ಜಿಲ್ಲೆ

ಆಸ್ತಿ ಘೊಷಿಸದ ಪಾಲಿಕೆ ಸದಸ್ಯರು!

ಆನಂದ ಅಂಗಡಿ ಹುಬ್ಬಳ್ಳಿ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯತ್ವ ಪಡೆದುಕೊಂಡು ಒಂದು ವರ್ಷ ಗತಿಸಿದರೂ ಅರ್ಧಕ್ಕಿಂತಲೂ ಹೆಚ್ಚು ಸದಸ್ಯರು ಇದುವರೆಗೂ ಮಹಾಪೌರರ ಬಳಿ ತಮ್ಮ ಕುಟುಂಬದ ಆಸ್ತಿ ಘೋಷಣೆ ದಾಖಲು ಮಾಡಿಲ್ಲ.

ನಿಯಮಗಳ ಪ್ರಕಾರ ಮಹಾನಗರ ಪಾಲಿಕೆಗೆ ಚುನಾಯಿತಗೊಳ್ಳುವವರು ಸದಸ್ಯರಾದ ಒಂದು ತಿಂಗಳೊಳಗೆ ತಮ್ಮ ಕುಟುಂಬದ ಆಸ್ತಿಗಳ ವಿವರಗಳನ್ನು ಮಹಾಪೌರರಿಗೆ ಸಲ್ಲಿಸಬೇಕು. ಇನ್ನೂ ಕೆಲವೇ ದಿನಗಳಲ್ಲಿ ಮೊದಲ ಅವಧಿಯ ಮಹಾಪೌರ ಹಾಗೂ ಉಪ ಮಹಾಪೌರರ ಅಧಿಕಾರದ ಅವಧಿ (ಮೇ 28ಕ್ಕೆ) ಪೂರ್ಣಗೊಳ್ಳಲಿದೆ.

ಒಟ್ಟು 82 ಸದಸ್ಯರು ಇರುವ ಮಹಾನಗರ ಪಾಲಿಕೆಯಲ್ಲಿ 39 ಜನ ಬಿಜೆಪಿ ಸದಸ್ಯರು, ಕಾಂಗ್ರೆಸ್​ನ 33 ಸದಸ್ಯರು, ಎಐಎಂಐಎಂನ ಮೂವರು ಸದಸ್ಯರು, ಒಬ್ಬ ಜೆಡಿಎಸ್ ಹಾಗೂ 6 ಜನ ಪಕ್ಷೇತರರು ಇದ್ದಾರೆ. ಇವರಲ್ಲಿ 36 ಜನ ಮಾತ್ರ ತಮ್ಮ ಕುಟುಂಬದ ಆಸ್ತಿ ವಿವರಗಳನ್ನು ಕೌನ್ಸಿಲ್ ಸೆಕ್ರೆಟರಿ ಬಳಿ ನೀಡಿದ್ದಾರೆ. ಇನ್ನುಳಿದ 46 ಕಾಪೋರೇಟರ್​ಗಳು ಇದುವರೆಗೆ ತಮ್ಮ ಕುಟುಂಬದ ಆಸ್ತಿ ವಿವರಗಳನ್ನು ಸಲ್ಲಿಸಿಯೇ ಇಲ್ಲ. ಇದರಲ್ಲಿ ಆಡಳಿತ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಇತರ ಸದಸ್ಯರೂ ಇದ್ದಾರೆ.

