂತನ ಕಟ್ಟಡ ನಿರ್ಮಿಸುವುದಲ್ಲದೆ, ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಇಲ್ಲಿನ ತಾಲೂಕಾಸ್ಪತ್ರೆ ಅವರಣದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರಿದ್ದಾರೆ. ಖಾಲಿ ಇರುವ ವೈದ್ಯರ ಹಾಗೂ ಸರ್ಜನ್‌ಗಳ ಹುದ್ದೆ ಭರ್ತಿ ಮಾಡಿ ಕಿಮ್ಸ್ ಮಾದರಿಯಲ್ಲಿ ಆಸ್ಪತ್ರೆಯನ್ನು ಸುಸಜ್ಜಿತವಾಗಿ ಪರಿವರ್ತಿಸುವ ಜವಾಬ್ದಾರಿ ನನ್ನದು ಎಂದರು.

ಅಲ್ಪ ಮಳೆಗೆ ಕೆಸರು ಗದ್ದೆಯಂತಾಗುವ ಆಸ್ಪತ್ರೆಯ ಆವರಣವನ್ನು 1 ಕೋಟಿ ರೂ. ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು. ಆಸ್ಪತ್ರೆಗೆ ಬರುವ ರೋಗಿಗಳು ಸಂಚಾರಕ್ಕೆ ಸರಿಯಾದ ರಸ್ತೆ ಇಲ್ಲದೆ ಪರದಾಡುವುದನ್ನು ನೋಡಿದ್ದೇನೆ. ಪರಿಸ್ಥಿತಿ ಅರಿತು ಜಿಲ್ಲಾಧಿಕಾರಿ ಜತೆ ಚರ್ಚಿಸಿ ಸಿಸಿ ರಸ್ತೆ ಮತ್ತು ಪೇವರ್ಸ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ಮುಖ್ಯ ವೈದ್ಯಾಧಿಕಾರಿ ಎಚ್.ಎಂ.ಮಲ್ಲನಗೌಡರ ಮಾತನಾಡಿ, 20 ವರ್ಷಗಳ ಬೇಡಿಕೆ ಈಗ ಈಡೇರಿದೆ. ಸಾಕಷ್ಟು ಜನರಿಂದ ದೂರುಗಳು ಬರುತ್ತಲೇ ಇದ್ದವು. ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕೆಲಸ ಆಗಿರಲಿಲ್ಲ. 250 ಬೆಡ್‌ಗಳ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಕಾಮಗಾರಿ ಕೂಡ ಕುಂಠಿತವಾಗಿತ್ತು. ಶಾಸಕರು ಈ ಕಾಮಗಾರಿಗೂ ಶಿಸ್ತು ಕ್ರಮ ತೆಗೆದುಕೊಂಡಿದ್ದಾರೆ ಎಂದರು.

ಡಾ. ಮಹೇಶ ಚಿತ್ತರಗಿ, ಸಿಡಿಪಿಒ ಸುನಿತಾ ಪಾಟೀಲ, ರಾಜಶೇಖರ ಕಾರದಗಿ, ದೀಪಕ ಜಾನ್ವೆಕರ, ಪ್ರಭು ಪ್ರಭುನವರ, ಬಸವರಾಜ ಆಯಟ್ಟಿ, ಬಸವರಾಜ ಪ್ರಭುನವರ, ಪುರಸಭೆ ಸದಸ್ಯರು ಇತರರು ಇದ್ದರು.