ಜಿಲ್ಲೆ

ಆಸ್ಪತ್ರೆ ಅಭಿವೃದ್ಧಿಗೆ ಮೊದಲ ಆದ್ಯತೆ

Shivamogga

ಸಾಗರ: ತಾಲೂಕಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಕಾರ್ಯಗಳಿಗೆ ಹೆಚ್ಚಿನ ಸಹಕಾರ ನೀಡುತ್ತೇನೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ಉಪವಿಭಾಗೀಯ ಆಸ್ಪತ್ರೆಗೆ 2019ರ ಕಾಯಕಲ್ಪ ಪ್ರಶಸ್ತಿ ಬರಲು ಕಾರಣವಾಗಿರುವ ಆಸ್ಪತ್ರೆಯ ವಿವಿಧ ವಿಭಾಗದ 24 ವೈದ್ಯ ಸಿಬ್ಬಂದಿಯನ್ನು ಮಂಗಳವಾರ ಆಸ್ಪತ್ರೆಯಲ್ಲಿ ಸನ್ಮಾನಿಸಿ ಮಾತನಾಡಿದರು.

ಗುಣಮಟ್ಟದ ಸೇವೆ ಸಿಗಬೇಕಾದರೆ ಎಲ್ಲರೂ ತಂಡವಾಗಿ ಕೆಲಸ ಮಾಡಬೇಕು. ಮುಂದಿನ ವರ್ಷ ಉಪವಿಭಾಗೀಯ ಆಸ್ಪತ್ರೆ ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೆ ಬರಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ. ರೋಗಿಗಳಿಂದ ಸಂಗ್ರಹಿಸುವ ಯೂಸರ್ಸ್ ಚಾರ್ಜ್ ಆಸ್ಪತ್ರೆ ಅಭಿವೃದ್ಧಿಗೆ ಬಳಸುವುದು ಬೇಡ. ಅದನ್ನು ರೋಗಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಬಳಸಿಕೊಳ್ಳಿ. ಆಸ್ಪತ್ರೆ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ಸರ್ಕಾರದಿಂದ ಕೊಡಿಸಲಾಗುವುದು ಎಂದರು.

ಎಂಎಸ್​ಐಎಲ್ ಅಧ್ಯಕ್ಷರಾಗಿ ನೇಮಕಗೊಂಡ ಹರತಾಳು ಹಾಲಪ್ಪ ಅವರನ್ನು ಆರೋಗ್ಯ ಇಲಾಖೆ ನೌಕರರ ಒಕ್ಕೂಟ, ಉಪವಿಭಾಗೀಯ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿಯಿಂದ ಸನ್ಮಾನಿಸಲಾಯಿತು.

ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್, ಉಪವಿಭಾಗಾಧಿಕಾರಿ ಡಾ. ಎಲ್.ನಾಗರಾಜ್, ಸಿವಿಲ್ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ, ಟಿಎಚ್​ಒ ಡಾ. ಕೆ.ಎಸ್.ಮೋಹನ್, ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಮ.ಸ.ನಂಜುಂಡಸ್ವಾಮಿ, ತಾಲೂಕು ಅಧ್ಯಕ್ಷ ವೈ.ಮೋಹನ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಹಶೀಲ್ದಾರ್ ಕಚೇರಿಯ ಟಿ.ಪರಮೇಶ್ವರಪ್ಪ, ಆರೋಗ್ಯ ರಕ್ಷಾ ಸಮಿತಿಯ ಎಲ್.ವಿ.ಅಕ್ಷರ, ಜ್ಯೋತಿ ನಂಜುಂಡಸ್ವಾಮಿ, ರೇವಪ್ಪ ಹೊಸಕೊಪ್ಪ, ಸಂತೋಷ್ ಶೇಟ್, ರಮ್ಯಾ ಹೆಗಡೆ, ಪ್ರಮೋದ್, ಸುರೇಶ್, ವಿನೋದ್​ಕುಮಾರ್ ಇತರರಿದ್ದರು.