ಕಳೆದ ಜನವರಿ 1 ರಂದು ‘ವಿಜಯವಾಣಿ’ ದಿನಪತ್ರಿಕೆಯು ‘ಕಾಪೋರೇಟರ್​ಗಳ ಮೇಲೆ ತೂಗುಗತ್ತಿ’ ಶೀರ್ಷಿಕೆಯಡಿ ಈ ಕುರಿತು ವಿಶೇಷ ವರದಿ ಪ್ರಕಟಿಸಿತ್ತು. ಅದಕ್ಕೂ ಮೊದಲು ಪಾಲಿಕೆಯ ಒಬ್ಬ ಸದಸ್ಯರೂ ತಮ್ಮ ಕುಟುಂಬದ ಆಸ್ತಿ ವಿವರಗಳನ್ನು ಸಲ್ಲಿಸಿರಲಿಲ್ಲ. ಆ ಸಂದರ್ಭದಲ್ಲಿ ಮಹಾನಗರ ಜಿಲ್ಲಾ ಕಾಂಗ್ರೆಸ್ ಹಾಗೂ ಬಿಜೆಪಿ ಅಧ್ಯಕ್ಷರು ತಮ್ಮ ಪಕ್ಷಗಳ ಸದಸ್ಯರಿಗೆ ಈ ಕುರಿತು ತಿಳಿವಳಿಕೆ ನೀಡಿ, ಆದಷ್ಟು ಬೇಗ ಆಸ್ತಿ ವಿವರಗಳ ದಾಖಲೆ ಸಲ್ಲಿಸುವಂತೆ ತಿಳಿವಳಿಕೆ ನೀಡುವುದಾಗಿ ತಿಳಿಸಿದ್ದರು. ಮಹಾಪೌರ ಹಾಗೂ ಸಭಾನಾಯಕರು ಸಹ ಈ ಬಗ್ಗೆ ಮತ್ತೊಮ್ಮೆ ಪಾಲಿಕೆ ಸದಸ್ಯರಿಗೆ ಸೂಚನೆ ನೀಡುವುದಾಗಿ ಹೇಳಿದ್ದರು.

ಇನ್ನೂ 46 ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ದಾಖಲಿಸದೇ ಇರುವುದನ್ನು ಗಮನಿಸಿದರೆ, ಆ ಸದಸ್ಯರು ತಮ್ಮ ಪಕ್ಷಗಳ ಅಧ್ಯಕ್ಷರ ಮಾತಿಗಾಗಲಿ, ಮೇಯರ್, ಸಭಾ ನಾಯಕರ ಸೂಚನೆಗಳಿಗಾಗಲಿ ಗೌರವ ಕೊಡುವುದು ಅಷ್ಟಕ್ಕಷ್ಟೇ ಎಂದು ಮೇಲ್ನೋಟಕ್ಕೆ ತೋರುತ್ತದೆ.

ಇದು ಕೇವಲ ಒಂದು ವರ್ಷದ ಮಾತಲ್ಲ, ಪ್ರತಿ ವರ್ಷ ಪಾಲಿಕೆ ಸದಸ್ಯರು ತಾವು ಚುನಾಯಿತರಾಗಿರುವ ತಿಂಗಳಲ್ಲಿ ತಮ್ಮ ಕುಟುಂಬದ ಆಸ್ತಿ ವಿವರ ದಾಖಲಿಸಬೇಕು. ಒಂದು ವೇಳೆ ನಿಗದಿತ ಅವಧಿಯಲ್ಲಿ ಆಸ್ತಿ ಘೋಷಣೆ ದಾಖಲು ಮಾಡದಿದ್ದರೆ ಅಥವಾ ಸುಳ್ಳು ವಿವರಗಳುಳ್ಳ ಆಸ್ತಿ ದಾಖಲೆ ಘೋಷಣೆ ಮಾಡಿದರೆ ಅಂತಹವರ ಸದಸ್ಯತ್ವವೇ ರದ್ದಾಗಬಹುದು. ಇದುವರೆಗೆ ಆಸ್ತಿ ಘೋಷಣೆ ದಾಖಲು ಮಾಡದ ಸದಸ್ಯರ ವಿವರಗಳನ್ನು ಮಹಾಪೌರರು ಸರ್ಕಾರಕ್ಕೆ ಸಲ್ಲಿಸಿ, ಅವರ ಸದಸ್ಯತ್ವ ರದ್ದು ಮಾಡುವಂತೆ ಕೋರಿದರೆ ಸದಸ್ಯರ ಸದಸ್ಯತ್ವವೇ ರದ್ದಾಗುವ ಸಾಧ್ಯತೆ ಇದೆ.

ನಿಯಮ ಏನು ಹೇಳುತ್ತದೆ ?:

ಕರ್ನಾಟಕ ಪೌರ ನಿಗಮಗಳ ಅಧಿನಿಯಮದ 19ನೇ ಅಂಶದ ಆಸ್ತಿಗಳು ಇತ್ಯಾದಿಗಳ ಘೋಷಣೆಯ ಅಂಕದಲ್ಲಿ ಸ್ಪಷ್ಟವಾಗಿ ವಿವರ ನೀಡಲಾಗಿದೆ. ‘ಪ್ರತಿಯೊಬ್ಬ ಕೌನ್ಸಿಲರನು ತನ್ನ ಪದಾವಧಿಯು ಪ್ರಾರಂಭವಾದ ತರುವಾಯ ಒಂದು ತಿಂಗಳಿಗೆ ಮೀರದ ಮತ್ತು ತರುವಾಯ ಬರುವ ಪ್ರತಿ ವರ್ಷದ ಅದೇ ತಿಂಗಳಲ್ಲಿ ತಾನು ಮತ್ತು ತನ್ನ ಕುಟುಂಬದ ಯಾವುದೇ ಸದಸ್ಯನು ಒಡೆತನ ಹೊಂದಿರುವ ಎಲ್ಲ ಆಸ್ತಿಗಳ ಘೋಷಣೆಯನ್ನು ಮೇಯರ್ ಅವರಲ್ಲಿ ದಾಖಲು ಮಾಡತಕ್ಕದ್ದು. ಅಂಥ ಘೋಷಣೆಯು ನಿಗಮದ ದಾಖಲೆಗಳ ಭಾಗವಾಗಿರತಕ್ಕದ್ದು’ ಎಂಬ ಸ್ಪಷ್ಟ ಸೂಚನೆ ನೀಡಲಾಗಿದೆ.

‘ಘೋಷಣೆ ದಾಖಲು ಮಾಡಲು ಯಾವುದೇ ಕೌನ್ಸಿಲರನು ತಪ್ಪಿದರೆ ಅಥವಾ ಅದು ಸುಳ್ಳು ಅಥವಾ ಸರಿಯಾಗಿಲ್ಲ ಎಂದು ತಿಳಿದೂ ತಿಳಿದು ದಾಖಲು ಮಾಡಿದರೆ ಅವನು ಕೌನ್ಸಿಲರನಾಗಿರುವುದು ನಿಂತುಹೋಗತಕ್ಕದ್ದು’ ಎಂಬ ಎಚ್ಚರಿಕೆಯೂ ಈ ನಿಯಮದಲ್ಲಿ ಇದೆ.

ಅವಧಿ ಪೂರ್ಣಗೊಂಡರೂ ಪಾಲನೆಯಾಗದ ನಿಯಮ :

ಕಳೆದ ಮೇ 28ರಂದು ಮೇಯರ್, ಉಪ ಮೇಯರ್ ಅಧಿಕಾರ ವಹಿಸಿಕೊಂಡಿದ್ದಾರೆ. ಅದೇ ದಿನ ಎಲ್ಲ ಸದಸ್ಯರು ಸದಸ್ಯತ್ವ ಪಡೆದುಕೊಂಡಿದ್ದಾರೆ. ನಿಯಮಗಳ ಪ್ರಕಾರ ಜೂನ್ 28ರೊಳಗೆ ಎಲ್ಲ ಸದಸ್ಯರು ಮಹಾಪೌರರ ಬಳಿ ತಮ್ಮ ಆಸ್ತಿ ಘೋಷಣೆಯ ದಾಖಲೆ ಸಲ್ಲಿಸಬೇಕಿತ್ತು. ಇನ್ನೂ ಕೆಲವೇ ದಿನಗಳಲ್ಲಿ ಮಹಾಪೌರರ ಮೊದಲ ಅವಧಿ ಪೂರ್ಣಗೊಂಡು, ಎರಡನೇ ಅವಧಿಯ ಹೊಸ ಮೇಯರ್ ಗೌನ್ ಧರಿಸಲಿದ್ದಾರೆ. ಆದರೆ, ಕುಟುಂಬದ ಆಸ್ತಿ ವಿವರ ದಾಖಲಿಸುವ ನಿಯಮ ಮಾತ್ರ ಇನ್ನೂ ಪಾಲನೆಯಾಗಿಲ್ಲ.